Advertisement
ಏಣಗಿ ಬಾಳಪ್ಪನವರ ನಿಧನದ ಸುದ್ದಿ ಕೇಳಿ ಮನಸ್ಸು ಮಂಕಾಯಿತು. ರಂಗಭೂಮಿಯನ್ನು ಪ್ರೀತಿಸುವವರು ಅನಾಥಪ್ರಜ್ಞೆ ಅನುಭವಿಸುವ ಕ್ಷಣಗಳಿವು. ಬಾಳಪ್ಪನವರು ನೂರಾ ನಾಲ್ಕು ವರ್ಷ ಬಾಳಿದರು. ಆದರಲ್ಲಿ ತೊಂಬತ್ತು ವರ್ಷಗಳ ಕಾಲ ಅವರು ರಂಗಭೂಮಿಯ ಜೊತೆಗೇ ಸಕ್ರಿಯರಾಗಿದ್ದರು. ಅವರು ಕಟ್ಟಿದ ನಾಟಕ ಕಂಪನಿ ನಿಂತರೂ ಆವರ ನಾಟಕ ಚಟುವಟಿಕೆಗಳು ನಿಂತಿರಲಿಲ್ಲ. ಕುಂತಲ್ಲಿ ನಿಂತಲ್ಲಿ ರಂಗಭೂಮಿಯ ಕುರಿತೇ ಧೇನಿಸುತ್ತಿದ್ದರು. ಮಾತನಾಡುತ್ತಿದ್ದರು. ಕೇಳುಗರು ಎದುರಿಗಿದ್ದರೆ ರಂಗಗೀತೆಗಳನ್ನು ಹಾಡುತ್ತಿದ್ದರು. ತಮ್ಮ ರಂಗಭೂಮಿ ಆನುಭವಗಳನ್ನು ಕತೆ ಮಾಡಿ ಹೇಳುತ್ತಿದ್ದರು. ಇಳಿ ವಯಸ್ಸಿನಲ್ಲಿಯೂ ರಂಗಭೂಮಿಯ ಮಾತು ಬಂದರೆ ಉಲ್ಲಸಿತರಾಗುತ್ತಿದ್ದರು. ತರುಣರಿಗೆ ರಂಗಸಂಗೀತ ಕಲಿಸುತ್ತಿದ್ದರು. ಅವರಿಗೊಂದು ಕನಸು ಇತ್ತು ರಂಗ ಸಂಗೀತ ಶಾಲೆ ಕಟ್ಟಬೇಕೆಂದು. ಅಂಥ ಕನಸುಗಾರ ಇನ್ನಿಲ್ಲವೆಂದರೆ ನಿಜಕ್ಕೂ ರಂಗಭೂಮಿಗೆ ಹಾನಿಯೇ..!
Related Articles
Advertisement
ಬಾಳಪ್ಪನವರು ತಾರುಣ್ಯದಲ್ಲಿ ಸ್ತ್ರೀ ಪಾತ್ರಕ್ಕಾಗಿ ಉದ್ದ ಕೂದಲು ಬಿಟ್ಟಿದ್ದರಂತೆ. ಅವರ ನಯ ನಾಜೂಕು ಅಭಿನಯದಿಂದ ಕಿತ್ತೂರ ರುದ್ರಮ್ಮ, ಹೇಮರಡ್ಡಿ ಮಲ್ಲಮ್ಮ, ಕಡ್ಲಿಮಟ್ಟಿ ಕಾಶೀಬಾಯಿ ಪಾತ್ರಗಳು ಅಪಾರ ಕೀರ್ತಿ ತಂದುಕೊಟ್ಟಿದ್ದವು. ಅವರು ಪುರುಷ ಪಾತ್ರದ ಅಭಿನಯದಲ್ಲಿ ಜಗಜ್ಯೋತಿ ಬಸವೇಶ್ವರ ಹೊಸ ಇತಿಹಾಸವನ್ನೇ ನಿರ್ಮಿಸಿತು. ಅವರ ವಚನ ಗಾಯನ ಬಸವಣ್ಣವರ ಪಾತ್ರದಲ್ಲಿ ಅಭಿನಯದಿಂದ ಇವರು ಸಾಕ್ಷಾತ್ ಬಸವಣ್ಣ ಎಂದು ಪ್ರೇಕ್ಷಕರಿಂದ ಸರ್ಟಿಫಿಕೇಟ್ ಪಡೆದರು. ಈ ನಾಟಕ ಹುಬ್ಬಳ್ಳಿಯಲ್ಲಿ ಒಂದು ವರ್ಷ ಆದ್ದೂರಿಯಾಗಿ ನಡೆಯಿತು. ಆಗಲೇ ಆವರಿಗೆ ನಾಟ್ಯಭೂಷಣ ಬಿರುದು ಸಿಕ್ಕಿತು.
