Advertisement

ಜಿಲ್ಲೆಗಿಲ್ಲ ಮಹದಾಯಿ ಬಂದ್‌ ಬಿಸಿ

03:20 PM Jan 25, 2018 | Team Udayavani |

ಚಿಕ್ಕಬಳ್ಳಾಪುರ: ಮಹದಾಯಿ ವಿವಾದ ಇತ್ಯರ್ಥಕ್ಕೆ ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ರಾಜ್ಯದ ಕನ್ನಡಪರ ಸಂಘಟನೆಗಳ ಒಕ್ಕೂಟ ಗುರುವಾರ ನಡೆಸುತ್ತಿರುವ ಕರ್ನಾಟಕ ಬಂದ್‌ ಬಿಸಿ ಬಯಲು ಸೀಮೆಯ
ಚಿಕ್ಕಬಳ್ಳಾಪುರ ಜಿಲ್ಲೆಗಿಲ್ಲ.

Advertisement

ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳ ಅನಷ್ಠಾನಕ್ಕಾಗಿ ಹಾಗೂ ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳ ಅಂತರ್ಜಲ ವೃದ್ಧಿಗಾಗಿ ಇತ್ತೀಚೆಗೆ ರೂಪಿಸಿ ಅನುಷ್ಠಾನಗೊಳಿಸುತ್ತಿರುವ ಬೆಂಗಳೂರು ಸಂಸ್ಕರಿತ ಕೊಳಚೆ ನೀರಿನ ವಿರುದ್ಧ ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿದಂತೆ ಅನೇಕ ಕನ್ನಡಪರ ಹಾಗೂ ರೈತಪರ ಸಂಘಟನೆಗಳು ಕಳೆದ ಡಿಸೆಂಬರ್‌ ನಲ್ಲಿ ಚಿಕ್ಕಬಳ್ಳಾಪುರ ನಗರ ಹಾಗೂ ವಿಜಾಪುರದ ದಲಿತ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ದಲಿತಪರ ಸಂಘಟನೆಗಳು ಚಿಂತಾಮಣಿ ಬಂದ್‌ ಆಚರಿಸಿದ್ದವು. ಈ ಹಿನ್ನೆಲೆಯಲ್ಲಿ ಮಹದಾಯಿ ವಿಚಾರದಲ್ಲಿ ಜಿಲ್ಲೆಯಲ್ಲಿ ಗುರುವಾರ ಬಂದ್‌ ಆಚರಿಸಲು ನೀರಾವರಿ ಹೋರಾಟ ಸಮಿತಿ ಸೇರಿದಂತೆ ಕನ್ನಡಪರ ಹಾಗೂ ರೈತಪರ ಸಂಘಟನೆಗಳು ನಿರಾಸಕ್ತಿ ತೋರಿರುವುದರಿಂದ ಜಿಲ್ಲೆಯಲ್ಲಿ ಮಹದಾಯಿ ಬಂದ್‌ ನಡೆಯುತ್ತಿಲ್ಲ.

ಕರವೇಯಿಂದ ರೈಲು ತಡೆ: ಕರ್ನಾಟಕಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ರಾಜ್ಯ ಬಂದ್‌ ಬೆಂಬಲಿಸಿ ಚಿಕ್ಕಬಳ್ಳಾಪುರದಲ್ಲಿ ಗುರುವಾರ ಬೆಳಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಹದಾಯಿ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ರೈಲು ತಡೆ ಚಳುವಳಿ ಹಮ್ಮಿಕೊಳ್ಳಲಾಗಿದೆಯೆಂದು ಕರವೇ ತಾಲೂಕು ಅಧ್ಯಕ್ಷ ವಿಜಯಕುಮಾರ್‌ ತಿಳಿಸಿದ್ದಾರೆ.

ಹೋರಾಟಕ್ಕೆ ಬೆಂಬಲ ಇದೆ, ಬಂದ್‌ ಇಲ್ಲ: ಮಹದಾಯಿ ಹೋರಾಟದ ಬಂದ್‌ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಘಟಕ ಮತ್ತು ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಬಯಲುಸೀಮೆ ಭಾಗದಲ್ಲಿ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಹಲವಾರು ಬಾರಿ ಬಂದ್‌ ನಡೆಸಿರುವುದರಿಂದ ರೈತರು, ಕಾರ್ಮಿಕರು, ಶಾಲಾ-ಕಾಲೇಜು ಮಕ್ಕಳಿಗೆ ಮತ್ತು ಜನಸಾಮಾನ್ಯ ವರ್ಗಕ್ಕೆ ತೊಂದರೆಯಾಗುವುದನ್ನು ತಪ್ಪಿಸಲು ಬಂದ್‌ ನಡೆಸುತ್ತಿಲ್ಲವೆಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ತಿಳಿಸಿದ್ದಾರೆ.

ಮಹಾರಾಷ್ಟ್ರ, ಗೋವಾ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಿ ಕರ್ನಾಟಕ ರಾಜ್ಯದೊಂದಿಗೆ ಮಾತುಕತೆ ನಡೆಸಿ ಸಮನ್ವಯತೆ ಮತ್ತು ಸಾಮರಸ್ಯದಿಂದ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಅದೇ ರೀತಿ ಯಾಗಿ ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯನ್ನು ಪ್ರದರ್ಶಿಸಿ ಮಹಾರಾಷ್ಟ್ರ ಮತ್ತು ಗೋವಾದಲ್ಲಿನ ತಮ್ಮದೇ ವಿರೋಧ ಪಕ್ಷಗಳನ್ನು ಮನವೊಲಿಸಲು ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.

Advertisement

ಜಿಲ್ಲಾದ್ಯಂತ ಬಿಗಿ ಭದ್ರತೆ ಕರ್ನಾಟಕ ಬಂದ್‌ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಂದ್‌ ಆಚರಿಸುವ ಬಗ್ಗೆ ಯಾವ
ಸಂಘಟನೆಯೂ ಮುಂದೆ ಬಂದಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾದ್ಯಂತ ಬಿಗಿ ಪೊಲೀಸ್‌ ಭದ್ರತೆ ನಿಯೋಜಿಸಲಾಗುತ್ತಿದೆ. ಹೆಚ್ಚುವರಿಯಾಗಿ ಜಿಲ್ಲೆಗೆ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ಕರೆಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತೀಕರೆಡ್ಡಿ ತಿಳಿಸಿದ್ದಾರೆ.

ಶಾಲಾ, ಕಾಲೇಜ್ಗಿಲ್ಲ ರಜೆ
ಮಹದಾಯಿ ವಿಚಾರದಲ್ಲಿ ಕರ್ನಾಟಕ ಬಂದ್‌ ಆಚರಣೆ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಆದರೆ, ಜಿಲ್ಲೆಯಲ್ಲಿ ಬಂದ್‌ ಆಚರಿಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಗುರುವಾರ ಎಂದಿನಂತೆ ಶಾಲಾ, ಕಾಲೇಜುಗಳು ಕಾರ್ಯನಿರ್ವಹಿಸಲಿವೆ
ಎಂದು ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next