Advertisement

ಅರವತ್ತು ದಿನಗಳಾದರೂ ಡಿವೈಡರ್‌ ಬೀದಿ ದೀಪ ಬೆಳಗಲಿಲ್ಲ !

11:58 PM May 22, 2020 | Sriram |

ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಡಿವೈಡರ್‌ ಮಧ್ಯೆ ಅಳವಡಿಸಲಾದ ಬೀದಿ ದೀಪಗಳು ವರ್ಷ ಪೂರ್ತಿ ಉರಿಯುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ವಿದ್ಯುತ್‌ ದೀಪಗಳಿಗೆ ಅಳವಡಿಸಲಾದ ಜಾಹೀರಾತು ದೀಪಗಳು ಮಾತ್ರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ.

Advertisement

ದೀಪಗಳು ಕೆ‌ಟ್ಟು 60 ದಿನ
ಕಲ್ಸಂಕ – ಅಂಬಾಗಿಲು ಮಾರ್ಗದ ಡಿವೈಡರ್‌ ಮಧ್ಯದಲ್ಲಿ 70 ಕ್ಕೂ ಅಧಿಕ ಕಂಬಗಳಲ್ಲಿ 140ಕ್ಕೂ ಅಧಿಕ ವಿದ್ಯುತ್‌ ದೀಪಗಳಿವೆ. ಜನವರಿ ತಿಂಗಳಿನಲ್ಲಿ ನಡೆದ ಪರ್ಯಾಯ ಮಹೋತ್ಸವದ ಅಂಗವಾಗಿ ದುರಸ್ತಿಗೊಳಿಸಿದ ಬೀದಿದೀಪಗಳು ಒಂದು ತಿಂಗಳೊಳಗಾಗಿ ಕೆಟ್ಟು ಹೋಗಿದೆ. ದೂರು ನೀಡಿದರು ಪ್ರಯೋಜನವಾಗಿಲ್ಲ. ಇಡೀ ಲಾಕ್‌ಡೌನ್‌ನಿಂದ ರಾತ್ರಿ ಹೊತ್ತಿನಲ್ಲಿ ಸಂಚಾರವಿಲ್ಲದ ಕಾರಣ ಸಾರ್ವಜನಿಕರು ದೂರು ನೀಡುವುದು ನಿಲ್ಲಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ ಕತ್ತಲಿನಲ್ಲಿ ಒಡಾಟ ಮಾಡುವ ವಾಹನ ಸವಾರರು ಸಂಕಷ್ಟಕ್ಕೀಡಾಗಿದ್ದಾರೆ.

ಉರಿಯುವ
ಜಾಹೀರಾತು ದೀಪಗಳು
ಬೀದಿ ದೀಪ ಕಂಬದಲ್ಲಿ ಜಾಹೀರಾತು ದೀಪಗಳು ಉರಿಯುತ್ತಿದೆ. ಗುತ್ತಿಗೆ ವಹಿಸಿಕೊಂಡವರು ಜಾಹೀರಾತು ಫ‌ಲಕಗಳ ನಿರ್ವಹಣೆಗೆ ತೋರುವ ಆಸಕ್ತಿ ಬೀದಿದೀಪಗಳ ನಿರ್ವಹಣೆಯಲ್ಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

500ಕ್ಕೂ ಅಧಿಕ
ಬೀದಿ ದೀಪಗಳು
ನಗರದ ಪ್ರಮುಖ ರಸ್ತೆಗಳಾದ ಕೆ.ಎಂ. ಮಾರ್ಗ, ಕಲ್ಸಂಕ -ಅಂಬಾಗಿಲು, ಬನ್ನಂಜೆ -ಶಿರೂರು ಸಿಟಿ ಬಸ್‌ ನಿಲ್ದಾಣ ಮಾರ್ಗ, ರಾಜ್‌ ಟವರ್‌- ಕಲ್ಸಂಕ್‌ ಮಾರ್ಗದ ಡಿವೈಡರ್‌ ಮಧ್ಯೆ ಸುಮಾರು 500ಕ್ಕೂ ಅಧಿಕ ಬೀದಿ ದೀಪಗಳಿವೆ. ನಿಯಮದ ಪ್ರಕಾರ ನಿತ್ಯ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ವಿದ್ಯುತ್‌ ದೀಪ ಬೆಳಗಬೇಕು. ಆದರೆ ಡಿವೈಡರ್‌ ಮಧ್ಯೆ ಇರುವ ದೀಪಗಳು ಉರಿಯೋದು ಕಡಿಮೆ.

ಗುತ್ತಿಗೆದಾರರಲ್ಲಿ ಆಸಕ್ತಿ ಕೊರತೆ
ಪ್ರಮುಖ ರಸ್ತೆಯನ್ನು ಸಂಪರ್ಕಿಸುವ ಮಾರ್ಗದ ಬೀದಿ ದೀಪದ ನಿರ್ವ ಹಣೆಯನ್ನು ನಗರಸಭೆ (ಪಿಪಿಪಿ ಮಾಡೆಲ್‌) ಗುತ್ತಿಗೆದಾರರಿಗೆ ನೀಡಿದೆ. ಇದರ ಅನ್ವಯ ನಗರಸಭೆಯಿಂದ ಈ ಗುತ್ತಿಗೆದಾರರಿಗೆ ನಿರ್ವಹಣೆಗೆ ಮಾಡಬೇಕು. ಇದಕ್ಕೆ ನಗರಸಭೆಯಿಂದ ಯಾವುದೇ ರೀತಿ ಯಾದ ಹಣ ಪಾವತಿಯಾಗುವುದಿಲ್ಲ. ಬೀದಿ ದೀಪಗಳ ಕಂಬದಲ್ಲಿ ಜಾಹೀರಾತಿನ ಫ‌ಲಕ ಆಳವಡಿಸುವ ಮೂಲಕ ಆದಾಯ ಪಡೆದುಕೊಂಡು ಡಿವೈಡರ್‌ ಬೀದಿ ದೀಪಗಳನ್ನು ನಿರ್ವಹಣೆ ಮಾಡಬೇಕಾಗಿದೆ. ಪ್ರಸ್ತುತ ಬೀದಿದೀಪಗಳು ಕೆಟ್ಟು ತಿಂಗಳು ಕಳೆದರೂ ದುರಸ್ತಿ ಮಾಡಿಲ್ಲ. ಆದರೆ ಗುತ್ತಿಗೆದಾರ ಜಾಹೀರಾತು ಫ‌ಲಕ ಹಾಳಾದ ಒಂದು ದಿನದೊಳಗೆ ದುರಸ್ತಿ ಎನ್ನುವ ಆರೋಪಗಳಿವೆ.

