Advertisement

ಪ್ರತಿಷ್ಠೆ ಪಣದಲ್ಲಿ ಕನವರಿಸುತ್ತಿದೆ ಅಡಿಗರ ಹೆಸರಿನ ಪುರಭವನ ಕನಸು

03:27 PM Dec 19, 2022 | Team Udayavani |

ಬೈಂದೂರು: ನವ್ಯ ಸಾಹಿತ್ಯದ ಮುಂಗೋಳಿ ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರು ಬೈಂದೂರು ಭಾಗದಲ್ಲಿ ಕಳೆದ ಆರು ತಿಂಗಳಿಂದ ಬಹಳಷ್ಟು ಚರ್ಚೆಯಲ್ಲಿದೆ. ಕಾರಣವಿಷ್ಟೆ ; ಬೈಂದೂರಿನ ಹೃದಯ ಭಾಗವಾದ ಗಾಂಧಿ ಮೈದಾನದ ಬಳಿ ನಿರ್ಮಿಸಲು ಉದ್ದೇಶಿಸಿದ್ಧ ಮೊಗೇರಿ ಗೋಪಾಲಕೃಷ್ಣ ಅಡಿಗರ ಪುರಭವನ ನಿರ್ಮಾಣ ಯೋಜನೆಯ ಪರ ವಿರೋಧ ನಿಲುವು ಬಹುನಿರೀಕ್ಷಿತ ಯೋಜನೆ ಯೊಂದಕ್ಕೆ ಹಿನ್ನಡೆ ಉಂಟಾಗಿದೆ. ಕೆಲವರಿಗೆ ಪ್ರತಿಷ್ಠೆಯಾದರೆ ಇನ್ನೂ ಕೆಲವರು ಮರೆಯಲ್ಲಿ ನಿಂತು ಮಜಾ ತೆಗೆದುಕೊಳ್ಳುತ್ತಿರುವ ಚಿಂತನೆಯಿಂದ “ನೀ ಕೊಡೆ ನಾ ಬಿಡೆ ನಿಲುವು’ ಜನಸಾಮಾನ್ಯರಿಗೆ ಮಾತ್ರ ಗೊಂದಲ ಉಂಟು ಮಾಡುತ್ತಿದೆ.

Advertisement

ಏನಿದು ಬೈಂದೂರಿನ ಪುರಭವನ ಸಮಸ್ಯೆ?
ತಾ| ಕೇಂದ್ರವಾದ ಬೈಂದೂರು ಭವಿಷ್ಯದ ದೃಷ್ಟಿಯಿಂದ ಒಂದು ವ್ಯವಸ್ಥಿತ ಅಭಿವೃದ್ಧಿ ಅತ್ಯಗತ್ಯ. ಈಗಾ ಗಲೇ ಮಿನಿ ವಿಧಾನಸೌಧ ನಿರ್ಮಾಣ ಹಂತದಲ್ಲಿದೆ. ನೂರು ಹಾಸಿಗೆಯ ಆಸ್ಪತ್ರೆ ಸ್ಥಳ ನಿಗದಿಯಾಗಿದ್ದು ಇನ್ನಷ್ಟೇ ಮಂಜೂರಾಗಬೇಕಿದೆ. ನ್ಯಾಯಾಲಯ ಸಂಕೀರ್ಣ, ತಾ.ಪಂ. ಸೇರಿದಂತೆ ವಿವಿಧ ಯೋಜನೆಗಳಿಗೆ ಸ್ಥಳ ನಿಗದಿ ಯಾಗಿದೆ. ಒಂದು ವ್ಯವಸ್ಥಿತ ಪ್ರಗತಿಗೆ ಸಂಸದರ ಮುಂದಾಳತ್ವದಲ್ಲಿ ಮಾಸ್ಟರ್‌ ಪ್ಲ್ರಾನ್‌ ಸಿದ್ಧಗೊಂಡಿದೆ.

