ಯಲಹಂಕ: ಯಲಹಂಕ ತಾಲೂಕಿನ ಹೆಸರಘಟ್ಟದಲ್ಲಿ ತಿಂಗಳ ಹಿಂದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ 15 ದಿನಗಳ ಒಳಗಾಗಿ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಘೋಷಣೆ ಮಾಡಿದ್ದರಾದರೂ, ಈ ವರೆಗೆ ಪರಿಹಾರದ ಹಣವನ್ನು ಕುಟುಂಬಕ್ಕೆ ನೀಡಿಲ್ಲ. ಹೀಗಾಗಿ ಮೃತ ರೈತನ ಕುಟುಂಬಸ್ಥರು ಇನ್ನೂ ಸಂಕಷ್ಟದಲ್ಲೇ ಜೀವನ ದೂಡುತ್ತಿದ್ದಾರೆ.
ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ಸಮೀಪದ ಹೆಸರಘಟ್ಟ ಹೋಬಳಿಯ ಹನಿಯೂರು ಗ್ರಾಮದ ರೈತ ರಾಮೇಗೌಡ ಬೆಳೆ ಸಾಲ ಮತ್ತು ಲೇವಾದೇವಿದಾರರಿಂದ ಸಾಲ ಪಡೆದು, ಹಿಂದಿರುಗಿಸಲಾಗದೆ ತಿಂಗಳ ಹಿಂದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ನಡೆದ ಮರುದಿನವೇ ರೈತನ ಮನೆಗೆ ಧಾವಿಸಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ ಶಂಕರ್, ಕುಟುಂಬಸ್ಥರಿಗೆ ಸ್ವಾಂತ್ವಾನ ಹೇಳಿದ್ದರು.
15ದಿನದೊಳಗೆ 5ಲಕ್ಷ ರೂ ಪರಿಹಾರ, ಮಕ್ಕಳ ವಿದ್ಯಾಭ್ಯಾಸ ವೆಚ್ಚ ಭರಿಸುವುದಾಗಿಯೂ, ಮೃತ ರೈತನ ಪತ್ನಿ ಸಾವಿತ್ರಮ್ಮಗೆ ತಕ್ಷಣದಿಂದಲೇ 2 ಸಾವಿರ ರೂ ವಿಧವಾ ವೇತನ ಕೊಡಿಸುವುದಾಗಿಯೂ ಘೋಷಿಸಿದ್ದರು. ಆದರೆ ಪರಿಹಾರದ ಹಣವಾಗಲಿ, ಸಾವಿತ್ರಮ್ಮಗೆ ವಿಧವಾ ವೇತನವಾಗಿಲಿ ಇನ್ನೂ ಸಿಕ್ಕಿಲ್ಲ. ಹೀಗಾಗಿ ಕುಂಟುಬ ಕಂಗಾಲಾಗಿದೆ.
ನಮಗೆ ಯಾವುದೇ ಪರಿಹಾರ ಹಣ ಬಂದಿಲ್ಲ. ತಿಂಗಳಿಗೆ 2 ಸಾವಿರ ವಿಧವಾ ವೇತನ ಕೊಡುವುದಾಗಿ ಡಿಸಿ ಸಾಹೇಬ್ರು ಹೇಳಿದ್ದರು. ಅದೂ ಬಂದಿಲ್ಲ. ದುಡಿಮೆಯೂ ಇಲ್ಲ, ಆದಾಯವೂ ಇಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸುವುದೂ ಕಷ್ಟವಾಗುತ್ತಿದೆ ಎನ್ನುತ್ತಾರೆ ಮೃತ ರಾಮೇಗೌಡರ ಪತ್ನಿ ಸಾವಿತ್ರಮ್ಮ.
ಪೊಲೀಸ್ ಇಲಾಖೆಯಿಂದ ಸಾವಿನ ದೃಡೀಕರಣ ಪತ್ರ, ಕೃಷಿ ಇಲಾಖೆಯಿಂದ ದಾಖಲೆ ಪತ್ರಗಳು ತಾಲೂಕು ಕಚೇರಿಗೆ ತಲುಪುವುದು ವಿಳಂಬವಾಗಿದೆ. ಒಂದೆರಡು ದಿನಗಳೊಳಗೆ ದಾಖಲೆಗಳನ್ನು ತರಿಸಿಕೊಂಡು ಪರಿಹಾರಧನ, ವಿಧವಾ ವೇತನ ಸಂಬಂಧ ಕ್ರಮ ಕೈಗೊಳ್ಳಲಾಗುವುದು.
-ಮಂಜುನಾಥ್, ಬೆಂಗಳೂರು ಉತ್ತರ ಅಪರ ತಾಲ್ಲೂಕು ತಹಶೀಲ್ದಾರ್
ಈಗಾಗಲೇ ರೈತನ ಆತ್ಮಹತ್ಯೆ ಎಂದು ದಾಖಲಿಕೊಳ್ಳಲಾಗಿದೆ. ತಹಶೀಲ್ದಾರ್ ಕಚೇರಿಯಿಂದ ವರದಿ ಬಂದ ನಂತರ ಒಂದು ವಾರದೊಳಗೆ ಪರಿಹಾರ ಹಣ ರೈತನ ಕುಟುಂಬಕ್ಕೆ ನೀಡಲಾಗುವುದು
-ರಂಗನಾಥ್, ಕಂದಾಯ ಉಪವಿಭಾಗಾಧಿಕಾರಿ