Advertisement

ದೂರಗಾಮಿ ದೃಷ್ಟಿ ಇಲ್ಲದ ಕಾನೂನುಗಳ ಅವಾಂತರ

10:09 AM Mar 06, 2020 | mahesh |

ಸರಕಾರ ರೂಪಿಸುವ ಕಾನೂನಿನ ಲೋಪದೋಷಗಳು ತಕ್ಷಣ ಜನಮಾನಸಕ್ಕೆ ತಿಳಿದುಬರುವುದಿಲ್ಲ. ಕಾನೂನು ಅನುಷ್ಠಾನಕ್ಕೆ ಬರುವಾಗ ಬಾಧಿತರು ಎಚ್ಚರವಾಗುತ್ತಾರೆ. ಅದಕ್ಕೂ ಮುನ್ನ ಕಾನೂನಿನ ದೂರಗಾಮಿ ಪರಿಣಾಮವನ್ನು ವಿವೇಚಿಸುವ ಗೋಜಿಗೆ ಜನ ಸಾಮಾನ್ಯರು ಹೋಗುವು ದಿಲ್ಲ. ಭಾರತದಂತ ದೇಶದಲ್ಲಿ ಅದು ಸಾಧ್ಯವಾಗದ ಮಾತು. ಜಾರಿ ಯಾಗುವಾಗ ನೊಂದವರು ಹಾಗೂ ಅತೃಪ್ತರು ಚಡಪಡಿಸುವುದನ್ನು ಮಾತ್ರ ಇಂದು ನಾವು ನೋಡುತ್ತೇವೆ. ಈ ಹೇಳಿಕೆಗೆ ಒಂದು ಜ್ವಲಂತ ಉದಾಹರಣೆ ಕರ್ನಾಟಕ ಸಹಕಾರಿ ಕಾನೂನು 1959. ಈ ಕಾನೂನಿನ ಸೆಕ್ಷನ್‌ 20ಕ್ಕೆ ಉಪ (GIV) ಮತ್ತು ಉಪ (GV)ನ್ನು ಸೇರ್ಪಡೆಗೊಳಿಸಿ 2013ರಲ್ಲಿ ತಿದ್ದುಪಡಿ ತರಲಾಗಿದೆ. ಪ್ರಸ್ತಾಪಿತ ಸೆಕ್ಷನ್‌ ಮತದಾನಕ್ಕೆ ಸಂಬಂಧಿಸಿದ್ದಾಗಿದೆ. ಸೇರ್ಪಡೆಗೊಳಿಸಿದ ಉಪವಿಧಿಗಳು ಸಹಕಾರಿ ಸಂಸ್ಥೆಯ ಸದಸ್ಯನ ಮತದಾನದ ಹಕ್ಕನ್ನು ಮೊಟಕುಗೊಳಿಸುತ್ತದೆ. ಹಾಗಾಗಿ ಈ ತಿದ್ದುಪಡಿಗಳ ಕುರಿತಾದ ಚರ್ಚೆ ಇಲ್ಲಿ ಪ್ರಸ್ತುತ.

Advertisement

ಉಪವಿಧಿ G IV: ಐದು ಸಾಮಾನ್ಯ ಸಭೆಗಳ ಪೈಕಿ ಮೂರು ಸಭೆಗಳಿಗೆ ಗೈರು ಹಾಜರಾಗುವ ಒಬ್ಬ ಸದಸ್ಯ. ಒಬ್ಬ ಪ್ರತಿನಿಧಿ ಅಥವಾ ಒಬ್ಬ ಡೆಲಿಗೇಟ್‌’ ಸೇರ್ಪಡೆಗೊಳಿಸಿದ ಕಲಂ (GV): “ಮೂರು ನಿರಂತರ ಸಹಕಾರ ವರ್ಷಗಳವರೆಗೆ ಒಂದು ಸಹಕಾರ ಸಂಘದ ಉಪವಿಧಿಗಳಲ್ಲಿ ಪ್ರತಿ ವರ್ಷದಲ್ಲಿ ಒಬ್ಬ ಸದಸ್ಯನು ಬಳಸಿಕೊಳ್ಳಲು ನಿರ್ದಿಷ್ಟಪಡಿಸಬಹುದಾದಂಥ ಕನಿಷ್ಟ ಸೇವೆಗಳನ್ನು ಅಥವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ತಪ್ಪಿದ ಒಬ್ಬ ಸದಸ್ಯ ಅಥವಾ ಪ್ರತಿನಿಧಿ’ “ಪರಂತು (GIV) ಹಾಗೂ (GV)ನೇ ಉಪಖಂಡಗಳಲ್ಲಿರುವ ಸದಸ್ಯರ ಸಂದರ್ಭಗಳಲ್ಲಿ ಅಂಥ ಸದಸ್ಯರು ಮೂರು ವರ್ಷಗಳ ಅವಧಿಗೆ ಸರ್ವ ಸದಸ್ಯರು ಸಭೆ ಅಥವಾ ಮಂಡಳಿ ಯ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿರತಕ್ಕದ್ದಲ್ಲ’.

