Advertisement

16 ಹಳ್ಳಿಗಳ ಜನರು ಸೇರಿ ಆಚರಿಸುವ ದೊಡ್ಡಹೆಜ್ಜೂರು ಜಾತ್ರೆ ಇಂದು

09:41 PM Jan 15, 2020 | Lakshmi GovindaRaj |

ಹುಣಸೂರು: ತಾಲೂಕಿನ ದೊಡ್ಡಹೆಜ್ಜೂರಿನ ಇತಿಹಾಸ ಪ್ರಸಿದ್ಧ ರಾಮಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ರಥೋತ್ಸವ ಹಾಗೂ ಶುಕ್ರವಾರ ತೆಪ್ಪೋತ್ಸವ ಜರುಗಲಿದೆ. 16 ಹಳ್ಳಿಗಳ ಭಕ್ತರು ಸೇರಿ ಈ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸುವುದು ವಿಶೇಷವಾಗಿದೆ. ಪ್ರತಿ ಹಳ್ಳಿಯವರೂ ಒಂದೊಂದು ಜವಾಬ್ದಾರಿ ವಹಿಸಿಕೊಳ್ಳುವರು.

Advertisement

ದೊಡ್ಡಹೆಜ್ಜೂರು ನಾಗರಹೊಳೆ ಉದ್ಯಾನದಂಚಿನ ಲಕ್ಷ್ಮಣ ತೀರ್ಥ ನದಿಯ ದಂಡೆ ಮೇಲಿದ್ದು, ಶ್ರೀ ರಾಮಂಜನೇಯಸ್ವಾಮಿ ದೇವಾಲಯದಲ್ಲಿ ಸಂಪ್ರದಾಯದಂತೆ ಸಂಕ್ರಾಂತಿ ಮರು ದಿನ ರಥೋತ್ಸವ ನಡೆಯಲಿದೆ. ಚುಂಚನಕಟ್ಟೆ ಶ್ರೀ ರಾಮದೇವರ ರಥೋತ್ಸವದಂದು ಇಲ್ಲೂ ರಥೋತ್ಸವ ನಡೆಯುವುದೇ ವಿಶೇಷ. ಈ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ಇದು ಕಾಡು ಕುರುಬರ ಜಾತ್ರೆ ಎಂದು ಕರೆಯಲಾಗುತ್ತದೆ.

ಭಕ್ತರ ಹರಕೆ: ಹುಣಸೂರು, ಎಚ್‌.ಡಿ ಕೋಟೆ ತಾಲೂಕಿನ ಹರಕೆ ಹೊತ್ತ ಮಂದಿ 3-4 ದಿನ ಮೊದಲೇ ಆಗಮಿಸಿ ಪರ ನಡೆಸುವರು. ಹರಕೆ ಹೊತ್ತ ಭಕ್ತರು ಮುಡಿ ಕೊಡುತ್ತಾರೆ. ರಥೋತ್ಸವದ ಮಾರನೇ ದಿನ ರೋಗಗಳು ಬಾರದಂತೆ ಹರಕೆ ಹೊತ್ತವರು ರಾಸುಗಳನ್ನು ಕರೆತಂದು ದೇವಾಲಯದ ಸುತ್ತ ಮೆರವಣಿಗೆ, ಪಂಜಿನ ಸೇವೆ ನಡೆಸಿ ಪ್ರಾರ್ಥಿಸುವರು.