ಬಾಳಪ್ಪನವರು 1947 ರಲ್ಲಿ ಕಲಾ ವೈಭವ ನಾಟ್ಯ ಸಂಘ ಬೆಳಗಾವಿ ಎಂಬ ಹೆಸರಿನಲ್ಲಿ ಸ್ವಂತ ಕಂಪನಿ ಕಟ್ಟಿದರು. ನಾಟಕ ಕಂಪನಿಗಳ ಮೇಲೆ ಸಮಾಜದ ಋಣ ಬಹಳ. ಅದನ್ನು ತೀರಿಸಲು ಕಂಪನಿಗಳು ಸಮಾಜಕ್ಕೆ ಬೇಕಾಗುವಂತಹ ನಾಟಕಗಳನ್ನು ಆಡಬೇಕು ಎಂದು ಶಿವಲಿಂಗ ಸ್ವಾಮಿಗಳು ಹೇಳುತ್ತಿದ್ದರಂತೆ. ಆವರ ಮಾತು ಬಾಳಪ್ಪನವರಿಗೆ ಮಂತ್ರವಾಗಿತ್ತು. ಅದನ್ನು ಸ್ವಂತ ಕಂಪನಿಯ ಮೂಲಕ ಪೂರೈಸಲು ಪ್ರಯತ್ನಿಸಿದರು.
ನಾಟಕ ಕಂಪನಿ ಅನ್ನುವದು ವಿದ್ಯಾಲಯ. ಆಲ್ಲಿ ಶಿಸ್ತಿರಬೇಕು. ನೀತಿ ಇರ್ಬೇಕು. ಕಲಾವಿದರ ಸಾಧನೆ ಇರಬೇಕು ಎಂದು ನಂಬಿದ ಬಾಳಪ್ಪನವರು ಸ್ವತಃ ನಿರ್ವಸನಿ. ಗಾಂಧಿವಾದಿ. ಕಂಪನಿಯ ಕಲಾವಿದರು ಹಾಗೇ ಇರಬೇಕೆಂದು ಬಯಸುತ್ತಿದ್ದರು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದಾಗ ಕಿತ್ತೂರ ಚೆನ್ನಮ್ಮ, ಚಲೇಜಾವ್‌ದಂತಹ ನಾಟಕಗಳನ್ನಾಡಿ ಹೋರಾಟಗಾರರಿಗೆ ಸ್ಪೂರ್ತಿ ತುಂಬಿದರು. ಸ್ವಂತ ಕಂಪನಿ ಕಟ್ಟುವಾಗ ದೇಶ ಸ್ವತಂತ್ರವಾಗಿತ್ತು. ಆದರೆ ಏಕೀಕರಣ ಚಳುವಳಿ ಜೋರಾಗಿತ್ತು. ಆಗ ಬಾಳಪ್ಪನವರು ಏಕೀಕರಣ ಎಂಬ ನಾಟಕ ಬರೆಯಿಸಿ ಆಡಿಸಿದರು. ಬೆಳಗಾವಿಗಾಗಿ ಮಹಾರಾಷ್ಟ್ರದವರು ತಕರಾರು ಮಾಡುತ್ತಿದ್ದಾಗ ಬೆಳಗಾವಿ ಕರ್ನಾಟಕದ ಅವಿಭಾಜ್ಯವಾದ ಆಂಗವೆಂದು ಸಾರಲು ಕಂಪನಿಯ ಫ್ರೇಮಿನ ಮೇಲೆ ಕಲಾವೈಭವ ನಾಟ್ಯ ಸಂಘ ಬೆಳಗಾವಿ (ಕರ್ನಾಟಕ ರಾಜ್ಯ) ಎಂದು ಬರೆಯಿಸಿದ್ದರು. ಆದಕ್ಕಾಗಿ ಅವರು ಸಾಕಷ್ಟು ಕಷ್ಟ ನಷ್ಟ ಅನುಭವಿಸಿದರು. ಕೊಲೆ ಬೆದರಿಕೆಯನ್ನು ಎದುರಿಸಿದರು. ಆದರೆ ತಮ್ಮ ನಿಲುವು ಬದಲಿಸಲಿಲ್ಲ. ನಾಟಕದ ಮೂಲಕ ಸ್ವಾತಂತ್ರ ಚಳುವಳಿಗೆ, ನಾಡು ನುಡಿಗೆ ಹೇಗೆ ಸೇವೆ ಮಾಡಬಹುದೆಂಬುದನ್ನು ತೋರಿಸಿಕೊಟ್ಟರು.