ಒಬ್ಟಾತ ಇದೇ ಪ್ರಸ್ತಾಪಿತ ಕಾಯಿದೆಯ ಸೆಕ್ಷನ್‌ 16(1)ರಂತೆ ಓರ್ವ ಸದಸ್ಯನಾಗಿರುತ್ತಾನೆ. ಸದಸ್ಯತ್ವ ಪಡೆಯಲು ವಿಧಿಸಿದ ಷರತ್ತಿನಲ್ಲಿ, ಸಾಮಾನ್ಯ ಸಭೆಗೆ ಹಾಜರಾತಿ ಕಡ್ಡಾಯ ಎಂಬ ವಿಧಿ ಇಲ್ಲ. ಹಾಗೆ ಸದಸ್ಯತ್ವ ರದ್ದುಪಡಿಸಲು ಕಾನೂನಿನಲ್ಲಿ ಇರುವ ಅವಕಾಶದಂತೆ ಆತನ ಸದಸ್ಯತ್ವ ರದ್ದಾಗಿಯೂ ಇರುವುದಿಲ್ಲ. ಅರ್ಥಾತ್‌ ಆತನ ಸದಸ್ಯತ್ವ ಊರ್ಜಿತ ದಲ್ಲಿಯೇ ಇರುತ್ತದೆ. ಆದರೆ ಮೇಲೆ ಹೇಳಿದ ಕಾನೂನಿನಂತೆ ಆ ಸದಸ್ಯ ಸಹಕಾರಿ ಸಂಸ್ಥೆಯ ಆಡಳಿತಕ್ಕೆ ಆಯ್ಕೆಯಾಗಿ ತಕ್ಕ ಕಾರ್ಯಕಾರಿ ಸಮಿತಿ ಯ ಆಯ್ಕೆಯ ಚುನಾವಣೆಯಲ್ಲಿ “ಹಿಂದಿನ ಐದು ಸಾಮಾನ್ಯ ಸಭೆಗಳಲ್ಲಿ 3ರಲ್ಲಿ ಹಾಜರಾಗಲಿಲ್ಲ’ ಎಂಬ ಕಾರಣಕ್ಕಾಗಿ ಮತದಾನದಿಂದ ವಂಚಿತ ನಾಗುತ್ತಾನೆ. ಇದು ಸಂವಿಧಾನದ ಮೂಲಾ ಶಯಕ್ಕೆ ವಿರುದ್ಧ. ಏಕೆಂದರೆ ನಮ್ಮ ಸಂವಿಧಾನ ಸಮಾನ ಅವಕಾಶ ಕಲ್ಪಿಸುತ್ತದೆ. ಆ ಅವಕಾಶದ ದುರ್ಬ ಳಕೆ ಮಾತ್ರ ಅಪರಾಧ ಎಂದು ಪರಿಗಣಿಸಲ್ಪಟ್ಟಿದೆಯೇ ಹೊರತು ಬಳಕೆ ಮಾಡಿಕೊಳ್ಳದಿರುವುದು ಅಪರಾಧವಲ್ಲ. ಸಾಮಾನ್ಯಸಭೆಗೆ ಹಾಜರಾ ಗುವುದು ಸದಸ್ಯನಿಗೆ ನೀಡಿದ ಅವಕಾಶ. ಹಾಜರಾಗದೆ ಇರುವುದು ಅಪರಾಧವಾಗುವುದು ಹೇಗೆ? ಸಹಕಾರಿ ಕ್ಷೇತ್ರದಲ್ಲಿಯೂ ಪ್ರಜಾಪ್ರತಿನಿಧಿ ತತ್ವ ಪಾಲನೆಯಾಗುತ್ತದೆ.