ಕನ್ನಡದ ಶ್ರೇಷ್ಠ ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರು ಹುಟ್ಟಿ ಬೆಳೆದ ಊರಿನಲ್ಲಿ ಅವರ ನೆನಪು ಶಾಶ್ವತವಾಗಿಸುವ ಯೋಜನೆ ಕುರಿತು ಈ ಹಿಂದೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಜತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ ಮೂಲಕ ಗುರುತಿಸಿಕೊಂಡ ಬೈಂದೂರಿಗೆ ಇನ್ನಷ್ಟು ಸಾಂಸ್ಕೃತಿಕ ಗರಿಮೆ ನೀಡುವ ಉದ್ದೇಶ ಈ ಯೋಜನೆ ಹೊಂದಿತ್ತು. ಅಡಿಗರು ಹುಟ್ಟಿದ ಮೊಗೇರಿಯಲ್ಲಿ ನಿರ್ಮಾಣವಾದರೆ 4.98 ಕೋ.ರೂ. ಯೋಜನೆ ಕ್ಷೇತ್ರದ ಒಂದು ಮೂಲೆಗೆ ಹೋಗುವ ಜತೆಗೆ ಜನೋಪಯೋಗಕ್ಕೆ ಕೂಡ ಪೂರಕ ವಾಗಲಾಗದು ಎಂದು ಅಡಿಗರು ಓದಿರುವ ಬೈಂದೂರು ಸರಕಾರಿ ಪ.ಪೂ. ಕಾಲೇಜು ಸಮೀಪ ನಿರ್ಮಾಣವಾದರೆ ತಾಲೂಕು ಕೇಂದ್ರದ ಪ್ರಗತಿಗೆ ಇನ್ನಷ್ಟು ಸಹಕಾರಿಯಾಗುತ್ತದೆ ಎನ್ನುವ ಚಿಂತನೆಯಿಂದ ಸಂಸದರ ವಿಶೇಷ ಪ್ರಯತ್ನದ ಫಲವಾಗಿ ಬೈಂದೂರು ಗಾಂಧಿ ಮೈದಾನದಲ್ಲಿ ಅಡಿಗರ ಹೆಸರಿನ ಪುರಭವನ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಅಪಸ್ವರದ ನಡುವೆ ಬ್ಯಾಲೆನ್ಸ್‌ ರಾಜಕಾರಣದಲ್ಲಿ ಸಮಸ್ಯೆ ಉಲ್ಬಣ
ಬೈಂದೂರಿನ ಗಾಂಧಿ ಮೈದಾನ ಈ ಹಿಂದೆ ಕ್ಯಾಂಪಸ್‌ ಗ್ರೌಂಡ್‌ ಎಂದು ದಾಖಲೆಗಳಿದ್ದರೂ ಜಿಲ್ಲಾಡಳಿತ ಊರಿನ ಅಭಿವೃದ್ಧಿ ಹಿತದೃಷ್ಟಿಯಿಂದ ಕಾನೂನಿನ ಚೌಕಟ್ಟಿನಲ್ಲಿ 3.48 ಎಕ್ರೆ ಜಾಗವನ್ನು ಕ್ರೀಡಾ ಇಲಾಖೆ ಹಾಗೂ 1.50 ಎಕರೆ ಜಾಗವನ್ನು ನಗರಾಭಿವೃದ್ಧಿ ಇಲಾಖೆ ಮೂಲಕ ಪುರಭವನಕ್ಕೆ ಮೀಸಲಿರಿಸಲಾಗಿದೆ.

ಬೈಂದೂರು ತಾ| ಕೇಂದ್ರವಾಗಿದ್ದರೂ ಸಹ ಬೈಂದೂರಿ ನಲ್ಲಿರುವ ಆಂತರಿಕ ರಾಜಕೀಯ ಕಲಹ ಕ್ಷೇತ್ರದ ಇತರ ಭಾಗದಲ್ಲಿ ಕಾಣಸಿಗದು ಅನ್ನೋದು ವಾಸ್ತವ ಸತ್ಯ. ಬೈಂದೂರಿನಲ್ಲಿ ರಾಜಕೀಯವಾಗಿ ಆರ್ಥಿಕವಾಗಿ ಎಷ್ಟು ಪ್ರಗತಿಯಾದರೂ ಚಿಂತನೆಯ ವಿಚಾರದಲ್ಲಿ ಎಡವುತ್ತಿರುವುದು ಕಾಕತಾಳಿಯವಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ ಬೈಂದೂರು ರಾಜಕೀಯ ವ್ಯವಸ್ಥೆಯಲ್ಲಿ ಮೇಲ್ನೋಟಕ್ಕೆ ಸರಿ ಇದ್ದರೂ ಆಂತರಿಕ ರಾಜಕೀಯ ಮಾತ್ರ ಸದಾ ಜಾಗೃತವಾಗಿದೆ. ಮೊನ್ನೆಯಷ್ಟೆ ಪ.ಪಂ. ಪಂಚಾಯತ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿತ್ತು. ರಸ್ತೆ ನಿರ್ಮಾಣದ ಪರ ವಿರೋಧ ಕೇಳಿಬಂದಿತ್ತು.

