Advertisement

ಬಾಗಿಲು ಮುಚ್ಚುತ್ತಿವೆ ಆಟೋ ಕನ್ಸಲ್ಟೆಂಟ್‌ಗಳು

02:17 PM Sep 18, 2017 | |

ನೋಟ್‌ ಬ್ಯಾನ್‌ ಎಫೆಕ್ಟ್ನಿಂದಲೇ ಗ್ರಾಹಕರು ಆಟೋ ಕನ್ಸಲ್‌ಟೆಂಟ್‌ಗಳತ್ತ ಸುಳಿಯುತ್ತಿಲ್ಲ. ಒಂದು ವೇಳೆ ಗ್ರಾಹಕರು ಸುಳಿದರೂ ವ್ಯಾಪಾರ ಆಗುತ್ತಿಲ್ಲ. ವ್ಯಾಪಾರ ಕುದುರಿದರೂ ಹಣ ವಿನಿಮಯ ವಿಷಯದ ವಿಳಂಬದಿಂದ ವ್ಯಾಪಾರವೇ ಮುರಿದುಬೀಳುತ್ತಿದೆ. ಒಟ್ಟಿನಲ್ಲಿ, ನೋಟ್‌ ಬ್ಯಾನ್‌ ಹಾಗೂ ಈಗಿನ ಜಿಎಸ್‌ಟಿಯಿಂದ ವ್ಯಾಪಾರ ವಹಿವಾಟು ಪ್ರಮಾಣ ಶೇ.80ರಷ್ಟು ಕುಸಿತ ಕಂಡಿದೆ….

Advertisement

ಕಾರು, ಬೈಕು ಅಂದರೆ ಯಾರಿಗೆ ತಾನೇ ಇಷ್ಟ ಇರೋಲ್ಲ ಹೇಳಿ? ಹಾಗಂತ, ಫ‌ಸ್ಟ್‌ ಹ್ಯಾಂಡ್‌ ಕಾರು, ಬೈಕುಗಳನ್ನು ಕೊಳ್ಳೋಕೆ ಎಷ್ಟೋ ಜನಕ್ಕೆ ಸಾಧ್ಯವಾಗದೇ ಇರಬಹುದು. ಅದಕ್ಕಂತಲೇ ಇದೆ ಸೆಕೆಂಡ್‌ ಹ್ಯಾಂಡ್‌ ಮಾರ್ಕೆಟ್‌ ಇದೆ. ಇಲ್ಲೂ ಸಾಲ ಉಂಟು. ಆದರೆ ಕಂಪೆನಿಗಳಲ್ಲಿ ಮಾತ್ರ. ಇತ್ತೀಚೆಗಂತೂ ಆಟೋ ಕನ್ಸಲ್ಟೆಂಟ್‌ಗಳು ಆತಂಕಕ್ಕೆ ಒಳಗಾಗಿದ್ದಾರೆ. ಕಾರಣ, ನೋಟ್‌ಬ್ಯಾನ್‌ ನಂತರವೂ ಯಥೇಚ್ಚವಾಗಿ ಹರಿದು ಬರುತ್ತಿರುವ ಸಾಲ. ಕಾರು ಕಂಪೆನಿಗಳು ತಮ್ಮದೇ ಆದ ಸೆಕೆಂಡ್‌ ಹ್ಯಾಂಡ್‌ ಮಾರ್ಕೆಟ್‌ ಅನ್ನು ಸೃಷ್ಟಿ ಮಾಡಿಕೊಂಡಿದೆ. ಅಲ್ಲಿ ಕೊಂಡರೆ ದಾಖಲೆಯಿಂದ ಸಾಲದ ತನಕ ಎಲ್ಲವೂ ಅವರದೇ ಜವಾಬ್ದಾರಿ ಆದ್ದರಿಂದ ಜನ ಆ ಕಡೆ ಮುಖಮಾಡಿದ್ದಾರೆ ಎನ್ನುವ ಮಾತಿದೆ.

ಈ ಮಾತಿಗೆ ಬೆಸ್ಟ್‌ ಉದಾಹರಣೆ ನಮ್ಮ ಹುಬ್ಬಳ್ಳಿ-ಧಾರವಾಡ. ಹುಬ್ಬಳ್ಳಿಯಲ್ಲಿ ಸೆಕೆಂಡ್‌ ಹ್ಯಾಂಡ್‌ ವಾಹನಗಳ ಮಾರಾಟ  ವಹಿವಾಟು ಜೋರಾಗಿದ್ದರೆ ವಾಣಿಜ್ಯ ನಗರಿಯಿಂದ ಕೇವಲ 20 ಕಿ.ಮೀ ದೂರದಲ್ಲಿ ಇರುವ ಧಾರವಾಡದಲ್ಲಿ ಮಾತ್ರ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ ವರ್ಷ ಕೇಂದ್ರ ಸರಕಾರ ನೋಟ್‌ ಬ್ಯಾನ್‌ ಮಾಡಿದ ಬಳಿಕ ಸಂಕಷ್ಟದ ದಿನಗಳನ್ನು ಎದುರಿಸಿದ ಧಾರವಾಡ ನಗರದ ಆಟೋ ಕನ್ಸಲ್ಟೆಂಟ್‌ಗಳು ಇದೀಗ ಮುಚ್ಚುವ ಸ್ಥಿತಿಗೆ ಬಂದು ತಲುಪಿವೆ.

ಧಾರವಾಡ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭವಾಗಿದ್ದ ಆರ್‌.ವಿ. ಪಾಟೀಲ ಆಟೋಕನ್ಸಲ್‌ ಟೆಂಟ್‌ನಾಲ್ಕು ತಿಂಗಳ ಹಿಂದೆಯಷ್ಟೇ ಬಂದ್‌ ಆಗಿದೆ. ಕಳೆದ ನಾಲ್ಕು ವರ್ಷಗಳಿಂದ ವ್ಯಾಪಾರ ವಹಿವಾಟು ಮಾಡುತ್ತಿರುವ ಧಾರವಾಡ ಆಟೋ ಕನ್ಸಲ್ಟೆಂಟ್‌, ದೀಪಾವಳಿ ಹಬ್ಬದ ವೇಳೆಗೆ 
ಬಾಗಿಲು ಮುಚ್ಚಲು ಸಿದ್ದವಾಗಿದೆ. ಧಾರವಾಡ ನಗರದಲ್ಲಿ ಶಾಹನೂರ, ಸಾಯಿ, ಬಸವೇಶ್ವರ, ಶಕ್ತಿ, ಒಡೆಯರ್‌ ಸೇರಿದಂತೆ ಒಟ್ಟು ಈಗ 8 ಆಟೋ ಕನ್ಸಲ್ಟೆಂಟ್‌ಗಳು ಇದ್ದು ಅವೂ ಕೂಡ ನಷ್ಟದಿಂದ ತತ್ತರಿಸಿವೆ. 

ನೋಟ್‌ ಬ್ಯಾನ್‌ ಎಫೆಕ್ಟ್
ದಿನವೊಂದಕ್ಕೆ 2-3 ಸೆಕೆಂಡ್‌ ಹ್ಯಾಂಡ್‌ ವಾಹನಗಳ ವ್ಯಾಪಾರ ವಹಿವಾಟು ಕುದುರಿಸಿ, ಉತ್ತಮ ಕಮೀಷನ್‌ ಪಡೆಯುತ್ತಿದ್ದ ಆಟೋ ಕನ್ಸಲ್‌ಟೆಂಟ್‌ಗಳತ್ತ ಈಗ ಗ್ರಾಹಕರು ತಿರುಗಿ ಕೂಡ ನೋಡುತ್ತಿಲ್ಲ. ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ನೋಟ್‌ ಬ್ಯಾನ್‌ ಎಫೆಕ್ಟ್ನಿಂದ ಭಾರಿ ಪ್ರಮಾಣದಲ್ಲಿ ವ್ಯಾಪಾರ ಕುಸಿಯುತ್ತಾ ಬಂದಿದ್ದು, ವಾರಕ್ಕೆ ಒಂದು ವಾಹನ ವ್ಯಾಪಾರ ಕುದುರಿಸಲೂ ಹರಸಾಹಸ ಪಡುವಂತಹ ಸ್ಥಿತಿಗೆ ಎದುರಾಗಿದೆ. 

