ಬೆಂಗಳೂರು: ಸೂಪರ್-30 ಎಂಜಿನಿಯರಿಂಗ್ ಕಾಲೇಜು ಯೋಜನೆಯಡಿ ಜಿಲ್ಲೆಗೊಂದು ಎಂಜಿನಿಯರಿಂಗ್ ಕಾಲೇಜನ್ನು ಉತ್ಕೃಷ್ಟ ರೀತಿಯಲ್ಲಿ ಅಭಿವೃದ್ಧಿಪಡಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ| ಕರಿಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಬೆಂಗಳೂರು ನಗರ ಬಿಟ್ಟು ಉಳಿದ ಎಲ್ಲ ಜಿಲ್ಲೆಗಳ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸರಕಾರಿ ಎಂಜಿನಿಯರಿಂಗ್ ಕಾಲೇಜು ಇಲ್ಲದ ಕಡೆ ಖಾಸಗಿ ಕಾಲೇಜುಗಳಿಗೆ ಪ್ರಾಮುಖ್ಯ ನೀಡಲಾಗುತ್ತದೆ. ಹೀಗೆ ಪ್ರತೀ ಜಿಲ್ಲೆಯ ಒಂದೊಂದು ಎಂಜಿನಿಯರಿಂಗ್ ಕಾಲೇಜು ಆಯ್ಕೆ ಮಾಡಿಕೊಂಡು, ಯೋಜನೆ ಅನು ಷ್ಠಾನಕ್ಕೆ ಸಂಬಂಧಿಸಿ ಶುಕ್ರವಾರ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥ ನಾರಾಯಣ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದೆ.
ಸೂಪರ್-30 ಯೋಜನೆಯಡಿ ಆಯ್ಕೆಯಾಗುವ ಎಲ್ಲ ಕಾಲೇಜುಗಳಲ್ಲಿ ಕೈಗಾರಿಕೆ ಅಥವಾ ಇಂದಿನ ಬೇಡಿಕೆಗೆ ಅನುಗುಣವಾಗಿ ಕನಿಷ್ಠ ಒಂದು ವಿಭಾಗವನ್ನು (ಕಂಪ್ಯೂಟರ್ ಸೈನ್ಸ್‌ಗೆ ಮೊದಲ ಆದ್ಯತೆ) ವಿಶ್ವ ದರ್ಜೆಯ ಗುಣಮಟ್ಟಕ್ಕೆ ಏರಿಸಲಾಗುತ್ತದೆ. ಕಟ್ಟಡಗಳ ನಿರ್ಮಾಣ, ಹೊಸ ಕಾಲೇಜುಗಳನ್ನು ತೆರೆಯಲು ಇದರಲ್ಲಿ ಅವಕಾಶವಿಲ್ಲ. ಕೇವಲ ಬೋಧನ ಗುಣಮಟ್ಟ ಸುಧಾರಣೆ, ಪ್ರಯೋಗಾಲಯಗಳ ಸ್ಥಾಪನೆ, ವಿದೇಶಿ ಶಿಕ್ಷಣ ಸಂಸ್ಥೆ ಮತ್ತು ಉದ್ಯಮಗಳ ಸಹಭಾಗಿತ್ವಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವರು ಸಭೆಯ ಅನಂತರ ಮಾಹಿತಿ ನೀಡಿದರು.
ಇದನ್ನೂ ಓದಿ:ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ
ಯೋಜನೆ ಜಾರಿಗೆ ಪ್ರೊ| ಕರಿಸಿದ್ದಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದ್ದು, ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳು ಸಮಿತಿಯಲ್ಲಿರುತ್ತಾರೆ. ಇದರ ವೆಚ್ಚವನ್ನು ಕಂಪೆನಿಗಳ ಸಿಎಸ್‌ಆರ್ ನಿಧಿ, ವಿಟಿಯು ಮತ್ತು ಆಯ್ಕೆಯಾದ ಸಂಸ್ಥೆಗಳು ಸಮನಾಗಿ ಭರಿಸಲಿವೆ. ಆಯಾ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಮೂಲಕ ದೇಣಿಗೆ ಸಂಗ್ರಹಿಸುವ ಚಿಂತನೆಯೂ ಇದೆ. ಆಯ್ಕೆಯಾದ ಎಂಜಿನಿಯರಿಂಗ್ ಕಾಲೇಜುಗಳು ಕೈಗಾರಿಕೆಗಳೊಂದಿಗೆ ಸಹಯೋಗ, ಖಾಸಗಿ ಸಹಭಾಗಿತ್ವಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.