Advertisement

Plastic ಮಿಶ್ರಿತ ಅಕ್ಕಿ ವಿತರಣೆ ವದಂತಿ ಪಡಿತರದಲ್ಲಿರುವುದು ಸಾರವರ್ಧಿತ ಅಕ್ಕಿ

11:21 PM Aug 22, 2023 | Team Udayavani |

ಉಡುಪಿ/ತೆಕ್ಕಟ್ಟೆ: ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ನೀಡುತ್ತಿರುವ ಅಕ್ಕಿಯಲ್ಲಿ ಸಾರವರ್ಧಿತ ಅಕ್ಕಿಯನ್ನು ಬೆರೆಸಿ ನೀಡಲಾಗುತ್ತಿದೆ. ಈ ಬಗ್ಗೆ ಗ್ರಾಮೀಣ ಜನರಿಗೆ ಸರಿಯಾದ ಮಾಹಿತಿ ಒದಗಿಸದೇ ಇರುವುದರಿಂದ ಪ್ಲಾಸ್ಟಿಕ್‌ ಅಕ್ಕಿ ನೀಡಲಾಗುತ್ತಿದೆ ಎನ್ನುವ ನೆಲೆಯಲ್ಲಿ ಆತಂಕ ಸೃಷ್ಟಿಯಾಗುತ್ತಿದೆ.

Advertisement

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಸಾರವರ್ಧಿತ ಅಕ್ಕಿ ವಿತರಣೆ ಯೋಜನೆಯಡಿ ಸಾರವರ್ಧಿತ ಅಕ್ಕಿ ಬಳಸಬೇಕು ಎನ್ನುವ ನಿಟ್ಟಿನಿಂದ ಐರನ್‌, ಫೋಲಿಕ್‌ ಆ್ಯಸಿಡ್‌, ವಿಟಮಿನ್‌ ಬಿ 12 ಅಂಶವನ್ನು ಒಳಗೊಂಡಿರುವ ಫೋರ್ಟಿಫೈಡ್‌ ಅಕ್ಕಿಯನ್ನು ಸಾಮಾನ್ಯ ಅಕ್ಕಿಗೆ ಮಿಶ್ರಣ ಮಾಡಿಯೇ ಕಳೆದೆರಡು ತಿಂಗಳಿನಿಂದಲೂ ರಾಜ್ಯದ ಎಲ್ಲ ಪಡಿತರ ವಿತರಣ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ.

ಪೌಷ್ಟಿಕಾಂಶ ಹೆಚ್ಚು ನೀಡುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ಆಹಾರ, ಗ್ರಾಹಕ ವ್ಯವಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಡುಪಿ ಜಿಲ್ಲಾ ಪ್ರಭಾರ ಉಪನಿರ್ದೇಶಕ ರವೀಂದ್ರ ಮಾಹಿತಿ ನೀಡಿದ್ದಾರೆ.
ಸಾರವರ್ಧಿತ ಅಕ್ಕಿಯ ಬಗ್ಗೆ ಎಲ್ಲ ನ್ಯಾಯಬೆಲೆ ಅಂಗಡಿಯವರಿಗೆ ಮಾಹಿತಿ ಒದಗಿಸಿದ್ದೇವೆ. ಅಕ್ಕಿ ವಿತರಣೆಯ ಸಂದರ್ಭದಲ್ಲಿ ಇದರ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು ಮತ್ತು ಅಕ್ಕಿ ಬೇಯಿಸಿದ ಸಂದರ್ಭದಲ್ಲಿ ಸ್ವಲ್ಪ ಮೆತ್ತಗೆ ಆಗುತ್ತದೆ. ಇದು ಪ್ಲಾಸ್ಟಿಕ್‌ ಅಕ್ಕಿಯಲ್ಲ. ಸಾರವರ್ಧಿತ ಅಕ್ಕಿ ಎಂಬ ಮಾಹಿತಿ ನೀಡಬೇಕು ಎಂದು ತಿಳಿಸಿದ್ದೇವೆ ಎಂದಿದ್ದಾರೆ.

ಕೊಮೆ ಕೊರವಡಿಯಲ್ಲಿ ಗೊಂದಲ
ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ಪಡಿತರ ವಿತರಣೆ ವಿಭಾಗದಲ್ಲಿ ವಿತರಿಸಲಾದ ಅಕ್ಕಿ ಪ್ಲಾಸ್ಟಿಕ್‌ ಮಿಶ್ರಿತವಾಗಿದೆ ಎಂದು ಪರಿಸರದಲ್ಲಿ ಸುದ್ದಿ ಹರಡುತ್ತಿದಂತೆ ಕುಂದಾಪುರ ಆಹಾರ ನಿರೀಕ್ಷಕ ಸುರೇಶ್‌ ಸ್ಥಳಕ್ಕೆ ಧಾವಿಸಿ ಗೊಂದಲಕ್ಕೆ ತೆರೆ ಎಳೆದ ಘಟನೆ ಆ. 22ರಂದು ನಡೆದಿದೆ.

ಸರಕಾರ ಈಗಾಗಲೇ ಪಡಿತರ ವಿತರಣ ಕೇಂದ್ರಗಳಲ್ಲಿ ಸಾಮಾನ್ಯ ಅಕ್ಕಿಯ ಜತೆಗೆ ಸಾಧಾರಣ ಅಕ್ಕಿಯಂತೆಯೇ ಬಣ್ಣ, ರುಚಿ ಹೊಂದಿರುವ ಸಾರವರ್ಧಿತ ಅಕ್ಕಿಯನ್ನು ಸೇರಿಸಿ ವಿತರಿಸುತ್ತಿದೆ. ಗ್ರಾಹಕರು ಪ್ಲಾಸ್ಟಿಕ್‌ ಅಕ್ಕಿ ಎಂದು ಭಾವಿಸಿ ಗೊಂದಲಕ್ಕೀಡಾಗಿದ್ದಾರೆ. ನಾನು ಸ್ಥಳಕ್ಕೆ ತೆರಳಿ ಚೀಲದಲ್ಲಿರುವ ಸಾರವರ್ಧಿತ ಅಕ್ಕಿಯನ್ನು ಸೇವಿಸಿ ಜನರಲ್ಲಿ ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದ್ದೇನೆ.
– ಸುರೇಶ್‌
ಆಹಾರ ನಿರೀಕ್ಷಕರು, ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next