ಸಾಮಾನ್ಯ ಸಭೆಯಲ್ಲಿ ಸದಸ್ಯರು ಆ ಮೊದಲೇ ಆಯ್ಕೆ ಮಾಡಿದ ಕಾರ್ಯ ಕಾರಿ ಸಮಿತಿಯ ಸದಸ್ಯರು ಇರುತ್ತಾರೆ. ಓರ್ವ ಸಾಮಾನ್ಯ ಸದಸ್ಯ ಸಂಸ್ಥೆಯ ಸಾಮಾನ್ಯ ಸಭೆಗೆ ಹಾಜರಾಗದಿದ್ದರೆ ಸೊಸೈಟಿಗೆ ಯಾವ ನಷ್ಟವೂ ಇಲ್ಲ. ಗೈರುಹಾಜರಿಯ ಕಾರಣಕ್ಕಾಗಿ ಸದಸ್ಯನ ಹೆಸರನ್ನು ಮತ ದಾರರ ಪಟ್ಟಿಯಿಂದ ತೆಗೆದು ಹಾಕುವುದು ಎಷ್ಟಕ್ಕೂ ಸಮರ್ಥ ನೀಯವಲ್ಲ. ಈ ಕಾನೂನು ಸಾಮಾನ್ಯಸಭೆಗೆ ಸದಸ್ಯನ ಹಾಜರಾತಿಯನ್ನು ಇನ್ನೊಂದು ರೀತಿಯಲ್ಲಿ ಕಡ್ಡಾಯಗೊಳಿಸುತ್ತದೆ. ಇಂಥ ಕಾನೂನು ರೂಪಿಸುವಾಗ ವಾಸ್ತವ ಪ್ರಜ್ಞೆ ಅಗತ್ಯ. ಸಭೆಯ ಏರ್ಪಾಟು ಅಷ್ಟು ಸುಲಭದ ಕೆಲಸವೇ. ಅದಕ್ಕಾಗಿಯೇ ಕಾಯಿದೆಯಲ್ಲಿ ಕನಿಷ್ಟ ಕೋರಂನ್ನು ಅಳವಡಿಸಲಾಗಿದೆ. ತಿದ್ದುಪಡಿಯಲ್ಲಿ ಸೇರ್ಪಡೆಗೊಳಿಸಿದ 20-(JV)ರಂತೆ ನಿರ್ದಿಷ್ಟಪಡಿಸಿದ ಸೇವೆಗಳನ್ನು ಬಳಸಿಕೊಳ್ಳದ ಸದಸ್ಯನ ಮತದಾನದ ಹಕ್ಕು ಮೊಟಕು ಗೊಳ್ಳುತ್ತದೆ. ಸಹಕಾರಿ ಆಂದೋಲನಕ್ಕೆ ಪ್ರೇರಣೆಯೇ ಕೃಷಿ ಹಾಗೂ ಗ್ರಾಮೀಣ ಪ್ರದೇಶದ ಉನ್ನತೀಕರಣ. ಈಗ ಈ ಗ್ರಾಮೀಣ ಪ್ರದೇಶದಲ್ಲಿ ರುವ ವ್ಯವಸಾಯ ಸಹಕಾರಿ ಸಂಸ್ಥೆಗಳು ನಗರ ಪ್ರದೇಶದಲ್ಲಿರುವ ವಾಣಿಜ್ಯ ಬ್ಯಾಂಕ್‌ಗಳು ನಡೆಸುವ ವಹಿವಾಟನ್ನು ನಡೆಸಲು ಅವಕಾಶ ಹೊಂದಿವೆ. ಇದರಿಂದಾಗಿ ಕೃಷಿಕನಲ್ಲದವನೂ ಈ ಸಹಕಾರಿ ಸಂಸ್ಥೆಯಲ್ಲಿ ಸದಸ್ಯನಾಗಲು ಅರ್ಹನಾಗಿದ್ದಾನೆ. ಈ ಬ್ಯಾಂಕ್‌ ವ್ಯವಹಾರದ ಬಗ್ಗೆ ಸಹಕಾರಿ ಸಂಸ್ಥೆ ರೂಪಿಸುವ ಬೈಲಾ ಆರ್‌ಬಿಐ ಸೂಚನೆಯ ಮಿತಿಯೊಳಗೇ ಇರತಕ್ಕದ್ದು. ಸದಸ್ಯನೋರ್ವ ಸಹಕಾರಿ ಸಂಸ್ಥೆಯಲ್ಲಿ ನಡೆಸುವ ಬ್ಯಾಂಕ್‌ ವ್ಯವಹಾರದ ಮೇಲೆ ಸಂಸ್ಥೆಗೆ ಏಕಸ್ವಾಮ್ಯತೆ ಇರುವುದಿಲ್ಲ. ಹಾಗಾಗಿ ಸಂಸ್ಥೆ ತನ್ನ ಉಪ ವಿಧಿಗಳಲ್ಲಿ ನಿರ್ದಿಷ್ಟ ಪಡಿಸಬಹುದಾದಂತ ಸೌಲಭ್ಯದ ಬಳಕೆ ಅಥವಾ ಬಳಸದಿರುವುದಕ್ಕೂ, ಆತನ ಮತದಾನದ ಹಕ್ಕನ್ನು ರದ್ದುಪಡಿ ಸುವುದಕ್ಕೂ ಯಾವ ತಾರ್ಕಿಕ ಅಥವಾ ಕಾನೂನಾತ್ಮಕ ಸಂಬಂಧ ಇರುವುದಿಲ್ಲ.

ಕಾನೂನು ರಚಿಸುವ ಸರಕಾರಕ್ಕೆ ದೂರಗಾಮಿ ದೃಷ್ಟಿಕೋನ ಇರಬೇಕು. ಆ ಬಗ್ಗೆ ಅಂಥ ಪರಿಣಿರತನ್ನೇ ನಿಯೋಜಿಸಬೇಕು. ಸಂವಿಧಾನದ ಸಮಗ್ರ ಅರಿವುಳ್ಳ, ಕಾನೂನಿನ ಅಪಾರ ತಿಳಿವಳಿಕೆಯುಳ್ಳವರನ್ನೇ ಕಾನೂನು ರಚನೆಗೆ ಬಳಸಿಕೊಳ್ಳುವುದು ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತಮ ಅಲ್ಲವಾದರೆ ಸುಧಾರಣೆಗಿಂತ ಗೊಂದಲವೇ ಪ್ರಾಪ್ತವಾಗುವ ಸಾಧ್ಯತೆ ಹೆಚ್ಚು. ಈಗ ಈ ಕಾನೂನಿನಿಂದ ಅತೃಪ್ತರಾದವರೇ ಸಹಸ್ರ ಸಂಖ್ಯೆಯಲ್ಲಿದ್ದಾರೆ. ತಮ್ಮ ಮೇಲೆ ಯಾವ ಗುರುತರ ಆಪಾದನೆ ಇಲ್ಲದೆಯೂ ತಮ್ಮ ಸದಸ್ಯತ್ವ ರದ್ದಾಗದೆಯೂ ಮತದಾನದ ಹಕ್ಕು ಮಾತ್ರ ಇಲ್ಲವೆನ್ನುವ ಕಾರಣಕ್ಕೆ ಅತೃಪ್ತರಾದ ಸದಸ್ಯರು ತಮ್ಮ ಸದಸ್ಯತ್ವವನ್ನು ಹಾಗೂ ತಾವು ನಡೆಸುವ ವಾಣಿಜ್ಯ ಬ್ಯಾಂಕಿಂಗ್‌ ವಹಿವಾಟನ್ನು ಹಿಂದೆಗೆದುಕೊಂಡರೆ ಸೊಸೈಟಿ ಸ್ಥಿತಿ ಏನಾದೀತು? ಈ ಕಾನೂನನ್ನು ಸರಕಾರ ಆದಷ್ಟು ಬೇಗ ರದ್ದುಪಡಿಸಿ ಸಹಕಾರ ಸಂಸ್ಥೆಗಳಿಗೆ ಮಾರಕವಾಗಬಹುದಾದ ಸ್ಥಿತಿಯನ್ನು ತಪ್ಪಿಸುವುದು ವಿಹಿತ.

