Advertisement

ಜಿಲ್ಲೆ ಜತೆ ಸಿದ್ಧಗಂಗಾ ಶ್ರೀ ಅವಿನಾಭಾವ ಸಂಬಂಧ

07:13 AM Jan 22, 2019 | |

ದೇವನಹಳ್ಳಿ: ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸೇರಿದಂತೆ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಅಪಾರ ಪ್ರಮಾಣದ ಭಕ್ತರನ್ನು ಹೊಂದಿದ್ದರು.

Advertisement

ದೇವನಹಳ್ಳಿಯ ವೀರಶೈವ-ಲಿಂಗಾಯಿತ ಸಮಾಜದ ಅಧ್ಯಕ್ಷ ಎಂ.ಎಸ್‌.ರಮೇಶ್‌ ಕುಮಾರ್‌ ಮತ್ತು ಮುಖಂಡ ಎಂ.ಎಸ್‌.ಉಮೇಶ್‌ ಅವರ ಮನೆಗಳಲ್ಲಿ 3 ರಿಂದ 4 ಬಾರಿ ಶಿವಪೂಜೆ, ಪಾದಪೂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. 1989 ರಲ್ಲಿ ನಡೆದ ಶ್ರೀ ನಗರೇಶ್ವರ ಸ್ವಾಮಿ ಕಲ್ಯಾಣ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

2016ರ ಏಪ್ರಿಲ್‌ 1ರಂದು ಶ್ರೀಗಳ ಜನ್ಮದಿನದ ಅಂಗವಾಗಿ ತಾಲೂಕಿನ ವಿಜಯಪುರ ಸರ್ಕಲ್‌ಗೆ ಶಿವಕುಮಾರ ಸ್ವಾಮಿ ವೃತ್ತ ಎಂದು ನಾಮಕರಣ ಮಾಡಲಾಗಿತ್ತು. 1998ರಲ್ಲಿ ಆಗಿನ ಶಾಸಕ ಜಿ.ಚಂದ್ರಣ್ಣ ನೇತೃತ್ವದಲ್ಲಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗವಹಿಸಿದ್ದರು. 

ಬೂದಿಗೆರೆಯಲ್ಲಿ ಸಿದ್ಧಗಂಗಾ ಶಾಲಾ, ಕಾಲೇಜು: ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿರುವ ಸಿದ್ಧಗಂಗಾ ಮಠದ ವತಿಯಿಂದ ಸಿದ್ಧಗಂಗಾ ಸಂಯುಕ್ತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ನಡೆಯುತ್ತಿದೆ. 1962-63 ರಲ್ಲಿ ಸಿದ್ಧಗಂಗಾ ಶಾಲೆ ಪ್ರಾರಂಭವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 80 ಸಾವಿರ ವಿದ್ಯಾರ್ಥಿಗಳು ಆ ಶಾಲೆಯಲ್ಲಿ ಓದಿದ್ದಾರೆ.

“ಭಾರತ ರತ್ನ’ ಪ್ರಶಸ್ತಿ ನೀಡಲಿ: ವೀರಶೈವ ಲಿಂಗಾಯಿತ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್‌.ರಮೇಶ್‌ ಕುಮಾರ್‌ ಮಾತನಾಡಿ, ಬಾಲ್ಯದಲ್ಲಿ 8 ತಿಂಗಳು ಶಿವಕುಮಾರ ಸ್ವಾಮಿಯವರ ಮಠದಲ್ಲಿ ನನ್ನ ಸಹೋದರನ ಜೊತೆಯಲ್ಲಿ ವ್ಯಾಸಂಗ ಮಾಡಿದ್ದೆ. ನಮ್ಮ ಮನೆಗೆ ಪಾದಪೂಜೆ ಸೇರಿದಂತೆ ಮತ್ತಿತರೇ ಕಾರ್ಯಕ್ರಮಗಳಿಗೆ ಬಂದಿದ್ದರು.

Advertisement

ನಾವು ಸಹ ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದೆವು. ಸ್ವಾಮೀಜಿ ಲಿಂಗೈಕ್ಯರಾಗಿರುವುದು ದುಃಖ ಉಂಡು ಮಾಡಿದೆ. ತ್ರಿವಿಧ ದಾಸೋಹಿ, ಅಕ್ಷರ ದಾಸೋಹಿ, ಅನ್ನ ದಾಸೋಹದ ಮೂಲಕ ಲೋಕ ಕಲ್ಯಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ದೇವರಿಗೆ ಕೇಂದ್ರ ಸರ್ಕಾರ ಇನ್ನಾದರೂ “ಭಾರತ ರತ್ನ’ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದರು. 

ಸಮಾಜಕ್ಕೆ ಶ್ರೀಗಳ ಕೊಡುಗೆ ಅಪಾರ: ಬೂದಿಗೆರೆ ಮುಖಂಡ ಶಿವಣ್ಣ ಮಾತನಾಡಿ, ನಾನು ಸಹ ಗ್ರಾಮದ ಸಿದ್ಧಗಂಗಾ ಸಂಯುಕ್ತ ಪ್ರೌಢಶಾಲೆಯಲ್ಲಿ ಓದಿದ್ದೇನೆ. ಸುಮಾರು 80 ಸಾವಿರ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದಿದ್ದಾರೆ. ಶಿವಕುಮಾರ ಸ್ವಾಮಿಗಳು ಲಕ್ಷಾಂತರ ಜನರಿಗೆ ಅಕ್ಷರ ಜ್ಞಾನ ನೀಡಿದ್ದಾರೆ. ಅಲ್ಲಿ ಓದಿದ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ.

111 ವರ್ಷವಾದರೂ ಪ್ರತಿನಿತ್ಯ ಶಿವಪೂಜೆ ಮಾಡುತ್ತಿದ್ದರು. ಸಮಾಜಕ್ಕೆ ಅವರ ಸೇವೆ ಅಪಾರ ಎಂದರು. ಬೂದಿಗೆರೆ ಗ್ರಾಪಂ ಮಾಜಿ ಸದಸ್ಯ ಪ್ರಭಾಕರ್‌ ಮಾತನಾಡಿ, 1962-63 ರಲ್ಲಿ ಸಿದ್ಧಗಂಗಾ ಮಠದಿಂದ ಸಿದ್ಧಗಂಗಾ ಸಂಯುಕ್ತ ವಿದ್ಯಾಲಯ ಪ್ರಾರಂಭವಾಗಿದೆ. ಯಾವುದೇ ಜಾತಿ, ಮತಗಳ ಭೇದವಿಲ್ಲದೇ ಎಲ್ಲರಿಗೂ ಸಮಾನವಾಗಿ ಹಾಗೂ ಉತ್ತಮವಾಗಿ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

ಸುಮಾರು 56 ವರ್ಷಗಳಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡುತ್ತಿದ್ದಾರೆ. ಪ್ರತಿ ಶಾಲಾ ವಾರ್ಷಿಕೋತ್ಸವಕ್ಕೆ ಶ್ರೀಗಳು ಇಲ್ಲಿಗೆ ಬರುತ್ತಿದ್ದರು. ಆದರೆ, ಕಳೆದ 25 ವರ್ಷಗಳಿಂದ ಬರುಲು ಸಾಧ್ಯವಾಗಿರಲಿಲ್ಲ. ಬೂದಿಗೆರೆ ಗ್ರಾಮಸ್ಥರ ಜತೆಗೆ ಸಿದ್ಧಗಂಗಾ ಶ್ರೀಗಳು ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಹೇಳಿದರು. 

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next