Advertisement

ಯಾವುದೇ ಯೋಜನೆ ಬಂದರೂ ಕೂಡ ಒಂದು ವರ್ಗ ಊರಿನ ಅಭಿವೃದ್ಧಿ ಎಣಿಸಿದರೆ ಇನ್ನೊಂದು ವರ್ಗ ವೈಯಕ್ತಿಕ ಲಾಭ ಎಣಿಸುತ್ತಿರುವುದು ಬೈಂದೂರಿನ ಪ್ರಗತಿಯ ಹಿನ್ನಡೆಗೆ ಕಾರಣವಾಗಿದೆ. ಹಾಗಂತ ನಿತ್ಯ ನೂರಾರು ಕಾನೂನು ಬಾಹಿರ ಚಟುವಟಿಕೆಗಳು ನಡೆದರೂ, ಗ್ರಾಮೀಣ ಭಾಗದಲ್ಲಿ ಸರಕಾರಿ ಜಾಗ ಅತಿಕ್ರಮಣವಾದರೂ, ಕೋಟಿಗಟ್ಟಲೆ ಅನುದಾನ ಕಳಪೆಯಾದರೂ ಸಹ ತುಟಿಬಿಚ್ಚದ ಚಿಂತಕರು ಅಭಿವೃದ್ಧಿ ವಿಚಾರದಲ್ಲಿ ತೆರೆಮರೆಯಲ್ಲಿ ಕತ್ತಿ ಮಸೆಯುವುದು ಮಾತ್ರ ಬೈಂದೂರಿಗೆ ಕಳಂಕ.

