Advertisement

ಹೋರಾಟದ ಸ್ವರೂಪ ಪಡೆಯುತ್ತಿದೆ ಜಿಲ್ಲಾ ರಂಗಮಂದಿರ ಯೋಜನೆ

10:05 PM Oct 18, 2019 | Team Udayavani |

ಮಹಾನಗರ: ಮೂರು ದಶಕಗಳಿಂದ ನನೆಗುದಿಯಲ್ಲಿರುವ ಜಿಲ್ಲಾ ರಂಗಮಂದಿರ ನಿರ್ಮಾಣ ಯೋಜನೆ ಈಗ ಹೋರಾಟದ ಸ್ವರೂಪ ಪಡೆದುಕೊಳ್ಳುತ್ತಿದೆ. ಕೂಡಲೇ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಡಿಸೆಂಬರ್‌ ಎರಡನೇ ವಾರದಲ್ಲಿ ಬೃಹತ್‌ ಮೆರವಣಿಗೆ ಮತ್ತು ಸಭೆ ನಡೆಸಲು ರಂಗಕರ್ಮಿಗಳು, ರಂಗಾಸಕ್ತರು ಸಿದ್ಧರಾಗುತ್ತಿದ್ದಾರೆ.

Advertisement

ಹೋರಾಟದ ರೂಪರೇಖೆಗಳ ಬಗ್ಗೆ ಚರ್ಚಿಸಲು ನ. 2ರಂದು ರಂಗಕರ್ಮಿಗಳು, ರಂಗಾಸಕ್ತರು, ಸಾಹಿತಿಗಳು, ಸಾರ್ವಜನಿಕರ ಸಭೆಯನ್ನು ನಗರದ ಕೆನರಾ ಪ.ಪೂ. ಕಾಲೇಜಿನಲ್ಲಿ ಕರೆಯಲಾಗಿದೆ.

ಪ್ರಸ್ತುತ ನಗರದಲ್ಲಿ ಬಹುತೇಕ ರಂಗ ಚಟುವಟಿಕೆಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪುರಭವನವನ್ನೇ ಆಶ್ರಯಿಸ ಬೇಕಾಗಿದೆ. ಪುರಭವನವು ಸಾಂಸ್ಕೃತಿಕ ಚಟುವಟಿಕೆಗಳಿಗಷ್ಟೇ ಮೀಸಲಾಗಿಲ್ಲ. ಸಭೆ, ಸಮಾರಂಭ, ರಾಜಕೀಯ ಸಮಾವೇಶಗಳಿಗೂ ಪ್ರಧಾನ ಕೇಂದ್ರವಾಗಿದೆ.

ನಗರದಲ್ಲಿ ರಂಗಮಂದಿರ ನಿರ್ಮಾಣ ಪ್ರಸ್ತಾವನೆಗೆ 30 ವರ್ಷಗಳ ಇತಿಹಾಸವಿದೆ. ಯೋಜನೆ ಸಿದ್ಧವಾದ ಬಳಿಕ ಹಲವು ಸರಕಾರಗಳು ಬಂದು ಹೋಗಿವೆ. ಹಲವು ಮಂದಿ ಉಸ್ತುವಾರಿ ಸಚಿವರಾಗಿದ್ದಾರೆ. 5ಕ್ಕೂ ಹೆಚ್ಚು ಬಾರಿ ಶಿಲಾನ್ಯಾಸಗಳಾಗಿವೆ. ಸ್ವತಃ ಮುಖ್ಯಮಂತ್ರಿಗಳೇ ಶಿಲಾನ್ಯಾಸ ಮಾಡಿದ್ದಾರೆ. ಹಲವು ಕಡೆ ನಿವೇಶನ ಗುರುತಿಸಿದ್ದರೂ ಸ್ಪಷ್ಟ ರೂಪರೇಖೆ ದೊರ ಕಿದ್ದು 2001ರಲ್ಲಿ. ನೀಲನಕಾಶೆ ತಯಾರಿಸಿ ಕದ್ರಿ ಗುಡ್ಡದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಯಿತು. ತೋಟಗಾರಿಕೆ ಇಲಾಖೆಯ ಆಕ್ಷೇಪದ ಕಾರಣ ಕೈಬಿಡಲಾಯಿತು.

