Advertisement
ಮಾರ್ಚ್ ಮೂರನೇ ವಾರದಿಂದ ಶುರುವಾದ ಲೋಕಸಭಾ ಚುನಾವಣಾ ಸಮರ ಏಪ್ರಿಲ್ ಮೂರನೇ ವಾರ ಅಂತ್ಯಗೊಂಡಿದೆ. ಒಂದು ತಿಂಗಳ ಕಾಲ ಕ್ಷೇತ್ರದಲ್ಲಿ ಸಚಿವರು, ಶಾಸಕರು, ಸಂಸದರೆಲ್ಲರೂ ಬಿಡುವಿಲ್ಲದ ಪ್ರಚಾರದಲ್ಲಿ ತಮ್ಮನ್ನು ತೊಡಗಿದ್ದರು. ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂಬ ಹಠ ತೊಟ್ಟು ಏಳು ಕ್ಷೇತ್ರಗಳಲ್ಲೂ ಅಭ್ಯರ್ಥಿಯೊಂದಿಗೆ ಅಬ್ಬರದ ಪ್ರಚಾರ ನಡೆಸಿದ್ದರು.
Related Articles
Advertisement
ಆದರೆ, ಸುಮಲತಾ ಅಂಬರೀಶ್ ಆಗಮನದಿಂದ ಇಡೀ ಕ್ಷೇತ್ರದೊಳಗೆ ಜೆಡಿಎಸ್ ಅಸ್ತಿತ್ವಕ್ಕೆ ಹೊಡೆತ ನೀಡುವಂತಹ ಬದಲಾವಣೆ ಗಾಳಿ ಎದ್ದಿತು. ಇದಕ್ಕೆ ಜೆಡಿಎಸ್‌ನವರು ಅಕ್ಷರಶಃ ಬೆಚ್ಚಿಬಿದ್ದರು. ಪಕ್ಷಕ್ಕೆ ಕ್ಷೇತ್ರದಲ್ಲಿ ನಿರಾಯಾಸ ಗೆಲುವು ದೊರೆಯುತ್ತದೆಂಬ ನಿರೀಕ್ಷೆ ಹುಸಿಯಾಗಲು ಆರಂಭಿಸಿತು. ಆಗ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಎಲ್ಲಾ ಶಾಸಕರು ಅಭ್ಯರ್ಥಿ ಪರವಾಗಿ ಟೊಂಕಕಟ್ಟಿ ನಿಂತರು. ಸುಮಲತಾ ಎಬ್ಬಿಸಿದ ಸುನಾಮಿಯನ್ನು ತಡೆಯು ವುದಕ್ಕೆ ತಂತ್ರಗಾರಿಕೆ ನಡೆಸಿದರು. ಅಭ್ಯರ್ಥಿಗಳ ಪರವಾಗಿ ಎಲ್ಲೆಡೆ ಚುನಾವಣಾ ಪ್ರಚಾರವನ್ನೂ ಬಿರುಸುಗೊಳಿಸಿದರು.
ಖಾಸಗಿ ವ್ಯವಹಾರಗಳತ್ತ ಚಿತ್ತ: ಮಂಡ್ಯ ಲೋಕಸಭಾ ಕ್ಷೇತ್ರದ ಮೂವರು ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರೆಲ್ಲರೂ ಒಂದು ತಿಂಗಳ ಕಾಲ ಕ್ಷೇತ್ರ ಬಿಟ್ಟು ಕದಲಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಸಹ ಎರಡು-ಮೂರು ದಿನಕ್ಕೊಮ್ಮೆ ಮಂಡ್ಯಕ್ಕೆ ಆಗಮಿಸಿ ಚುನಾವಣಾ ಸಮಯದಲ್ಲಿ ಜಿಲ್ಲೆಯೊಳಗೆ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇದರಿಂದ ಸಚಿವರು, ಶಾಸಕರೆಲ್ಲರೂ ವಿಶ್ರಾಂತಿ ಇಲ್ಲದೆ, ಅವಿರತವಾಗಿ ಚುನಾವಣಾ ಪ್ರಚಾರದಲ್ಲಿ ನಿರತರಾಗುವುದು ಅನಿವಾರ್ಯವಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಸುಡುಬಿಸಿಲಿನಲ್ಲಿ ಪ್ರಚಾರದಲ್ಲಿ ತೊಡಗಿದರೆ ರಾತ್ರಿ ಚುನಾವಣಾ ಕಾರ್ಯತಂತ್ರ ರೂಪಿಸುವುದಕ್ಕೆ ತಮ್ಮ ಸಮಯವನ್ನೆಲ್ಲಾ ಮೀಸಲಿಟ್ಟಿದ್ದರು. ಈ ವೇಳೆ ಕುಟುಂಬದವರೊಂದಿಗೆ ಕಾಲ ಕಳೆಯುವುದು, ತಮ್ಮ ಖಾಸಗಿ ವ್ಯವಹಾರಗಳತ್ತ ಗಮನಹರಿಸುವುದಕ್ಕೆ ಹಾಗೂ ವಿಶ್ರಾಂತಿ ಮಾಡಲಿಕ್ಕೂ ಅವರಿಗೆ ಅವಕಾಶವೇ ಸಿಗದಷ್ಟು ಬ್ಯುಸಿಯಾಗಿದ್ದರು.