ಯೋಜನೆ ಅನುಷ್ಠಾನವಾಗುತ್ತಿಲ್ಲ
ತಾಲೂಕು ಕೇಂದ್ರದಲ್ಲಿ ಇದುವರೆಗೂ ಒಂದು ಸುವ್ಯವಸ್ಥಿತ ಬಸ್‌ ನಿಲ್ದಾಣ, ಪಾರ್ಕ್‌, ಒಳಾಂಗಣ, ಕ್ರೀಡಾಂಗಣ, ಕೃಷಿ ಮಾರುಕಟ್ಟೆ, ಸರಿಯಾದ ಆಸ್ಪತ್ರೆ ಶೌಚಾಲಯಗಳಿಲ್ಲ. ಇದರ ನಡುವೆ ಕ್ಷೇತ್ರಕ್ಕೆ ಬರುವ ಒಂದಿಷ್ಟು ಯೋಜನೆಗಳು ಕೂಡ ಇಲ್ಲಿನ ಒಳಜಗಳ ದಿಂದ ಅನುಷ್ಠಾನವಾಗುತ್ತಿಲ್ಲ. ಮಾತ್ರವಲ್ಲದೆ ಅಧಿಕಾರಿ ಗಳು ಕೂಡ ಒಲ್ಲದ ಮನಸ್ಸಿನಿಂದ ಕಾರ್ಯ ನಿರ್ವಹಿಸುವಂತಾಗಿದೆ. ಇಷ್ಟಕ್ಕೂ ವಿರೋಧಿಸುವವರಲ್ಲಿ ಕೂಡ ಸ್ಪಷ್ಟ ಕಾರಣಗಳಿಲ್ಲ. ಬದಲಾಗಿ ಮೈದಾನ
ಉಳಿಸಬೇಕು ಎನ್ನುವ ತಾಂತ್ರಿಕ ಕಾರಣ ಕೂಡ ಹೇಳದೆ ಕೇವಲ ಸಾಮಾಜಿಕ ಜಾಲತಾಣದ ಹೇಳಿಕೆಗಳು ಅಭಿವೃದ್ಧಿಗೆ ಪೂರಕವಲ್ಲ. ಹೀಗಾಗಿ ಪುರಭವನ ಕುರಿತಂತೆ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು, ಸಂಘ ಸಂಸ್ಥೆ ಸೇರಿದಂತೆ ಶೀಘ್ರ ಒಂದು ಸಭೆ ನಡೆಸಿ ಇದರ ಸಾಧಕ -ಬಾಧಕ ನಿರ್ಣಯ ಕೈಗೊಳ್ಳ ಬೇಕು. ಗಾಂಧಿ ಮೈದಾನ ಎಷ್ಟು ವ್ಯಾಪ್ತಿ ಬಳಕೆಯಾಗುತ್ತದೆ, ಪರ್ಯಾಯ ವ್ಯವಸ್ಥೆಗಳೇನು ಅನ್ನುವುದನ್ನುಇತ್ಯರ್ಥಗೊಳಿಸುವ ಇಚ್ಚಾಶಕ್ತಿ, ಪಾರದರ್ಶಕ
ಮನಃಸ್ಥಿತಿ ಇದ್ದಾಗ ಮಾತ್ರ ಬೈಂದೂರು ಇನ್ನಷ್ಟು ಪ್ರಗತಿ ಕಾಣಲು ಸಾಧ್ಯ. ಬೈಂದೂರಿನ ಪ್ರಜ್ಞಾ ವಂತರು ಇನ್ನಾದರೂ ಜಾಗೃತಿಗೊಂಡು ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು. ಭವಿಷ್ಯದ ಚಿಂತನೆಯಲ್ಲಿ ಯೋಜನೆ ರೂಪಿಸಬೇಕಿದೆ.

ಅಪಸ್ವರ ಸಮಂಜಸವಲ್ಲ
ಬೈಂದೂರಿನ ಗಾಂಧಿ ಮೈದಾನದ ವಿಷಯ ವಾಸ್ತವವಾಗಿ ಸಮಸ್ಯೆಯೇ ಅಲ್ಲ. ಸಂಸದರು ಹಾಗೂ ಸ್ಥಳೀಯರ ಆದ್ಯತೆ ಮೇರೆಗೆ ಬೈಂದೂರಿಗೆ ಅನುಕೂಲವಾಗುವ ಉದ್ದೇಶದಿಂದ ಈ ಯೋಜನೆಯನ್ನು ಬೈಂದೂರಿಗೆ ತಂದಿದ್ದಾರೆ. ಆದರೆ ಬಣಗಳ ನಡುವಿನ ಶೀಥಲ ಸಮರ ಬಹುತೇಕ ಕಡೆ ಪ್ರಗತಿಗೆ ಪರೋಕ್ಷವಾಗಿ ಹಿನ್ನೆಡೆ ನೀಡುತ್ತಿದೆ.ಗಾಂಧಿ ಮೈದಾನದಲ್ಲಿ ಪುರಭವನ ನಿರ್ಮಾಣ ಕುರಿತು ಶಾಸಕರು ಕೂಡ ಸ್ಪಷ್ಟ ನಿಲುವು ತೆಗೆದುಕೊಂಡರೆ ಖಂಡಿತವಾಗಿ ಬೈಂದೂರಿನಲ್ಲಿ ನಿರ್ಮಾಣವಾಗುತ್ತದೆ. ಸಂಸದರು ಬೈಂದೂರಿನಲ್ಲಿ ಅಧಿಕಾರಿಗಳು ಮತ್ತು ಮುಖಂಡರ ಸಭೆ ಕರೆದು ಸಾಧಕ -ಭಾದಕ ಚರ್ಚೆ ನಡೆಸಿ ವಾಸ್ತವತೆ ಅರಿತು ನಿರ್ಧಾರ ಅಂತಿಮಗೊಳಿಸಿದರೆ ಚರ್ಚೆಗೆ ಆಸ್ಪದಗಳಿರುತ್ತಿಲ್ಲ. ಬದಲಾಗಿ ಎರಡು ಗುಂಪುಗಳ ನಡುವಿನ ತಿಕ್ಕಾಟ ಸಾರ್ವಜನಿಕರಿಗೆ ಗೊಂದಲ ಉಂಟು ಮಾಡಿದರೆ ಅಡಿಗರ ಹೆಸರಿಗೆ ಹುಟ್ಟೂರಲ್ಲಿ ಅಪಸ್ವರ ಸಮಂಜಸವಲ್ಲ.