Advertisement

ಬೀದಿ ದೀಪಗಳ‌ ಸಮಸ್ಯೆ
ನಗರಸಭೆ 35 ವಾರ್ಡ್‌ಗಳಲ್ಲಿ ಬೀದಿದೀಪಗಳ ನಿರ್ವಹಣೆಯ ಕೊರತೆ ಇದೆ. 2017-18ರಲ್ಲಿ ಬೀದಿದೀಪದ ಟೆಂಡರ್‌ ವಹಿಸಿಕೊಂಡ ಶಿವಮೊಗ್ಗದ ಗುತ್ತಿಗೆದಾರರು ಬೀದಿದೀಪಗಳ ನಿರ್ವ ಹಣೆಯಲ್ಲಿ ವಿಫ‌ಲರಾಗಿದ್ದರು. ಇದರ ಬಗ್ಗೆ ಸದಸ್ಯರಿಂದ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ 2018 ಜೂ.29ರಂದು ಶಾಸಕ ಕೆ.ರಘುಪತಿ ಭಟ್‌ ಕರೆದ ಸಭೆಯಲ್ಲಿ ಸ್ಥಳೀಯರಿಗೆ ಟೆಂಡರ್‌ ನೀಡಿದರೆ ಉತ್ತಮ ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು. 2018ರಲ್ಲಿ ಕಾರ್ಕಳದವರೊಬ್ಬರಿಗೆ ನಿರ್ವಹಣೆ ಟೆಂಡರ್‌ ಆಗಿತ್ತು. ಆರಂಭದಲ್ಲಿ ಚೆನ್ನಾಗಿಯೇ ಇದ್ದರೂ ಬಳಿಕ ಹಳೆಯ ಗುತ್ತಿಗೆದಾರರ ದಾರಿ ಹಿಡಿದ ದೂರುಗಳಿವೆ. ಈ ಬಗ್ಗೆ ಪ್ರಶ್ನಿಸಬೇಕಾದ ಜನಪ್ರತಿನಿಧಿಗಳು ಅಧಿಕಾರ ಸ್ವೀಕರಿಸಿಲ್ಲ.
ನಗರಸಭೆ ವ್ಯಾಪ್ತಿಯ ಬೀದಿ ದೀಪಗಳ ದುರಸ್ತಿ ಹಾಗೂ ನಿರ್ವಹಣೆಗೆ ಪ್ರತಿ ತಿಂಗಳು ಗುತ್ತಿಗೆದಾರರಿಗೆ 6 ಲ.ರೂ. ಗುತ್ತಿಗೆದಾರರಿಗೆ ನೀಡಲಾಗುತ್ತದೆ. ವಾರ್ಷಿಕವಾಗಿ74 ಲಕ್ಷ ರೂ. ಗುತ್ತಿಗೆ ದಾರರಿಗೆ ನೀಡಲಾಗುತ್ತದೆ. ಬೀದಿ ದೀಪದ ವಿದ್ಯುತ್‌ ಬಿಲ್‌ ಸುಮಾರು 25ರಿಂದ 26 ಲ.ರೂ. ಮೊತ್ತವನ್ನು ಸರಕಾರ ಮೆಸ್ಕಾಂಗೆ ಸಂದಾಯ ಮಾಡುತ್ತಿದೆ.

ನಗರಸಭೆ ವ್ಯಾಪ್ತಿಯಲ್ಲಿ ಹೊಸ 600 ಬೀದಿ ದೀಪಗಳ ಅಳವಡಿಕೆಗೆ ಟೆಂಡರ್‌ ಸಿದ್ಧತೆ ನಡೆಯುತ್ತಿದೆ. ಕೋವಿಡ್-19 ಹಿನ್ನೆಲೆ ಕೆಲಸ ಸ್ಥಗಿತಗೊಂಡಿದೆ. ಡಿವೈಡರ್‌ ಬೀದಿದೀಪಗಳ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ಎಷ್ಟು ವರ್ಷಗಳ ಅವಧಿಗೆ ನೀಡಲಾಗಿದೆ ಎನ್ನುವುದು ಪರಿಶೀಲನೆ ನಡೆಸಲಾಗುತ್ತದೆ. ಕೆಲಸದಲ್ಲಿ ಲೋಪ ಕಂಡು ಬಂದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.
-ಮೋಹನ್‌ ರಾಜ್‌, ಎಇಇ ನಗರಭೆ

ಸಂಚರಿಸಲು ಭಯ
ಕಳೆದ ಎರಡು ತಿಂಗಳಿನಿಂದ ಕಲ್ಸಂಕ- ಅಂಬಾಗಿಲು ಮಾರ್ಗದ ಡಿವೈಡರ್‌ ಬೀದಿ ದೀಪಗಳು ಕೆಟ್ಟು ನಿಂತಿವೆ. ಈ ಬಗ್ಗೆ ನಗರಸಭೆ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ. ಆದರೆ ಜಾಹೀರಾತು ದೀಪಗಳು ಹಾಳಾದರೆ ಒಂದೇ ದಿನದಲ್ಲಿ ದುರಸ್ತಿ ಮಾಡುತ್ತಾರೆ. ರಾತ್ರಿ ಹೊತ್ತಿನಲ್ಲಿ ನಗರಸಭೆ ಮುಖ್ಯ ರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತದೆ.
-ಲತಾ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next