ನದಿ ದಂಡೆ ಮೇಲೆ ಭೋಜನ: ಜಾತ್ರೆಗೆ ಆಗಮಿಸುವ ಬಹುತೇಕ ಭಕ್ತರು ಜೊತೆಯಲ್ಲಿ ತರುವ ವಿಶೇಷ ತಿಂಡಿ-ಊಟವನ್ನು ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿ ಸಾಮೂಹಿಕ ಬೋಜನ ಮಾಡುವುದು ವಿಶೇಷ. ಈ ಬಾರಿ ನದಿ ಹಾಗೂ ಕೆರೆಯಲ್ಲಿ ನೀರು ಸಾಕಷ್ಟಿರುವುದರಿಂದ ಭಕ್ತರು ನಿರಾಳರಾಗಿದ್ದಾರೆ. ಹುಣಸೂರು-ಹನಗೋಡಿನಿಂದ ದೊಡ್ಡ ಹೆಜ್ಜೂರು ಜಾತ್ರೆಗೆ ಸಾರಿಗೆ ಸಂಸ್ಥೆ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಿದೆ. ಹನಗೋಡು ರೋಟರಿ ಕ್ಲಬ್‌ವತಿಯಿಂದ ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನ ಕಾಮಗಾರಿ: ಪುರಾತನ ದೇವಾಲಯವನ್ನು ಕೆಡವಿ ಹೊಸ ದೇವಾಲಯ ನಿರ್ಮಿಸುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ವೀರಾಂಜನೇಯಸ್ವಾಮಿಯ ಕಲ್ಲಿನ ವಿಗ್ರಹವನ್ನು ಹಾಗೇ ಉಳಿಸಿಕೊಂಡಿದ್ದು, ಪಕ್ಕದಲ್ಲೇ ಬಾಲ ಮಂದಿರ ನಿರ್ಮಿಸಿ ತಾಮ್ರದ ಬಿಂದಿಗೆಯಲ್ಲಿ ಬೃಹತ್‌ ಕಳಶ ನಿರ್ಮಿಸಲಾಗಿದ್ದು, ಅಲ್ಲಿಯೇ ಪೂಜೆ ನೆರವೇರಲಿದೆ.

Advertisement

ಯಾವ ಯಾವ ಹಳ್ಳಿಗಳಿಗೆ ಯಾವ ಜವಾಬ್ದಾರಿ?: ದೊಡ್ಡಹೆಜ್ಜೂರಿನ ಇತಿಹಾಸ ಪ್ರಸಿದ್ಧ ರಾಮಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಜನರು ಒಂದೊಂದು ಜವಾಬ್ದಾರಿ ಹೊತ್ತು ರಥೋತ್ಸವ, ತೆಪ್ಪೋತ್ಸವ ನಡೆಸುವರು. ಭರತವಾಡಿ, ವೀರತಯ್ಯನಕೊಪ್ಪಲಿನವರು ದೇವಾಲಯಕ್ಕೆ ಸುಣ್ಣ ಬಣ್ಣ ಬಳಿದರೆ, ಮುದಗನೂರಿನವರು ರಥ ನಿಯಂತ್ರಣಕ್ಕೆ ಮರದ ಗೊದ್ದ ತಯಾರಿಸುವರು.

ಹಿಂಡಗೂಡ್ಲಿನವರು ರಥ ಎಳೆಯುವ ಹಗ್ಗ ತಂದರೆ, ದಾಸನಪುರದವರು ಹೂವಿನ ಚಪ್ಪರ ಹಾಕುವರು. ದೊಡ್ಡಹೆಜ್ಜೂರಿನವರು ಇತರೆ ಜವಾಬ್ದಾರಿ ಹೊರುವರು. ಹನಗೋಡು, ಕಿರಂಗೂರು, ಹರಳಹಳ್ಳಿ, ಚಿಕ್ಕಹೆಜ್ಜೂರು, ಅಬ್ಬೂರು, ಶಿಂಡೇನಹಳ್ಳಿ, ನೇಗತ್ತೂರು, ಹರಳಳ್ಳಿ, ಕೋಣನ ಹೊಸಹಳ್ಳಿ ಸೇರಿದಂತೆ ಹತ್ತಾರು ಗ್ರಾಮದವರು ಜಾತ್ರೆಗೆ ಸಹಕಾರ ನೀಡುವರು.

Advertisement

Udayavani is now on Telegram. Click here to join our channel and stay updated with the latest news.

Next