ಮಡಿಕೇರಿ: ಮುಂದಿನ ಐದು ದಿನಗಳ ಕಾಲ ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಗೆ ವಿರುದ್ಧವಾದ ವಾತಾವರಣ ಕೊಡಗಿನಲ್ಲಿದೆ.
ಹವಾಮಾನ ಇಲಾಖೆಯ ಪ್ರಕಟನೆಯಂತೆ ಜು.18 ರಿಂದ ಧಾರಾಕಾರ ಮಳೆ ಸುರಿಯಬೇಕಾಗಿತ್ತು. ಆದರೆ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಮಳೆಯ ನಿರೀಕ್ಷೆ ಹುಸಿಯಾಗಿದೆ. ಕಳೆದ ವರ್ಷ ಅತಿ ಮಳೆಯನ್ನು ಕಂಡಿದ್ದ ಕೊಡಗು ಈ ಬಾರಿ ಮಳೆಗಾಲದ ಮಳೆಯನ್ನೇ ಕಂಡಿಲ್ಲ.
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 6.53 ಮಿ.ಮೀ. ಕಳೆದ ವರ್ಷ ಇದೇ ದಿನ 36.94 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆೆ 718.12 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2236.82 ಮಿ.ಮೀ ಮಳೆಯಾಗಿತ್ತು. ಈ ಪ್ರಕಾರವಾಗಿ ಪ್ರಸ್ತುತ ವರ್ಷ ಜನವರಿಯಿಂದ ಜುಲೈ 18 ರವರೆಗೆ ಕೊಡಗಿನಲ್ಲಿ ಸುಮಾರು 1500 ಮಿ.ಮೀ ನಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಾದ್ಯಂತ ಮಳೆಗಾಲದಲ್ಲೂ ಬಿಸಿಲಿನ ವಾತಾವರಣವಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ರೈತರು ಮಳೆಯ ಕಣ್ಣಾಮುಚ್ಚಾಲೆಯಿಂದ ಕಂಗಾಲಾಗಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಮಳೆ 15.80 ಮಿ.ಮೀ. ಕಳೆದ ವರ್ಷ ಇದೇ ದಿನ 45.90 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 910.85 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3090.31 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.87 ಮಿ.ಮೀ. ಕಳೆದ ವರ್ಷ ಇದೇ ದಿನ 28.03 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 822.22 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1873.48 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 1.93 ಮಿ.ಮೀ. ಕಳೆದ ವರ್ಷ ಇದೇ ದಿನ 36.90 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 421.28 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1746.68 ಮಿ.ಮೀ. ಮಳೆಯಾಗಿತ್ತು. ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 13.80, ನಾಪೋಕ್ಲು 7, ಸಂಪಾಜೆ 31.80, ಭಾಗಮಂಡಲ 10.60, ಹುದಿಕೇರಿ 10, ಶ್ರೀಮಂಗಲ 1.20, ಸೋಮವಾರಪೇಟೆ ಕಸಬಾ 2, ಶಾಂತಳ್ಳಿ 2.60, ಸುಂಟಿಕೊಪ್ಪ 7 ಮಿ.ಮೀ. ಮಳೆಯಾಗಿದೆ.
ಚಿಕ್ಲಿ ಹೊಳೆ ಜಲಾಶಯವೂ ಬರಿದು!
ಮಳೆಯಿಲ್ಲದೆ ಬಿಸಿಲಕಾವು ಏರತೊಡಗಿದ ಪರಿಣಾಮ ಚಿಕ್ಲಿಹೊಳೆ ಜಲಾಶಯವು ಸೊರಗಿದಂತಿದೆ. ಕಳೆದ ವರ್ಷ ಹಾರಂಗಿ ಜಲಾಶಯದ ಜೊತೆ ಜೊತೆಗೆ ಚಿಕ್ಲಿಹೊಳೆ ಜಲಾಶಯ ಕೂಡ ತುಂಬಿಕೊಂಡು ಬೋರ್ಗರೆಯುತ್ತಾ ಹರಿಯುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು.ಆದರೆ ಪ್ರಸ್ತುತ ವರ್ಷ ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳು ಕಳೆದಿದ್ದರು ಚಿಕ್ಲಿಹೊಳೆ ಜಲಾಶಯದಲ್ಲಿ ನೀರಿಲ್ಲ. ಪ್ರತಿದಿನ ಇಲ್ಲಿಗೆ ಆಗಮಿಸುತ್ತಿರುವ ನೂರಾರು ಪ್ರವಾಸಿಗರು ಜಲಾಶಯ ಸೊರಗಿದ ಹಿನ್ನೆಲೆ ನಿರಾಶೆಯಿಂದ ಮರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಬಹುದೆನ್ನುವ ನಿರೀಕ್ಷೆ ಕೊಡಗಿನ ಜನರಲ್ಲಿ ಮಾತ್ರವಲ್ಲ ಪ್ರವಾಸಿಗರಲ್ಲೂ ಮೂಡಿದೆ.