Advertisement

ಇನ್ನೊಂದು ಇಂಥ ಅಸಂಬದ್ಧ ಕಾನೂನು ಪೌರಾಡಳಿತಕ್ಕೆ ಸಂಬಂಧಿ ಸಿದ ಕಾನೂನಿನಲ್ಲಿ ನುಸುಳಿಕೊಂಡಿದೆ. ತೆರಿಗೆಗಳು ಲಾಗಾಯ್ತಿ ನಿಂದ ಒಂದು ಅವಧಿಗೆ ನಿಗದಿ ಯಾಗುತ್ತದೆ. ಆ ಅವಧಿ 1 ಎಪ್ರಿ ಲ್‌ನಿಂದ ಮಾರ್ಚ್‌ 31ರ ತನಕ. ಈ ಅವಧಿಯೊಳಗೆ ಆ ಚಾಲ್ತಿ ವರ್ಷದ ಕರ ಪಾವತಿಸಲು ತೆರಿಗೆದಾರ ಬದ್ಧನಾಗಿರುತ್ತಾನೆ. ತಪ್ಪಿದಲ್ಲಿ ಸುಸ್ತಿದಾರ ಎಂದು ಪರಿಗಣಿಸಲಾಗುತ್ತದೆ. ಈ ನಿಯಮಕ್ಕೆ ಈ ಕೆಳಗಿನಂತೆ ತಿದ್ದುಪಡಿ ಮಾಡಲಾಗಿದೆ: 1) ಕಟ್ಟಡ ತೆರಿಗೆ ಯನ್ನು ಆರ್ಥಿಕ ವರ್ಷದ ಅವಧಿ ಪ್ರಾರಂಭವಾಗುವ ಮೊದಲ ತಿಂಗಳಾದ ಎಪ್ರಿಲ್‌ನಲ್ಲಿ ಪಾವತಿಸಿದರೆ ತೆರಿಗೆ ಮೊತ್ತದ ಶೇ.5ರಷ್ಟು ವಿನಾಯಿತಿ ಪಡೆಯಬಹುದು. 2) ಜೂನ್‌ 30ರೊಳಗೆ ಚಾಲ್ತಿ ವರ್ಷದ ತೆರಿಗೆ ಪಾವತಿ ಸತಕ್ಕದ್ದು. ತಪ್ಪಿದಲ್ಲಿ ತಿಂಗಳಿಗೆ ತೆರಿಗೆ ಮೊತ್ತದ ಶೇ.2ರಷ್ಟು ದಂಡ ತೆರಬೇಕಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ ತೆರಿಗೆಯನ್ನು ಒಂದು ಅವಧಿಗೆ ನಿಗದಿಪಡಿಸಲಾಗಿದ್ದು, ಆ ಅವಧಿ ಮುಗಿಯದೆ ಆತ ಸುಸ್ತಿದಾರನಾಗು ವುದಿಲ್ಲ. ಆದರೆ ತಿದ್ದುಪಡಿಯಲ್ಲಿ ಅವಧಿಗೆ ಮುನ್ನ (ಜೂನ್‌ 30) ಈ ಅವಕಾಶವನ್ನು ಮೊಟಕುಗೊಳಿಸಲಾಗಿದೆ. ಅವಧಿ ಮುಗಿಯುವ ಮುನ್ನ ತೆರಿಗೆ ಪಾವತಿಸಲು ಆಜ್ಞಾಪಿಸಿ, ತಪ್ಪಿದಲ್ಲಿ ದಂಡ ವಿಧಿಸುವ ಕಾನೂನು ರೂಪಿಸುವುದು ಪೌರನ ಸಾಂವಿಧಾನಿಕ ಹಕ್ಕನ್ನು ಮೊಟಕುಗೊಳಿಸಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತಂದಂತಲ್ಲವೇ? ಸರಕಾರ ಭೂ ಕಂದಾಯ ವಸೂಲಿ ಮಾಡುವಾಗ ಅನುಸರಿಸುವ ವಿಧಾನವನ್ನೇ ಇಲ್ಲಿ ಬಳಸ ಬೇಕಲ್ಲವೇ? ಸಾರ್ವಜನಿಕ ಪಾವತಿಗಳ ಬಾಕಿ ವಸೂಲಿಗೆ ಕಂದಾಯ ಇಲಾಖೆ ಬಾಕಿ ವಸೂಲಿಗೆ ಅನುಸರಿಸುವ ವಿಧಾನವೇ ಮಾದರಿ. ಈ ಪ್ರಾಧಿಕಾರಗಳ ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡ ಬೇಕೆಂಬ ಅವಸರದಲ್ಲಿ ಕಾನೂನು ರೂಪಿಸುವ ಮುನ್ನ ಕರ, ತೆರಿಗೆಗಳು ಸಕಾಲದಲ್ಲಿ ಸಂಗ್ರಹವಾಗದಿರಲು ಕಾರಣವೇನೆಂಬ ಪರಾಮರ್ಶೆ ಅಗತ್ಯ.

ಕರ್ನಾಟಕ ಪುರಸಭಾ ಕಾಯಿದೆ 1964ರಂತೆ ಸುಸ್ತಿದಾರರ ಬಾಕಿ ವಸೂಲಿಗೆ ಅವರ ಸ್ಥಿರ, ಚರ ಸೊತ್ತುಗಳನ್ನು ಜಪ್ತಿ ಮಾಡಿ, ಭೂ ಕಂದಾಯ ಬಾಕಿ ವಸೂಲು ಮಾಡುವಂತೆ ತಕ್ಕ ಕ್ರಮಕೈಗೊಳ್ಳಲು ಅಧಿಕಾರ ದತ್ತವಾಗಿದೆ. ಆದರೆ ಈ ಕಾನೂನು ಊರ್ಜಿತದಲ್ಲಿರುತ್ತಾ ಪುರಸಭೆ ಹಾಗೂ ನಗರಸಭಾ ವ್ಯಾಪ್ತಿಯೊಳಗೆ ದೊಡ್ಡ ದೊಡ್ಡ ಕಟ್ಟಡಗಳ ಬೃಹತ್‌ ಕಾರ್ಖಾನೆಯ ತೆರಿಗೆ ಅಪಾರ ಪ್ರಮಾಣದಲ್ಲಿ ಬಾಕಿ ಇರುವುದು ಕಂಡು ಬರುತ್ತದೆ. ಇಲ್ಲಿನ ಅಧಿಕಾರಿಗಳು ತಮಗೆ ದತ್ತವಾದ ಅಧಿಕಾರವನ್ನು ನ್ಯಾಯಯುತವಾಗಿ ಚಲಾಯಿಸದೆ ಅಥವಾ ಪುರಪಿತೃಗಳು ಸಹಕರಿಸದೆ (ಅಡ್ಡಿಪಡಿಸಿದ ಉದಾಹರಣೆ ವಿಪುಲ) ಹಳೇ ಬಾಕಿ ವಸೂಲಾಗದೆ ಇರಬಹುದು. ಇದು ಆ ಸ್ಥಳೀಯ ಪ್ರಾಧಿಕಾರದ ಕರ್ತವ್ಯ ಲೋಪ. ಇಂಥ ಪ್ರಾಧಿಕಾರಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕೆ ಹೊರತು ಸಾಮಾನ್ಯ ತೆರಿಗೆದಾರರ ಮೇಲೆ ದಂಡ ವಿಧಿಸುವುದು ಸರಿಯಲ್ಲ.

