Advertisement
ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮೇ 23ರಂದು ಪ್ರಮಾಣ ವಚನ ಸ್ವೀಕರಿಸಿದರೂ ಮಂತ್ರಿ ಮಂಡಲ ರಚನೆ ಮಾಡಲು ಬರೋಬ್ಬರಿ 15 ದಿನಗಳೇ ಹಿಡಿಯಿತು.
Related Articles
Advertisement
ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಎಲ್ಲಾ ಸಚಿವರು ಜೆಡಿಎಸ್‌ನವರೇ ಆಗಿರುವುದರಿಂದ ಒಬ್ಬರ ಮನವೊಲಿಸಿ ಮತ್ತೂಬ್ಬರಿಗೆ ಉಸ್ತುವಾರಿ ವಹಿಸುವುದು ಸಮಸ್ಯೆ ಆಗಲಾರದು. ಆದರೆ, ಚಾಮರಾಜನಗರ ಜಿಲ್ಲೆಯ ಪರಿಸ್ಥಿತಿ ಭಿನ್ನ.
ಪುಟ್ಟರಂಗ ಶೆಟ್ಟಿ ಕಾಂಗ್ರೆಸ್ಸಿಗರಾದರೆ, ಎನ್.ಮಹೇಶ್ ಬಿಎಸ್‌ಪಿ ಶಾಸಕರು. ಹೀಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಜಿಲ್ಲಾ ಉಸ್ತುವಾರಿ ಕೊಡಿಸಿದ್ದಾರೆ ಎಂಬ ಮಾತಿದೆ.
ಪುಟ್ಟರಾಜುಗೆ ಮಂಡ್ಯ ನಾಯಕತ್ವ: ಮಂಡ್ಯ ಜಿಲ್ಲೆಯಲ್ಲಿ ಆರಂಭದಲ್ಲಿ ಎಚ್.ಡಿ.ದೇವೇಗೌಡರು ತಮ್ಮ ಬೀಗರಾದ ಡಿ.ಸಿ.ತಮ್ಮಣ್ಣ ಅವರಿಗೆ ಉಸ್ತುವಾರಿ ಕೊಡಲು ಆಸಕ್ತಿ ವಹಿಸಿದ್ದರು. ಆದರೆ, ಸಿ.ಎಸ್.ಪುಟ್ಟರಾಜು ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪಕ್ಷದ ನಾಯಕತ್ವವನ್ನು ತಮಗೆ ವಹಿಸಿದಂತೆ ಉಸ್ತುವಾರಿ ಸ್ಥಾನವನ್ನೂ ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ ಸಿ.ಎಸ್.ಪುಟ್ಟರಾಜು ಅವರನ್ನೇ ಜಿಲ್ಲಾ ಉಸ್ತುವಾರಿ ಮಾಡಲು ಒಪ್ಪಿಗೆ ನೀಡಲಾಗಿದೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ಪರಿಸ್ಥಿತಿ ಈ ಎರಡೂ ಜಿಲ್ಲೆಗಳಿಗಿಂತ ಭಿನ್ನ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಐದು, ಕಾಂಗ್ರೆಸ್ ಮೂರು, ಬಿಜೆಪಿಯ ಮೂವರು ಶಾಸಕರು ಆರಿಸಿ ಬಂದಿದ್ದಾರೆ. ಕಾಂಗ್ರೆಸ್‌ನ ಮೂವರು ಶಾಸಕರ ಪೈಕಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ
ಹಾಗೂ ಮಾಜಿ ಶಾಸಕ ದಿ.ಎಸ್.ಚಿಕ್ಕಮಾದು ಪುತ್ರ ಅನಿಲ್ ಕುಮಾರ್ ಇದೇ ಮೊದಲ ಬಾರಿಗೆ ಶಾಸಕರಾಗಿದ್ದರೆ, ಹಿರಿಯ ಶಾಸಕರಾಗಿರುವ ತನ್ವೀರ್ ಸೇs…, ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ದ್ವಿತೀಯಾರ್ಧದಲ್ಲಿ ಮಂತ್ರಿಯಾಗಿದ್ದರು. ಹೀಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಮೈಸೂರು ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಮಂತ್ರಿ ಸ್ಥಾನ ದೊರೆತಿಲ್ಲ.
