ಹಾವೇರಿ: ಲಾಕ್‌ಡೌನ್ ಘೋಷಣೆ ಬಳಿಕ ತಮ್ಮ ಊರಿಗೆ, ಉದ್ಯೋಗ ಸ್ಥಳಕ್ಕೆ ಹೋಗಲು ಸಾಧ್ಯವಾಗದೆ ಉಳಿದ 289 ಜನರನ್ನು ಗುರುತಿಸಲಾಗಿದ್ದು ಅವರನ್ನು ಕಳುಹಿಸಿಕೊಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಮೊದಲ ಹಂತವಾಗಿ ಅವರು ಯಾವ ಸ್ಥಳಕ್ಕೆ ಹೋಗುತ್ತಾರೆ, ಏಕೆ ಹೋಗುತ್ತಿದ್ದಾರೆ, ಅಲ್ಲಿ ಅವರ ಉದ್ಯೋಗ ಏನು? ಅವರ ವಾಸ್ತವ್ಯದ ವಿಳಾಸ ಹೀಗೆ ಪ್ರಥಮ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎರಡನೇ ಹಂತವಾಗಿ ಅವರೆಲ್ಲರ ಆರೋಗ್ಯ ತಪಾಸಣೆ ಮಾಡಬೇಕಿದ್ದು ಈ ಎರಡು ಹಂತಗಳ ಬಳಿಕ ಬಸ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಳುಹಿಸುವ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ.
ಹೊರ ಜಿಲ್ಲೆಗಳಿಗೆ ಹೋಗುವವರಲ್ಲಿ ಮೈಸೂರು, ಬೆಂಗಳೂರು, ಗದಗ, ಮಂಗಳೂರು, ಕೊಪ್ಪಳ ಜಿಲ್ಲೆಗಳಿಗೆ ಹೋಗುವವರ ಸಂಖ್ಯೆ ಅಧಿಕವಾಗಿದೆ. ಯಾರು ಎಲ್ಲಿಗೆ ಹೋಗಬೇಕು ಎಂಬುದನ್ನು ಶನಿವಾರ ನಿಖರ ಮಾಹಿತಿ ಪಡೆದು ಪ್ರಯಾಣಕ್ಕೆ ವ್ಯವಸ್ಥೆ ಮಾಡಲು ಸಜ್ಜು ಮಾಡಿಕೊಳ್ಳಲಾಗಿದೆ.
ಏ. 24ರಂದು ಶನಿವಾರ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಭೆ ನಡೆಸಿ, ಶೇ. 40 ಸೀಟುಗಳಂತೆ 289 ಜನರಿಗೆ ಎಷ್ಟು ಬಸ್ ಬೇಕಾಗಬಹುದು ಎಂಬುದನ್ನು ನಿರ್ಧರಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಹೀಗೆ ಹೊರ ಜಿಲ್ಲೆಗಳಿಗೆ ಹೋಗುವವರಿಗೆ ಒಂದು ಹೊತ್ತಿನ ಊಟದ ಪ್ಯಾಕೆಟ್ ಮಾಡಿಕೊಡಲು ಸಹ ಜಿಲ್ಲಾಡಳಿತ ತೀರ್ಮಾನಿಸಿದೆ.
ಆರೋಗ್ಯ ತಪಾಸಣೆ ವೇಳೆ ಅನಾರೋಗ್ಯ, ಜ್ವರ, ಶೀತ, ಉಸಿರಾಟಸ ತೊಂದರೆ ಕಂಡು ಬಂದರೆ ಅವರನ್ನು ಇಲ್ಲಿಯೇ ಕ್ವಾರಂಟೈನ್ ಮಾಡಲಾಗುತ್ತದೆ. ಅದೇ ರೀತಿ ಹೊರ ಜಿಲ್ಲೆಗಳಿಂದ ಬರುವವರನ್ನು ಜಿಲ್ಲೆಯ ಗಡಿಯಲ್ಲಿಯೇ ಆರೋಗ್ಯ ತಪಾಸಣೆ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.