ಸಂಸದರ ಜತೆ ಚರ್ಚೆ
ಈಗಾಗಲೇ ಬೈಂದೂರು ಪುರಭವನ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಒಂದು ಬದಿಯಲ್ಲಿ ನಿರ್ಮಾಣವಾದರೆ ಅನುಕೂಲವಾಗುತ್ತದೆ. ಸಂಸದರ ಜತೆ ಚರ್ಚಿಸುತ್ತೇನೆ.ಎಲ್ಲ ಮುಖಂಡರ ಅಭಿಪ್ರಾಯ ಪಡೆದು ಜನರ ಅಭಿಪ್ರಾಯದಂತೆ ಸಾಧಕ ಬಾಧಕ ಅರಿತು ಅಂತಿಮಗೊಳಿಸಲಾಗುವುದು.
-ಬಿ.ಎಂ. ಸುಕುಮಾರ ಶೆಟ್ಟಿ ,
ಶಾಸಕರು ಬೈಂದೂರು

ಇನ್ನಷ್ಟು ಪ್ರಗತಿಯಾಗಲಿದೆ
ಪುರಭವನ ನಿರ್ಮಾಣದಿಂದ ಗಾಂಧಿ ಮೈದಾನಕ್ಕೆ ಯಾವುದೇ ತೊಂದರೆಯಾಗದು.ಕೆಲವೇ ಕೆಲವು ವ್ಯಕ್ತಿಗಳ ವೈಯಕ್ತಿಕ ನಿಲುವುಗಳಿಂದ ಊರಿನ ಅಭಿವೃದ್ಧಿಯ ದಿಕ್ಕು ತಪ್ಪಿಸಬಾರದು. ತಾಂತ್ರಿಕ ಅಂಶದೊಂದಿಗೆ ವಾಸ್ತವ ಅರಿತು ಮಾತಾಡಬೇಕಿದೆ.ಪುರಭವನ ನಿರ್ಮಾಣದಿಂದ ಬೈಂದೂರು ಇನ್ನಷ್ಟು ಪ್ರಗತಿಯಾಗಲಿದೆ.
ಬಾಬು ಶೆಟ್ಟಿ, ಜಿ.ಪಂ. ಮಾಜಿ ಸದಸ್ಯರು

ಸ್ಥಳ ಬದಲಾವಣೆ ಮಾಡಲಿ
ಬೈಂದೂರಿನ ಗಾಂಧಿ ಮೈದಾನಕ್ಕೆ ಬಹಳ ಇತಿಹಾಸ ಇದೆ. ಶಾಲೆ, ಕ್ರೀಡೆ, ಸಾರ್ವಜನಿಕ ದೊಡ್ಡ ಕಾರ್ಯಕ್ರಮಗಳಿಗೆ ಇತರ ಸ್ಥಳಗಳಿಲ್ಲ.ಈ ಮೈದಾನದ ಯಾವ ಮೂಲೆಯಲ್ಲೂ ಪುರಭವನ ಆಗಕೂಡದು.ಈ ಬಗ್ಗೆ ಹೋರಾಟಕ್ಕೆ ವೇದಿಕೆ ಸಿದ್ಧಗೊಂಡಿದೆ.ಪುರಭವನ ಸ್ಥಳ ಬದಲಾವಣೆ ಮಾಡಲಿ. ಸಂಸದರು, ಶಾಸಕರು ವಾಸ್ತವತೆ ಅರಿಯಲಿ.-
ಗಿರೀಶ್‌ ಬೈಂದೂರು.,
ಗಾಂಧಿ ಮೈದಾನ ಹೋರಾಟ ಸಮಿತಿ

ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next