Advertisement

ಬದಲಾದ ಗ್ರಾಹಕರ ಚಿತ್ತ
ಧಾರವಾಡ ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ಬೆಳಗಾವಿ, ವಿಜಯಪುರ, ಜಮಖಂಡಿ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಧಾರವಾಡ ನಗರದ ಆಟೋ ಕನ್ಸಲ್ಟೆಂಟ್‌ಗಳಿಗೆ ಭೇಟಿ ನೀಡಿ, ವ್ಯಾಪಾರ ವಹಿವಾಟು ಮಾಡುತ್ತಿದ್ದ ಗ್ರಾಹಕರ ಚಿತ್ತವೂ ಈಗ ಬದಲಾದಂತಿದೆ. ಸೆಕೆಂಡ್‌ ಹ್ಯಾಂಡ್‌ ವಾಹನದ ಬದಲಿಗೆ ಹೊಸ ವಾಹನ ಖರೀದಿಗೆ ಗ್ರಾಹಕರು ಮುಂದಾಗುತ್ತಿದ್ದಾರೆ. ಅದರಲ್ಲೂ ಧಾರಾನಗರಿ ಜನರಂತೂ ಸೆಕೆಂಡ್‌ ಹ್ಯಾಂಡ್‌ ವಾಹನ ಖರೀದಿ ಮಾಡಿ ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಹೊಸ ವಾಹನಗಳ ಖರೀದಿಗೆ ಮುಂದಾಗಿರುವುದು ಆಟೋ ಕನ್ಸಲ್‌ಟೆಂಟ್‌ಗಳಿಗೆ ನುಂಗಲಾರದ ತುತ್ತಾಗಿದೆ. 

ಒಟ್ಟಿನಲ್ಲಿ ಬದಲಾದ ಗ್ರಾಹಕರ ಚಿತ್ತ, ನೋಟ್‌ ಬ್ಯಾನ್‌ ಹಾಗೂ ಜಿಎಸ್‌ಟಿ ಎಫೆಕ್ಟ್ನಿಂದ ಧಾರವಾಡ ನಗರ ಭಾಗದ ಆಟೋ ಕನ್ಸಲ್ಟೆಂಟ್‌ಗಳು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ಬಾಗಿಲು ಮುಚ್ಚುವ ಸ್ಥಿತಿಗೆ ಬಂದು ನಿಂತಿವೆ. ಲಾಭ ಹೋಗಲಿ ಈಗಿರುವ ಸಿಬ್ಬಂದಿಗೆ ಸಂಬಳ ಕೊಟ್ಟು ಆಟೋ ಕನ್ಸಲ್‌ಟೆಂಟ್‌ಗಳ ಕಾರ್ಯ ಚಟುವಟಿಕೆ ಮಾಡುವುದೇ ದೊಡ್ಡ ಸವಾಲಾಗಿದ್ದು, ಈ ಕ್ಷೇತ್ರದ ವ್ಯಾಪಾರ ವಹಿವಾಟು ಮಾರಾಟವಂತೂ ದಿನದಿಂದ ದಿನಕ್ಕೆ ಮಾತ್ರ ಕುಸಿಯುತ್ತಲೇ ಸಾಗಿದೆ.