ಕಲಾವೈಭವ ನಾಟಕ ಕಂಪನಿಗಾಗಿ ತಾವೇ ಸ್ವತಃ ಕಥೆ ಹೇಳಿ ನಾಟಕಗಳನ್ನು ಬರೆಯಿಸಿದ್ದರು. ಅಂತಹವುಗಳಲ್ಲಿ ಶಾಲಾ ಮಾಸ್ತರ, ಗೋರಾ ಕುಂಬಾರ, ಜೈ ಪದ್ಮಾವತಿ, ಮಾವ ಬಂದನಪ್ಪೋ ಮಾವ, ದೇವರು ಮಗ ಪ್ರಮುಖವಾಗಿವೆ. ಯಾವ ನಾಟಕ ಯಾವ ಊರಿನಲ್ಲಿ ಆಡಬೇಕು ಎಂಬ ಲೆಕ್ಕಾಚಾರವು ಆವರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಅವರ ಕಂಪನಿಗೆ ಪ್ರೇಕ್ಷಕರ ಕೊರತೆ ಕಾಣಲಿಲ್ಲ. ಅವರ ಕಂಪನಿ ಕೊಡುಗೆಗಳಲ್ಲಿ ಎರಡನ್ನು ನೆನಯಲೇಬೇಕು. ಒಂದು ಬಸವೇಶ್ವರ ನಾಟಕ ಇನ್ನೊಂದು ನಟರಾಜ ಏಣಗಿ. ಇವರ ಮೂಲಕ ಬಾಳಪ್ಪನವರು ವೃತ್ತಿ, ಹವ್ಯಾಸಿ ರಂಗಗಳನ್ನು ಬೆಸೆಯಲು ಯತ್ನಿಸಿದರು. ಅವರ ಜೊತೆಗೆ ಕಂಪನಿ ಕಟ್ಟುವಲ್ಲಿ ಪ್ರಯತ್ನಿಸಿದವರು ಅವರ ಕಲಾವಿದರು. ವಿಶೇಷವಾಗಿ ಅವರ ಕಲಾವಿದೆ ಪತ್ನಿ ಲಕ್ಷ್ಮಿಬಾಯಿ ಏಣಗಿ. ಸಿನಿಮಾದ ಅತಿಯಾದ ಆನುಕರಣೆಯಿಂದ ರಂಗಭೂಮಿ ಹದ ಕೆಡುತ್ತಿದೆ ಎನಿಸಿದಾಗ ಆವರೊಂದಿಗೆ ಹೊಂದಾಣಿಕೆ ಸಾಧ್ಯವಿಲ್ಲ ಎನಿಸಿದಾಗ ನಾಟಕ ಕಂಪನಿ ನಿಲ್ಲಿಸಿದರು. ಕಂಪನಿ ನಿಂತರೂ ನಾಟಕ ಚಟುವಟಿಕೆಗಳು ನಿಲ್ಲಲಿಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮ್ಯಾಳ ಎಂಬ ಸಂಘ ಹುಟ್ಟಿಕೊಳ್ಳಲು ಕಾರಣರಾದರು. ಏಣಗಿಯಲ್ಲಿ ಮಕ್ಕಳಿಗಾಗಿ ನಾಟಕ ಕಲಿಸಿದರು. ಆಸಕ್ತ ತರುಣರಿಗೆ ರಂಗ ಸಂಗೀತ ಹೇಳಿಕೊಟ್ಟರು. ರಂಗಸಂಗೀತ ರಂಗಭೂಮಿಯ ದೊಡ್ಡ ಸಂಪತ್ತು ಎನ್ನುತ್ತಿದ್ದರು. ಆದನ್ನು ಉಳಿಸಿಕೊಳ್ಳಬೇಕೆಂದು ದಾರವಾಡ ಆಕಾಶವಾಣಿ ಕೇಂದ್ರದಲ್ಲಿ ನಾಟಕ ಅಕಾಡೆಮಿಯಲ್ಲಿ ರಂಗಗೀತೆಗಳ ಧ್ವನಿಮುದ್ರಣ ಮಾಡಿಸಿದರು. ಆದರೆ ರಂಗ ಸಂಗೀತ ಶಾಲೆಯ ಕನಸು ಮಾತ್ರ ನನಸಾಗಲಿಲ್ಲ. ಬಾಳಪ್ಪನವರು ರಂಗಭೂಮಿ ಸೇವೆಗೆ ಹಲವಾರು ಗೌರವ ಪ್ರಶಸ್ತಿಗಳು ಬಂದಿವೆ. ಅವುಗಳಲ್ಲಿ ಕೇಂದ್ರ ಸಂಗೀತ, ನಾಟಕ ಅಕಾಡೆಮಿಯ ಗೌರವ ಪುರಸ್ಕಾರ. ಹಂಪಿ ವಿಶ್ವವಿದ್ಯಾಲಯದ ನಾಡೋಜ ಪದವಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಇತ್ತೀಚೆಗಷ್ಟೆ ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಮುಖವಾಗಿದೆ. ಮೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಏಕಮೇವ ರಂಗನಟ ಏಣಗಿ ಬಾಳಪ್ಪನವರು. ಅವರ ನಿಧನದಿಂದ ವೃತ್ತಿರಂಗಭೂಮಿಯ ವೈಭವದ ಪರಂಪರೆಯ ಕೊನೆಯ ಸನ್ನಿವೇಶಕ್ಕೆ ಪರದೆ ಬಿದ್ದಂತಾಗಿದೆ. ಅವರು ಬಿಟ್ಟು ಹೋದ ನೆನಪುಗಳನ್ನು ನಾವು ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ. ಡಾ.ರಾಮಕೃಷ್ಣ ಮರಾಠೆ