ವಿರೋಧಿಗಳಿಗೆ ತಿರುಗೇಟು: ಚುನಾವಣೆ ಮುಗಿದ ನಂತರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಭಾನುವಾರವಷ್ಟೇ ನಗರಕ್ಕೆ ಆಗಮಿಸಿ ಮತದಾರರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಚುನಾವಣೆ ಮುಗಿದ ಮರುದಿನ ಅಭಿಷೇಕ್ ಅಂಬರೀಶ್ ನಾಗಮಂಗಲ ಹಾಗೂ ಮಂಡ್ಯಕ್ಕೆ ಆಗಮಿಸಿ ಬೆಂಬಲಿಗರೊಂದಿಗೆ ಚಹಾ ಸೇವನೆ ಮಾಡಿ ಹೋಗಿದ್ದಾರೆ. ಆ ಮೂಲಕ ಚುನಾವಣೆ ಮುಗಿಸಿ ಸಿಂಗಾಪೂರ್‌ಗೆ ಹಾರಲಿದ್ದಾರೆ ಎಂಬ ವಿರೋಧಿಗಳ ಮಾತಿಗೆ ತಿರುಗೇಟು ನೀಡಿದ್ದಾರೆ.
ಸಿಎಂ ಹೇಳಿಕೆಗಳಿಗೆ ಪ್ರತಿಕ್ರಿಯೆ: ಇನ್ನು ಚುನಾವಣೆ ನಂತರದಲ್ಲೂ ಜೆಡಿಎಸ್ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಆರೋಪಗಳನ್ನು ಮುಂದುವರಿಸಿದ್ದಾರೆ. ಚಿತ್ರನಟರನ್ನು ಗುರಿಯಾಗಿಸಿಕೊಂಡು ಪಶ್ಚಾತ್ತಾಪ ಹಾಗೂ ಪ್ರಾಯಶ್ಚಿತ್ತದ ಹೇಳಿಕೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವುದು ಬೆದರಿಕೆ ತಂತ್ರವೇ ಎಂದು ಪ್ರಶ್ನಿಸಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ನಿಖೀಲ್ ಚುನಾವಣೆಯಲ್ಲಿ ಸೋತರೆ ತಾವು ರಾಜಕೀಯ ಸನ್ಯಾಸತ್ವ ಸ್ವೀಕರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಸವಾಲು ಹಾಕಿದ್ದಾರೆ.
ಗೆಲುವಿನ ಉತ್ಸಾಹ: ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಚುನಾವಣಾ ಫಲಿತಾಂಶ ಹೊರಬೀಳುವುದಕ್ಕೆ ಇನ್ನೂ 30 ದಿನಗಳ ಕಾಲಾವಕಾಶವಿದೆ. ಜೆಡಿಎಸ್ ಸಚಿವರು, ಶಾಸಕರು, ಸಂಸದರು ಚುನಾವಣೆ ಮುಗಿಸಿ ನಿರಾಳರಾಗಿದ್ದಾರೆ. ಫಲಿತಾಂಶದ ದಿನಕ್ಕಾಗಿ ಎದುರು ನೋಡುತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಅಭ್ಯರ್ಥಿ ನಿಖೀಲ್ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬೆಂಬಲಿಗರಲ್ಲಿ ಗೆಲುವಿನ ಉತ್ಸಾಹವಿದ್ದು, ಅಂತಿಮವಾಗಿ ವಿಜಯಲಕ್ಷ್ಮೀ ಯಾರ ಕೊರಳಿಗೆಗೆ ಒಲಿಯುವಳ್ಳೋ ಕಾದು ನೋಡಬೇಕಿದೆ