ಜಿಟಿಡಿಗೆ ಉಸ್ತುವಾರಿ: ಸಿದ್ದರಾಮಯ್ಯ ವಿರುದ್ಧ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಜಿ.ಟಿ.ದೇವೇಗೌಡ ಅವರಿಗೇ ಜಿಲ್ಲಾ ಉಸ್ತುವಾರಿ ಮಂತ್ರಿ ಸ್ಥಾನ ದೊರೆಯುವುದು ಬಹುತೇಕ ಖಚಿತವಾದರೂ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಗಳಲ್ಲೇ ಕುಮಾರಸ್ವಾಮಿ, ಜಿ.ಟಿ.ದೇವೇಗೌಡರನ್ನು ಗೆಲ್ಲಿಸಿಕೊಟ್ಟರೆ ಪ್ರಮುಖ ಖಾತೆ ನೀಡಿ ಜಿಲ್ಲಾ ಉಸ್ತುವಾರಿ ಮಂತ್ರಿ ಮಾಡುವುದಾಗಿ ಹೇಳಿದ್ದರು.
ಆದರೆ, ತಾವು ಕೇಳಿದ ಖಾತೆ ನೀಡಲಿಲ್ಲ ಎಂದು ಅಸಮಾಧಾನಗೊಂಡ ಜಿ.ಟಿ.ದೇವೇಗೌಡ, 15 ದಿನಗಳ ಬಳಿಕ ಒಲ್ಲದ ಮನಸ್ಸಿನಿಂದಲೇ ಉನ್ನತ ಶಿಕ್ಷಣ ಖಾತೆಯನ್ನು ಒಪ್ಪಿಕೊಂಡು ಕಾರ್ಯಾರಂಭ ಮಾಡಿದ್ದಾರೆ. ಅವರದೇ ಪಕ್ಷದ ಸಚಿವ ಸಾ.ರಾ.ಮಹೇಶ್ ನಾನು ಜಿಲ್ಲಾ ಉಸ್ತುವಾರಿ ಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ.
ಆದರೆ, ಕೊಟ್ಟರೆ ಬೇಡ ಎನ್ನುವುದಿಲ್ಲ ಎಂಬ ದಾಳ ಉರುಳಿಸುತ್ತಲೇ ಜಿಲ್ಲಾಮಟ್ಟದ ಅಧಿಕಾರಿಗಳನ್ನೆಲ್ಲಾ ಕರೆದು ಸಭೆ ಮಾಡಿದ್ದಲ್ಲದೆ, ಸ್ವಕ್ಷೇತ್ರ ಕೆ.ಆರ್.ನಗರ ತಾಲೂಕಿನ ಹರದನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಇಡೀ ಜಿಲ್ಲಾಡಳಿತವನ್ನು ಕರೆಸಿಕೊಂಡು ಸಭೆ ನಡೆಸಿ, ತಲುಪಬೇಕಾದ ಜಾಗಕ್ಕೆ ಸಂದೇಶ ರವಾನಿಸಿದ್ದಾರೆ.
ಸಚಿವರಾದ 39 ದಿನಗಳ ನಂತರ ಜಿಲ್ಲೆಗೆ ಆಗಮಿಸಿದ ಜಿ.ಟಿ.ದೇವೇಗೌಡ, ತಮ್ಮನ್ನು ಗೆಲ್ಲಿಸಿದ ಚಾಮುಂಡೇಶ್ವರಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ, ಸಣ್ಣ ನೀರಾವರಿ ಸಚಿವರನ್ನು ಕರೆಸಿ ಕ್ಷೇತ್ರದ ಕೆರೆಗಳ ಅಭಿವೃದ್ಧಿ ಪರಿಶೀಲನೆ, ತಮ್ಮ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು,
ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಭೆ ಮಾತ್ರ ನಡೆಸಿ, ಎಚ್ಚರಿಕೆ ನೀಡಿ ಹೋಗಿದ್ದಾರೆ. ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳದಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರ್ಯಾರು ಎಂಬುದು ತಿಳಿಯದೆ, ಜಿಲ್ಲಾಮಟ್ಟದ ಅಧಿಕಾರಿಗಳು ಯಾವ ಸಚಿವರು ಸಭೆ ಕರೆದರೂ ಹೋಗ ಬೇಕಾದ ಸ್ಥಿತಿ ಎದುರಾಗಿದೆ.
* ಗಿರೀಶ್ ಹುಣಸೂರು