ಇನ್ನೂ ಗಂಭೀರ ಸಮಸ್ಯೆ ಏನೆಂದರೆ, ಕಟ್ಟಡ ತೆರಿಗೆ ಪಾವತಿಯನ್ನು ಪುರಸಭಾ ಕಾಯಿದೆ 1964ರ ಸೆಕ್ಷನ್‌ 256ರಲ್ಲಿ ವ್ಯಾಪಾರೋದ್ಯಮ ಮತ್ತು ಅಪಾಯಕಾರಿ ಹಾಗೂ ಆಕ್ಷೇಪಾರ್ಹ (Dangerous & Offensive) ಉದ್ದಿಮೆಗಳಿಗೆ ಪರವಾನಿಗೆ ನೀಡುವ ಪ್ರಕ್ರಿಯೆಗೆ ಲಿಂಕ್‌ ಮಾಡಿ ಆನ್‌ಲೈನ್‌ ಮೂಲಕ ಅರ್ಜಿ ನೀಡಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾ ಗಿದೆ. ಅರ್ಜಿ ತುಂಬಿಸುವಾಗಲೇ ಚಾಲ್ತಿ ವರ್ಷದ ಕಟ್ಟಡ ತೆರಿಗೆ ಪಾವತಿಯ ಮಾಹಿತಿ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಶೇ. 50ಕ್ಕಿಂತಲೂ ಅಧಿಕ ಪ್ರಮಾಣದ ವ್ಯಾಪಾ ರೋದ್ಯಮ ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತವೆ. ಈ ಉದ್ದಿಮೆ ದಾರರು ಕಟ್ಟಡ ಮಾಲಕರೊಡನೆ ಬಾಡಿಗೆ ಕರಾರು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಪ್ರತ್ಯೇಕ ಕಾನೂನು ಊರ್ಜಿತದಲ್ಲಿದೆ. ಪರಂತು ಕಟ್ಟಡ ತೆರಿಗೆ ಪಾವತಿ ಮಾಲಕನ ಹೊಣೆಯಾಗಿರುತ್ತದೆ. ಉದ್ದಿಮೆ ದಾರ ಯಾವ ಉದ್ದಿಮೆ ನಡೆಸುತ್ತಾನೋ ಅದಕ್ಕೆ ಸಂಬಂಧಿಸಿ ನಿಯಮ ಗಳನ್ನು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಪಾಲಿಸಲು ಬದ್ಧನಾ ಗಿರುತ್ತಾನೆ. ವ್ಯಾಪಾರೋದ್ಯಮ ನಡೆಸುವಾತನಿಗೆ ನೇರ ಸಂಬಂಧವಿಲ್ಲದ ಕಟ್ಟಡ ತೆರಿಗೆ ಎಂಬ ಅಂಕುಶ ಹಾಕಿದ್ದರಿಂದ ಆಗುವ ಆತಂಕಗಳು ಹೀಗಿವೆ.

