ಬಾದಾಮಿ: ಪಟ್ಟಣದ ಹೊರವಲಯದಲ್ಲಿರುವ ಕಂಠಿ ಈರಣ್ಣ ಹತ್ತಿರ ಇರುವ ಆಶ್ರಯ ಕಾಲೋನಿಯಲ್ಲಿ ಒಳಚರಂಡಿ ತುಂಬಿ ಮ್ಯಾನ್‌ಹೋಲ್ ಮುಖಾಂತರ ರಸ್ತೆಯ ಮೇಲೆ ಹರಿದು ಬರುತ್ತಿರುವ ಹೊಲಸು ನೀರನ್ನು ತೆರವುಗೊಳಿಸಬೇಕು. ಒಳಚರಂಡಿ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಕಾಲೋನಿ ನಿವಾಸಿಗಳು ಕೆಶಿಪ್ ಮತ್ತು ಪುರಸಭೆ ಅ ಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 6 ತಿಂಗಳಿನಿಂದ ತಿಂಗಳಿನಿಂದ ಬಡಾವಣೆಯಲ್ಲಿ ಒಳ ಚರಂಡಿ ಬ್ಲಾಕ್ ಆಗಿ ರಸ್ತೆ ಮೇಲೆ ನೀರು ನಿಂತು ಗಬ್ಬು ನಾರುತ್ತಿದೆ. ಕಳಪೆ ಮತ್ತು ಅವೈಜ್ಞಾನಿಕ ಒಳ ಚರಂಡಿ ಕಾಮಗಾರಿ ಮಾಡಿದ್ದಾರೆ ಸ್ನಾನದ ನೀರು ಶೌಚದ ನೀರು ಒಳಚರಂಡಿ ಮುಖಾಂತರ ಹೋಗುವುದಿಲ್ಲ. ರಸ್ತೆ ಕಾಮಗಾರಿ ಕೈಗೆತ್ತಿಕೊಂಡ ಕೆಶಿಪ್‌ನವರು ರಸ್ತೆ ಮಾಡುವಾಗ ಒಳ ಚರಂಡಿ ಪೈಪ್ ಒಡೆದು ಹಾಕಿದ್ದಾರೆ. ಅವುಗಳನ್ನು ದುರಸ್ತಿ ಮಾಡದೆ ಹಾಗೆ ಬಿಟ್ಟಿದ್ದರಿಂದ ಒಳಚರಂಡಿ ಪೈಪ್ ಬಂದ್ ಆಗಿ ಬಡಾವಣೆಯಲ್ಲಿ ಎಲ್ಲೆಂದರಲ್ಲಿ ಚರಂಡಿ ನೀರು ಹರಿದು ಬರುತ್ತಿದೆ. ಅದರ ದುರ್ವಾಸನೆ ನಿವಾಸಿಗಳು ಬೇಸತ್ತಿದ್ದಾರೆ. ಅಧಿಕಾರಿಗಳು ಸಮಸ್ಯೆಗೆ ಸ್ಪಂದಿ ಸದಿದ್ದರೆ ನಾವು ಕಾಲೋನಿಯಲ್ಲಿ ಹೇಗೆ ಇರೋದು ಎಂದು ಅಳಲು ತೋಡಿಕೊಂಡರು.
ಆಶ್ರಯ ಕಾಲೋನಿಯಲ್ಲಿ ಅಂದಾಜು 80ಕ್ಕೂ ಹೆಚ್ಚು ಮನೆಗಳಿವೆ. 400ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ನಿತ್ಯ ಮಕ್ಕಳು ಮತ್ತು ಜನರು ಹೊಲಸು ಚರಂಡಿ ನೀರಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬಹಳ ಜನರಿಗೆ ಅದರಿಂದ ಕಾಯಿಲೆ ಬಂದಿದೆ. ದುರ್ವಾಸನೆಗೆ ಮನೆಯಲ್ಲಿ ಕುಳಿತುಕೊಳ್ಳುಲು ಆಗುತ್ತಿಲ್ಲ ಚರಂಡಿ ಸ್ವತ್ಛಗೊಳಿಸಿ ಎಂದು ಹಲವಾರು ಬಾರಿ ಬೇಡಿಕೊಂಡರೂ ಪ್ರಯೋಜನವಾಗಿಲ್ಲ. ಕೆಶಿಪ್ ಇಂಜಿನಿಯರ್ ರಾಜೀವ ಶೆಟ್ಟಿ, ಈರಣ್ಣ, ಭಟ್ಟ ಅವರನ್ನು ಕಾಲೋನಿ ಜನರು ತರಾಟೆಗೆ ತೆಗೆದುಕೊಂಡರು. ಕೂಡಲೇ ಒಳಚರಂಡಿ ಪೈಪ್‌ಲೈನ್ ಅಳವಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಎಚ್.ವೈ. ಬಾಲದಂಡೆ ಕಾಲೋನಿ ನಿವಾಸಿಗಳಿಗೆ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ನಿಮ್ಮ ಸಮಸ್ಯೆ ಏನೇ ಇದ್ದರೂ ಅಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬನ್ನಿ ಎಂದು ಹೇಳಿದರು. ನಂತರ ಕೆಶಿಪ್ ಅಧಿಕಾರಿಗಳ ಜೊತೆ ಮಾತನಾಡಿ ಕಾಲೋನಿ ಸಮಸ್ಯೆ ಬೇಗ ಪರಿಹರಿಸಲು ತಿಳಿಸಿದರು. ಹನುಮಂತಪ್ಪ ಕಂಬಾರ, ಮಹೇಶ ಹಿರೆಕುಂಬಿ, ಶಂಕರ ಇಟ್ನಾಳ, ಪುರಸಭೆ ಸದಸ್ಯ ಬಸವರಾಜ ತೀರ್ಥತಪ್ಪನವರ, ಮಂಜುನಾಥ ಹೊಸಮನಿ, ಉಮೇಶ ಭಿಕ್ಷಾವರ್ತಿಮಠ, ಮಹೇಶ ಕಲ್ಲಾಪುರ ಸೇರಿದಂತೆ ಸಮಸ್ತ ಕಾಲೋನಿ ನಿವಾಸಿಗಳು ಹಾಜರಿದ್ದರು.