ವಾಹನ ಕೊಳ್ಳುವ ಮುನ್ನ…
1 ಸೆಕೆಂಡ್‌ ಹ್ಯಾಂಡ್‌ ವಾಹನಕೊಳ್ಳುವಾಗ ವಾಹನದ ಮೂಲ ಮಾಲೀಕರು ಯಾರು, ಈಗಿರುವ ಮಾಲೀಕ ಎಷ್ಟನೆಯವರು ಎಂದು ತಪ್ಪದೇ ತಿಳಿದುಕೊಳ್ಳಿ.
2 ವಾಹನ ಯಾವ ಪ್ರದೇಶದಲ್ಲಿ ಓಡಾಡುತ್ತಿತ್ತು. ಈಗ ಎಲ್ಲಿ ಓಡಾಡುತ್ತಿದೆ. ಸಿಗ್ನಲ್‌ ಜಂಪ್‌, ಅಪಘಾತ ಏನಾದರೂ ಆಗಿದೆಯೇ ಚೆಕ್‌ ಮಾಡಿಕೊಳ್ಳಿ.
3 ವಿಮೆ, ತೆರಿಗೆಯನ್ನು ಕಾಲ ಕಾಲಕ್ಕೆ ಕಟ್ಟಿದ್ದಾರೆಯೇ ಎಂದೂ ವಿಚಾರಿಸಿ, ದಾಖಲೆ ಪತ್ರಗಳನ್ನು ಪರೀಶಿಲಿಸಿ.
4 ಮುಖ್ಯವಾಗಿ, ದಾಖಲೆಯ ವರ್ಗಾವಣೆಯ ಬಗ್ಗೆ ಮೊದಲು ಮಾತನಾಡಿ ಕೊಳ್ಳಬೇಕು. ವಾಹನ ಮಾರಾಟವಾದ ನಂತರ ದಾಖಲೆಯ ವರ್ಗಾವಣೆ ಯಾರು ಮಾಡಿಸಿಕೊಳ್ಳಬೇಕು, ಮೂಲ ಮಾಲೀಕರೋ, ಕೊಂಡವರೋ ಅನ್ನೋದನ್ನು ಮೊದಲೇ ತೀರ್ಮಾನಿಸಬೇಕು.
5 ಸಾಮಾನ್ಯವಾಗಿ ವಾಹನ ಕೊಂಡ ನಂತರ ಪೊಲೀಸ್‌ನವರು ಹಿಡಿದು ಕೇಳುವ ತನಕ ಮಾಲೀಕತ್ವ ವರ್ಗಾವಣೆ ಆಗಿರುವುದಿಲ್ಲ. ಒಂದು ಪಕ್ಷ
ಅಪಾರಾಧಗಳೇನಾದರೂ ಆದರೆ ನೋಟಿಸ್‌ ಬರುವುದು ಮೂಲ ಮಾಲೀಕರಿಗೆ.

ಕಳೆದ ನೋಟ್‌ ಬ್ಯಾನ್‌ ಮಾಡಿದ ದಿನದಿಂದ ವ್ಯಾಪಾರ ಕುಸಿಯುತ್ತಾ ಬಂದಿದೆ. ಈ ವರೆಗೂ ದಿನವೊಂದಕ್ಕೆ 2-3 ವಾಹನ ಮಾರಾಟ ಮಾಡುತ್ತಿದ್ದ ನಾವು ಈಗ ವಾರದಲ್ಲಿ ಒಂದು ವಾಹನ ಮಾರಾಟ ಮಾಡಲು ಹರ ಸಾಹಸ ಮಾಡಬೇಕಾಗಿದೆ. ಒಟ್ಟಿನಲ್ಲಿ ಶೇ.80 ರಷ್ಟು ನಮ್ಮ ವ್ಯಾಪಾರ ಕುಸಿತ ಕಂಡಿದೆ. 
ಜೂನೇತ ಕಾಕರ್‌, ಮಾಲೀಕ, ಶಾಹನೂರ ಆಟೋ ಕನ್ಸಲ್ಟಂಟ್‌,

ನಾಲ್ಕು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದೆ. ನೋಟ್‌ ಬ್ಯಾನ್‌ ಎಫೆಕ್ಟೋ ಅಥವಾ ಗ್ರಾಹಕರ ಮನೋಭಾವ ಬದಲಾವಣೆ ಆಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ವ್ಯಾಪಾರ ವಹಿವಾಟು ಕುಸಿತ ಕಂಡು ನಷ್ಟ ಅನುಭವಿಸುವಂತೆ ಆಗಿದೆ. ಹೀಗಾಗಿ ದೀಪಾವಳಿ ಹಬ್ಬದ ವೇಳೆಗೆ ಆಟೋ
ಕನ್ಸಲ್ಟಂಟ್‌ ಬಂದ್‌ ಮಾಡಲು ನಿರ್ಧರಿಸಿದ್ದೇನೆ.

ಅಶೋಕ ವಾಲೀಕಾರ, ಮಾಲೀಕ, ಧಾರವಾಡ ಆಟೋ ಕನ್ಸಲ್ಟಂಟ್‌

Advertisement

Udayavani is now on Telegram. Click here to join our channel and stay updated with the latest news.

Next