ಏರುತ್ತಿದೆ ಯೋಜನ ವೆಚ್ಚ
ವಿಳಂಬ ನೀತಿಯಿಂದಾಗಿ ಆರಂಭದಲ್ಲಿ 4 ಕೋಟಿ ರೂ. ಇದ್ದ ಯೋಜನೆ 24 ಕೋಟಿ ರೂ.ಗೇರಿತು. ಅಂತಿಮವಾಗಿ ಬೊಂದೇಲ್‌ನ ಮಹಿಳಾ ಪಾಲಿಟೆಕ್ನಿಕ್‌ ಸಮೀಪ ಲಭ್ಯವಿರುವ 7 ಎಕ್ರೆ ಸರಕಾರಿ ಭೂಮಿಯ 3.35 ಎಕ್ರೆಯನ್ನು ಇದಕ್ಕೆ ಮೀಸಲಿರಿಸಲಾಗಿದೆ. 4 ವರ್ಷಗಳಾಗುತ್ತಾ ಬಂದರೂ ಅನುದಾನದ ಹೊಂದಾಣಿಕೆ ಸಮಸ್ಯೆ ಅಡ್ಡಿಯಾಗಿದೆ. 24 ಕೋ.ರೂ.ನಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಠಾಗೋರ್‌ ಕಲ್ಚರಲ್‌ ಕಾಂಪ್ಲೆಕ್ಸ್‌ ಸ್ಕೀಂನಡಿ ಶೇ. 60ರಷ್ಟು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಉಳಿದ 9.6 ಕೋ.ರೂ. ರಾಜ್ಯ ಸರಕಾರದ ಪಾಲು ಎಂದು ಅಂದಾಜಿಸಲಾಗಿತ್ತು. ಆದರೆ ಕೇಂದ್ರದ ಅನುದಾನ ದೊರೆಯದಿದ್ದಾಗ ಯೋಜ ನೆಯನ್ನು ಪರಿಷ್ಕರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ನಿರ್ಮಿಸಲು ಉದ್ದೇಶಿಸಲಾಯಿತು.

Advertisement

ಹೋರಾಟ ಅನಿವಾರ್ಯ
ಜಿಲ್ಲಾ ರಂಗಮಂದಿರ ನಿರ್ಮಾಣದ ಯೋಜನೆ ಸಿದ್ಧಗೊಂಡು ಹಲವು ವರ್ಷಗಳಾದರೂ ಕಾರ್ಯರೂಪಕ್ಕೆ ಬಂದಿಲ್ಲ. ನಿರಂತರ ಮನವಿ, ಸಲ್ಲಿಸಿದ್ದರೂ ಸ್ಪಂದನೆ ದೊರಕಿಲ್ಲ; ಹೋರಾಟ ಅನಿವಾರ್ಯವಾಗಿದೆ. ಹೋರಾಟದ ರೂಪರೇಖೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ.
– ಶಶಿರಾಜ್‌ ಕಾವೂರು, ರಂಗಮಂದಿರ ಹೋರಾಟ ಸಮಿತಿ ಅಧ್ಯಕ್ಷ

ಯಡಿಯೂರಪ್ಪ ಅವರಿಂದ ಶಿಲಾನ್ಯಾಸ
ಜಿಲ್ಲಾ ರಂಗಮಂದಿರಕ್ಕೆ 2010 ಆ. 23ರಂದು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಿದ್ದರು. ಈಗ ಮತ್ತೆ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಅವರ ಅವಧಿಯಲ್ಲೇ ನನಸು ಆಗುವ ಕಾಲ ಬರಲಿ ಎಂಬುದು ರಂಗಾಸಕ್ತರ ಹಾರೈಕೆ.

Advertisement

Udayavani is now on Telegram. Click here to join our channel and stay updated with the latest news.

Next