Advertisement

ಕೆಲಸದ ಏಜೆನ್ಸಿಯಲ್ಲಿ ಶಾಸಕರ ಮೇಲುಗೈ

02:15 PM Nov 16, 2021 | Team Udayavani |

ಸಿಂಧನೂರು: ಕಲ್ಯಾಣ ಕರ್ನಾಟಕದ ಸುಪ್ರಸಿದ್ಧ ಕ್ಷೇತ್ರ ಅಂಬಾದೇವಿ ದೇಗುಲ ನವೀಕರಿಸುವ 7 ಕೋಟಿ 93 ಲಕ್ಷ ರೂ. ಅಂದಾಜು ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಶಾಸಕ ವೆಂಕಟರಾವ್‌ ನಾಡಗಗೌಡರ ಪ್ರಯತ್ನ ಫಲ ನೀಡಿದೆ.

Advertisement

ಯೋಜನೆ ಒಪ್ಪಿಸಲು ಏಜೆನ್ಸಿ ನಿಗದಿಪಡಿಸುವ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮಧ್ಯೆ ಏರ್ಪಟ್ಟಿದ್ದ ಆಂತರಿಕ ಕದನಕ್ಕೆ ಕೊನೆಗೂ ತೆರೆಬಿದ್ದಿದೆ. ನಿರ್ಮಿತಿ ಕೇಂದ್ರದ ಮೂಲಕವೇ ಅಂದಾಜು ಪಟ್ಟಿ ತಯಾರಿಸಿದ್ದ ಶಾಸಕರು ಅದೇ ಏಜೆನ್ಸಿಗೆ ವಹಿಸಲು ಪ್ರಯತ್ನಿಸಿದ್ದರು. ಈ ನಡುವೆ ಅಂಬಾದೇವಿ ದೇವಸ್ಥಾನ ಸಮಿತಿ ಆಡಳಿತ ಮಂಡಳಿ ಕೆಆರ್‌ಐಡಿಎಲ್‌ಗೆ ಕಾಮಗಾರಿ ವಹಿಸಲು ಉತ್ಸುಕವಾಗಿತ್ತು. ಜೊತೆಗೆ ಅಂದಿನ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕೂಡ ಇದಕ್ಕೆ ಸಮ್ಮತಿ ಸೂಚಿಸಿ, ಪತ್ರ ಬರೆದಿದ್ದರು.

ನಿರ್ಮಿತಿ ಕೇಂದ್ರಕ್ಕೆ ಕೊನೆಗೂ ಲಕ್‌?

ಬಿಜೆಪಿ ಮತ್ತು ಜೆಡಿಎಸ್‌ ಶಾಸಕರ ನಡುವಿನ ಪ್ರಯತ್ನದಲ್ಲಿ ನಿರ್ಮಿತಿ ಕೇಂದ್ರಕ್ಕೆ ಅದೃಷ್ಟ ಖುಲಾಯಿಸಿದೆ. 7 ಕೋಟಿ 93 ಲಕ್ಷ 50 ಸಾವಿರ ರೂ. ಅಂದಾಜು ವೆಚ್ಚದ ಕೆಲಸ ಕೈಗೆತ್ತಿಕೊಳ್ಳುವಂತೆ ರಾಜ್ಯ ಸರ್ಕಾರ ನ.8, 2021ರಂದು ಆದೇಶ ಹೊರಡಿಸಿದೆ. ಸೋಮಲಾಪುರ ಗ್ರಾಮದ ಅಂಬಾದೇವಿ ದೇವಸ್ಥಾನ ಸಮಿತಿಯಲ್ಲಿ ಲಭ್ಯ ಇರುವ ನಿಧಿಯ ಪೈಕಿ 3 ಕೋಟಿ ರೂ. ಬಳಸಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಬಾಕಿ 4 ಕೋಟಿ 15 ಲಕ್ಷ 78 ಸಾವಿರದ 165 ರೂ. ಸಾರ್ವಜನಿಕರು ಹಾಗೂ ಭಕ್ತರ ದೇಣಿಗೆ ಮೂಲಕ ಸಂಗ್ರಹಿಸಲು ಒಪ್ಪಿಗೆ ಸೂಚಿಸಲಾಗಿದೆ. ಇದರೊಟ್ಟಿಗೆ ದೇವಾಲಯ ಮಂಡಳಿ 1 ಕೋಟಿ 15 ಲಕ್ಷ 78 ಸಾವಿರ 165 ರೂ. ಸಿಬ್ಬಂದಿ ವೇತನ ಮತ್ತು ಇತರೆ ಖರ್ಚುಗಳಿಗೆ ವಿನಿಯೋಗಿಸಲು ಸರ್ಕಾರ ಅಸ್ತು ಎಂದಿದೆ.