ಎಪ್ರಿಲ್‌ ತಿಂಗಳಲ್ಲಿ ಪರವಾನಗಿಗೆ ಅರ್ಜಿ ಹಾಕುವ ಉದ್ದಿಮೆದಾರನಿಗೆ ಆತ ನಡೆಸುವ ಉದ್ಯಮದ ಕಟ್ಟಡ ಮಾಲಿಕ ಬೇರೆಯಾಗಿದ್ದರೆ, ಕಟ್ಟಡ ತೆರಿಗೆ ಪಾವತಿಸಿ, ರಶೀದಿ ಬಾಡಿಗೆದಾರನ ಗಮನಕ್ಕೆ ತರಲು ಸಹಕರಿಸ ದಿರಬಹುದು/ಮಾಲಕ ತನಗೆ ಇನ್ನೂ ಸಮಯವಿದೆ ಪಾವತಿಸುತ್ತೇನೆ ಎಂದು ಹೇಳಬಹುದು. ಆಗ ಪರವಾನಿಗೆ ಸಿಗದೆ ಉದ್ದಿಮೆ ನಡೆಸಲು ಉದ್ದೇಶಿಸಿದ ಪೌರನ ನ್ಯಾಯಯುತ ಹಕ್ಕಿನ ಚ್ಯುತಿಯಾಗುತ್ತದೆ. ಇಲ್ಲಿ ಸಂಕಷ್ಟಕ್ಕೊಳಗಾಗುವವರಲ್ಲಿ ಜೀವನೋಪಾಯಕ್ಕಾಗಿ 10*10ರ ಜಾಗದಲ್ಲಿ ವ್ಯಾಪಾರ ನಡೆಸುವ ಸಣ್ಣ ಉದ್ದಿಮೆದಾರರೆ ಹೆಚ್ಚು. ಪರವಾನಗಿ ನವೀಕರಣದ ವೇಳೆಯೂ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯುಂ ಟಾಗುತ್ತದೆ. ಉದ್ದಿಮೆ ಪರವಾನಿಗೆ ಆರ್ಥಿಕ ವರ್ಷದ ಯಾವ ಕಾಲದಲ್ಲಿ ನೀಡಿದರೂ ಅದರ ಅವಧಿ ಆರ್ಥಿಕ ವರ್ಷದ ಕೊನೆಗೆ (ಮಾ.31) ಮುಗಿ ಯುತ್ತದೆ. ಪುನಃ ಎಪ್ರಿಲ್‌ನಲ್ಲಿ ಪರವಾನಿಗೆ ನವೀಕರಣಕ್ಕೆ ಮುಂದಾದಾಗ ಇದೇ ಕಟ್ಟಡ ತೆರಿಗೆ ಪಾವತಿ ಸಮಸ್ಯೆ ತಲೆದೋರಿ ಪರವಾನಿಗೆ ನೀಡುವ ಪ್ರಕ್ರಿಯೆ ಸ್ಥಗಿತಗೊಳ್ಳಬಹುದು. ಆಗ ಒಂದೋ ಹಿಂದಿನ ಸಾಲಿನಿಂದಲೇ ನಡೆಯುತ್ತಿದ್ದ ಉದ್ದಿಮೆಯನ್ನು ಬಂದ್‌ ಮಾಡಿಸಬೇಕು/ನಡೆಯಲು ಬಿಟ್ಟರೆ ಅನಧಿಕೃತವಾಗಿ ನಡೆಯಲು ಅವಕಾಶ ಕಲ್ಪಿಸಿದಂತೆ. ಉದ್ದಿಮೆ ಪರವಾನಗಿ ಮಂಜೂ ರಾದ ಮೇಲೆ ಉದ್ದಿಮೆ ಕಾರ್ಯಾಚರಿಸಬೇಕು, ನಡೆಯುವಷ್ಟು ಕಾಲ ಪರವಾನಗಿ ಕವಚ ಹೊಂದಿರಬೇಕು ಎಂದು ಕಾನೂನು ಸಾರುತ್ತದೆ. ಪುರಸಭೆ, ನಗರಸಭೆ ಆದಾಯ ಕುಂಠಿತವಾಗಲು, ಅಲ್ಲಿನ ಅನುಚಿತ ರಾಜಕೀಯವೇ ಕಾರಣ. ಅದಕ್ಕೆ ಆಯಾ ಪ್ರಾಧಿಕಾರದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಹಾಗೆ ಮಾಡದೆ ಇಂಥ ಕಠಿಣ ನಿಯಮಾವಳಿಗಳನ್ನು ರೂಪಿ ಸುವುದು ಪ್ರಜಾಸತ್ತೆಗೆ ಶೋಭೆ ತರುವಂಥದ್ದಲ್ಲ. ವಾಸ್ತವ ಸ್ಥಿತಿ ಪರಿಗಣಿಸದೆ ರೂಪಿಸುವ ಕಾನೂನಿನಿಂದ ಸಾರ್ವಜನಿಕರು ಸಂಕಷ್ಟಕ್ಕೀಡಾಗುತ್ತಾರೆ. ಸರಕಾರ ಇಂಥ ಕಾನೂನುಗಳನ್ನು ರದ್ದುಪಡಿಸುವುದು ವಿಹಿತ.

– ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next