Advertisement

ಉನ್ನತ ಶಿಕ್ಷಣದಲ್ಲಿ ಹುಡುಗಿಯರ ಪ್ರಾಬಲ್ಯ

06:00 AM Jun 21, 2018 | Team Udayavani |

ಬೆಂಗಳೂರು: “ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಕೇಂದ್ರ ಸರ್ಕಾರ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ವಿದ್ಯಾರ್ಥಿಗಳಿಗಿಂತ ಹೆಚ್ಚಿದೆ ಎನ್ನುವ ಖುಷಿಯ ಸಂಗತಿ ಬೆಳಕಿಗೆ ಬಂದಿದೆ.

Advertisement

ಕೇರಳದ ನಂತರ ಇದೀಗ ಕರ್ನಾಟಕದಲ್ಲಿಯೂ ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಕೇರಳದಲ್ಲಿ ಪ್ರತಿ 100 ಹುಡುಗರಿಗೆ  141 ಹುಡುಗಿಯರು ಪದವಿಗೆ ಪ್ರವೇಶ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಈ ಅನುಪಾತ 100 ಹುಡುಗರಿಗೆ 103 ಹುಡುಗಿಯರಷ್ಟಕ್ಕೆ ಏರಿಕೆಯಾಗಿದೆ. ಇದೇ ವೇಳೆ ಪದವಿ ಪ್ರವೇಶ ಭಾರತದ ಸರಾಸರಿ ಪ್ರಮಾಣ 100 ಹುಡುಗರಿಗೆ  94 ಹುಡುಗಿಯರಷ್ಟಿದೆ.

2017-18 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ 1,22,375 ಹುಡುಗರು ಪ್ರವೇಶ ಪಡೆದಿದ್ದರೆ, 1,74,290 ಹುಡುಗಿಯರು ಪ್ರವೇಶ ಪಡೆದಿದ್ದಾರೆ. ರಾಜ್ಯದಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರ ಪ್ರವೇಶ ಪ್ರತಿ ವರ್ಷ ಹೆಚ್ಚಾಗುತ್ತಿರುವುದು ಕಂಡು ಬಂದಿದೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಈ ಬಗ್ಗೆ ಕಳೆದ ಏಳು ವರ್ಷಗಳಲ್ಲಿ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರ ಲಿಂಗಾನುಪಾತ ಮಾಹಿತಿ ಸಂಗ್ರಹಿಸಿದ್ದು, 2010-11ರ ಶೈಕ್ಷಣಿಕ ವರ್ಷದಲ್ಲಿ 100 ವಿದ್ಯಾರ್ಥಿಗಳಿಗೆ 92 ವಿದ್ಯಾರ್ಥಿನಿಯರು ಪ್ರವೇಶ ಪಡೆಯುತ್ತಿದ್ದರು. 2015-16ನೇ ಸಾಲಿಗೆ ಈ ಪ್ರಮಾಣ 100ಕ್ಕೆ  99ರಷ್ಟು ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು. 16-17 ನೇ ಸಾಲಿಗೆ ಹುಡುಗರನ್ನು ದಾಟಿ ಮುನ್ನಡೆದ ಹುಡುಗಿಯರು ಅನುಪಾತವನ್ನು 100: 101ಕ್ಕೆ ಹೆಚ್ಚಿಸಿಕೊಂಡರು. 17-18ನೇ ಸಾಲಿನಲ್ಲಿ ಹುಡುಗಿಯರ ಈ ಪ್ರಮಾಣ 103ಕ್ಕೆ ಹೆಚ್ಚಳವಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಮಧ್ಯೆ, ಪಿಯುಸಿ ಹಾಗೂ ಉನ್ನತ ಶಿಕ್ಷಣ ಪಡೆಯುವಲ್ಲಿಯೂ ಹುಡುಗರಿಗೆ ಸರ್ಕಾರದಿಂದ ಯಾವುದೇ ಉಚಿತ ಯೋಜನೆಗಳು ದೊರೆಯುತ್ತಿಲ್ಲ. ಆರ್ಥಿಕ ಸಮಸ್ಯೆಯಿಂದ ಬಹಳಷ್ಟು ಯುವಕರು ಉನ್ನತ ಶಿಕ್ಷಣದಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೂ ಸರ್ಕಾರ ಹೆಚ್ಚಿನ ಶೈಕ್ಷಣಿಕ ಸವಲತ್ತು ನೀಡುವಂತೆ ಈಗಾಗಲೇ ಉನ್ನತ ಶಿಕ್ಷಣ ಪರಿಷತ್‌ ಸರ್ಕಾರಕ್ಕೆ ಶಿಫಾರಸು ಮಾಡಿದೆ.

Advertisement

ಸರ್ಕಾರದ ಸವಲತ್ತು ಕಾರಣ
ರಾಜ್ಯ ಸರ್ಕಾರ ಪಿಯುಸಿ ವರೆಗೂ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಪದವಿಯಲ್ಲಿಯೂ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕವಾಗಿ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು, ಪ್ರವೇಶ ಶುಲ್ಕ, ಟ್ಯೂಶನ್‌ ಶುಲ್ಕ, ಲ್ಯಾಬ್‌ ಶುಲ್ಕವನ್ನು ಸರ್ಕಾರವೇ ಭರಿಸುತ್ತಿರುವುದರಿಂದ ವಿದ್ಯಾರ್ಥಿನಿಯರ ಸೇರ್ಪಡೆ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಹೇಳಲಾಗಿದೆ. ಅಲ್ಲದೇ ಸರ್ಕಾರ ಪದವಿವರೆಗೂ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡುವ ಭರವಸೆ ನೀಡಿರುವುದರಿಂದ ವಿದ್ಯಾರ್ಥಿನಿಯರ ಪದವಿ ಸೇರ್ಪಡೆ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

2016-17 ನೇ ಸಾಲಿನ ಅಂಕಿ ಅಂಶ
ರಾಜ್ಯ             ಹುಡುಗರು            ಹುಡುಗಿಯರು
ಆಂಧ್ರಪ್ರದೇಶ        100                78
ಕರ್ನಾಟಕ            100                101
ಕೇರಳ            100                141
ಮಹಾರಾಷ್ಟ್ರ        100                88
ತಮಿಳನಾಡು        100                95
ತೆಲಂಗಾಣ        100                88
ಭಾರತ            100                94
ಕರ್ನಾಟಕದಲ್ಲಿ ಪದವಿ ಪ್ರವೇಶ 2017-18
ಹುಡುಗರು        1,22,375
ಹುಡುಗಿಯರು    1,74,290
ಕರ್ನಾಟಕದಲ್ಲಿ ಪಿಯುಸಿ ಪ್ರವೇಶ 2017-18
ಹುಡುಗರು        79602
ಹುಡುಗಿಯರು    1,02,751

Advertisement

Udayavani is now on Telegram. Click here to join our channel and stay updated with the latest news.

Next