ಬಿಜೆಪಿ ಪ್ರಯತ್ನಕ್ಕೆ ಹಿನ್ನಡೆ

Advertisement

ಅಂಬಾದೇವಿ ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿದ್ದ ರಾಜಶೇಖರ ಹಿರೇಮಠ ಕೂಡ ದೇಗುಲ ನಿರ್ಮಾಣದ ಕೆಲಸಕ್ಕೆ ಕೈ ಜೋಡಿಸಿದ್ದರು. ಅವರು ಕೂಡ ಹಿಂದಿನ ಹಾಗೂ ಹಾಲಿ ಮುಜರಾಯಿ ಸಚಿವರನ್ನು ಭೇಟಿಯಾಗಿ ಕೆಲಸ ಮಾಡಿಸಲು ಒತ್ತಡ ಹೇರಿದ್ದರು. ಶಾಸಕ ವೆಂಕಟರಾವ್‌ ನಾಡಗೌಡ ಇದಕ್ಕಿಂತಲೂ ಸಾಕಷ್ಟು ಸಭೆ ನಡೆಸಿ, ಯೋಜನೆಗೆ ಮುಹೂರ್ತ ರೂಪ ಕೊಟ್ಟಿದ್ದರು. ಬಿಜೆಪಿ-ಜೆಡಿಎಸ್‌ ಪ್ರಯತ್ನ ತೀವ್ರವಾದರೂ ಏಜೆನ್ಸಿ ನಿಗದಿಪಡಿಸುವ ವಿಷಯದಲ್ಲಿ ಮಾತ್ರ ವೈರುಧ್ಯ ಏರ್ಪಟ್ಟಿತ್ತು. ಹಿಂದಿನ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದ್ದ ಏಜೆನ್ಸಿಯನ್ನೇ ಬದಿಗೊತ್ತಿ ಇದೀಗ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿವಹಿಸಿ ಸರ್ಕಾರ ಅಸ್ತು ಎಂದಿರುವುದರಿಂದ ಶಾಸಕ ವೆಂಕಟರಾವ್‌ ನಾಡಗೌಡರ ಕೈ ಮೇಲು ಆದಂತಾಗಿದೆ.

ಈ ಹಿಂದೆ ದೇವಸ್ಥಾನ ಸಮಿತಿಯಿಂದಲೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಬಹುಬೇಗ ಸ್ಪಂದಿಸಿದ್ದು, ಅನುಮತಿ ದೊರಕಿದೆ. ಅಂಬಾದೇವಿ ದೇವಸ್ಥಾನ ನವೀಕರಣಗೊಳ್ಳಬೇಕೆಂಬುದೇ ನಮ್ಮ ಉದ್ದೇಶ. -ರಾಜಶೇಖರ ಹಿರೇಮಠ, ಅಧ್ಯಕ್ಷರು, ಅಂಬಾದೇವಿ ದೇವಸ್ಥಾನ ಮಂಡಳಿ, ಅಂಬಾಮಠ

ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವಹಿಸಿ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಎಸಿ ಮತ್ತು ತಹಶೀಲ್ದಾರ್‌ ಅವರಿಗೆ ಕೊಟೇಶನ್‌ ಬರಲಿದ್ದು, ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ದೇಗುಲದ ಕಲ್ಲು ಬಿಚ್ಚಿದ ಮೇಲೆ ಅದನ್ನು ತ್ವರಿತವಾಗಿ ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. -ವೆಂಕಟರಾವ್‌ ನಾಡಗೌಡ, ಶಾಸಕ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next