ಯಾದಗಿರಿ: ಜಗತ್ತನ್ನು ತಲ್ಲಣಗೊಳಿಸಿರುವ ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ವೈದ್ಯರ ದಿನಾಚರಣೆ ಸಮಾರಂಭಕ್ಕೂ ಬರಲಾಗದಂತಹ ಸನ್ನಿವೇಶದಲ್ಲಿ ವೈದ್ಯರು ಮತ್ತು ಶುಶ್ರೂಷಕರು ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಹಾಗೂ ಅಜೀಮ್ ಫ್ರೇಮ್‌ಜಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಹಾಗೂ ಕೋವಿಡ್ ವಾರಿಯರ್ಸ್ ಜೊತೆಗೆ ಕೋವಿಡ್ ನಿಯಂತ್ರಣದ ಮುನ್ನೋಟ ಕುರಿತು ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ವೈರಸ್ ವಿರುದ್ಧ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಾ ರೋಗಿಗಳ ಜೀವ ಉಳಿಸುತ್ತಿರುವ ವೈದ್ಯರು ಮರುಜೀವ ನೀಡುವ ದೇವರಿದ್ದಂತೆ. ಅವರ ಕರ್ತವ್ಯಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದರು. ದಿನದ 24 ತಾಸು ಕೆಲಸ ಮಾಡುತ್ತಾ ಅತ್ಯಂತ ಕಠಿಣ ಸಂದರ್ಭಗಳನ್ನು ಎದುರಿಸಿದ್ದಾರೆ. ಜಿಲ್ಲೆಯಲ್ಲಿ 941 ಕೋವಿಡ್ ಸೋಂಕಿತರಲ್ಲಿ 837 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಇದಕ್ಕೆ ವೈದ್ಯರ ಶ್ರಮವೇ ಕಾರಣ ಎಂದು ಶ್ಲಾಘಿಸಿದರು.
ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿ, ಜಿಲ್ಲಾ ಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಟೀಮ್ ವರ್ಕ್ ಮೂಲಕ ಕೋವಿಡ್ ವೈರಸ್ ಹರಡುವಿಕೆ ನಿಯಂತ್ರಿಸಿದ್ದಾರೆ. ವೈದ್ಯರು ಕೂಡ ಜಿಲ್ಲಾಡಳಿತ ನೀಡುವ ಪ್ರತಿಯೊಂದು ಸೂಚನೆಗಳನ್ನು ಪಾಲಿಸುವ ಮೂಲಕ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸುತ್ತಿದ್ದಾರೆ. ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತದ ಕಾರ್ಯ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ, ಎಸ್ಪಿ ಋಷಿಕೇಶ ಸೋನವಣೆ, ಡಿಎಚ್‌ಒ ಡಾ| ಮಲ್ಲನಗೌಡ ಪಾಟೀಲ ಮಾತನಾಡಿದರು. ಐಎಂಎ ಜಿಲ್ಲಾ ಕಾರ್ಯದರ್ಶಿ ಡಾ| ವೀರೇಶ ಜಾಕಾ ವಿಶೇಷ ಉಪನ್ಯಾಸ ನೀಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಕಲಬುರಗಿ ವಿಭಾಗ ಮಟ್ಟದ ವೈದ್ಯಕೀಯ ಸರ್ವೇಕ್ಷಣಾಧಿಕಾರಿ ಡಾ| ಅನೀಲಕುಮಾರ್ ತಾಳಿಕೋಟಿ, ಐಎಂಎ ಜಿಲ್ಲಾಧ್ಯಕ್ಷ ಸಿ.ಎಂ.ಪಾಟೀಲ, ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ನೀಲಮ್ಮ ಎಸ್.ರೆಡ್ಡಿ, ಡಾ| ಲಕ್ಷ್ಮೀಕಾಂತ ಉಪಸ್ಥಿತರಿದ್ದರು.