Advertisement

ಯೋಧರ ವೀರಗಲ್ಲು ಸ್ಥಳಾಂತರ ಶೀಘ್ರ

12:16 PM Jul 27, 2018 | Team Udayavani |

ಬೆಂಗಳೂರು: ದೇವನಹಳ್ಳಿ ಬಳಿ ಸಿದ್ಧವಾಗುತ್ತಿರುವ ಯೋಧರ ವೀರಗಲ್ಲನ್ನು ಸೈನಿಕ ಸ್ಮಾರಕಕ್ಕೆ ಸ್ಥಳಾಂತರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಕಾರ್ಗಿಲ್‌ ವಿಜಯ ದಿವಸ್‌ ಅಂಗವಾಗಿ ನಗರದ ರಾಜಭವನ ಬಳಿಯ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಗುರುವಾರ ಆಯೋಜಿಸಿದ್ದ “ಕಾರ್ಗಿಲ್‌ ವಿಜಯೋತ್ಸವ’ ಹಾಗೂ “ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ’ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸೈನಿಕ ಸ್ಮಾರಕದಲ್ಲಿ ಪ್ರತಿಷ್ಠಾಪನೆ ಮಾಡಲು ಎಂಟು ವರ್ಷಗಳಿಂದ ದೇವನಹಳ್ಳಿಯಲ್ಲಿ ಯೋಧರ ವೀರಗಲ್ಲು ಸಿದ್ಧಪಡಿಸಲಾಗುತ್ತಿದೆ. ಆದರೆ, ತಾಂತ್ರಿಕ ಕಾರಣಗಳಿಂದ ಅದನ್ನು ಸ್ಥಳಾಂತರ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ವೀರಗಲ್ಲು ತರುವ ಕುರಿತು ಈಗಾಗಲೇ ಎರಡು ಸಭೆ ನಡೆಸಲಾಗಿದೆ. ಅಧಿಕಾರಿಗಳ ಜತೆಯೂ ಚರ್ಚಿಸಲಾಗಿದೆ ಎಂದು ಹೇಳಿದರು.

ಕಾಲಮಿತಿಯಲ್ಲಿ ಪರಿಹಾರ, ಸೌಲಭ್ಯ: ನಿವೃತ್ತಿ ಹೊಂದುವ ಅಥವಾ ಯುದ್ಧದಲ್ಲಿ ಹುತಾತ್ಮರಾಗುವ ಯೋಧರ ಕುಟುಂಬಗಳಿಗೆ ಮೂರು ತಿಂಗಳ ಕಾಲಮಿತಿಯಲ್ಲಿ ಪರಿಹಾರ ಹಾಗೂ ಇತರೆ ಸೌಲಭ್ಯ ಒದಗಿಸಲು ಹೊಸ ಕಾನೂನು ತರಲು ರಾಜ್ಯ ಸರ್ಕಾರ ಪ್ರಯತ್ನಿಸಿದೆ. ಯಾವುದೇ ಕಾರಣಕ್ಕೂ ದೇಶ ಕಾಯುವ ಯೋಧರ ಕುಟುಂಬಗಳಿಗೆ ನೀಡುವ ಸೌಲಭ್ಯಗಳಲ್ಲಿ ವಿಳಂಬ ಆಗಬಾರದು ಎಂದರು.

Advertisement

ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು, ನಿವೃತ್ತ ಏರ್‌ ಕಮಾಂಡರ್‌ ಎಂ.ಕೆ.ಚಂದ್ರಶೇಖರ್‌, ಕರ್ನಾಟಕ ಮತ್ತು ಕೇರಳ ಉಪ ವಿಭಾಗದ, ಜನರಲ್‌ ಆಫೀಸರ್‌ ಕಮಾಂಡಿಂಗ್‌ ಮೇಜರ್‌ ಜನರಲ್‌ ಸಂಜೀವ್‌ ನರೈನ್‌, ಪ್ಯಾರಾ ರೆಜಿಮೆಂಟ್‌, ಸೆಂಟ್ರಲ್‌ ಕಮಾಂಡೆಂಟ್‌, ಎನ್‌ಸಿಸಿ ಸೇರಿ ವಿವಿಧ ರಕ್ಷಣಾ ಪಡೆಗಳ ಯೋಧರು, ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು.

ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಿ: ನಿವೃತ್ತ ಸೈನಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಜಾತಿ ಆಧಾರಿತ ಮೀಸಲಾತಿ ಕೈಬಿಟ್ಟು ಮೀಸಲಾತಿ ಪ್ರಮಾಣವನ್ನು ಶೇ.20ಕ್ಕೆ ಏರಿಕೆ ಮಾಡಬೇಕು ಎಂದು ಮಾಜಿ ಸೈನಿಕರು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಅವರಿಗೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ನಿವೃತ್ತ ಸೈನಿಕ ಬಸಪ್ಪ, ಐದಾರು ದಶಕಗಳ ಹಿಂದೆ ನಿವೃತ್ತ ಸೈನಿಕರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಆದರೆ, ಇತ್ತೀಚೆಗೆ ನಿವೃತ್ತಿಯಾಗುವ ಸೈನಿಕರ ಸಂಖ್ಯೆ ಹೆಚ್ಚುತ್ತಿದೆ.

ಇದನ್ನು ಪರಿಗಣಿಸಿ ಸರ್ಕಾರಿ ಉದ್ಯೋಗಕ್ಕೆ ಇರುವ ಮೀಸಲಾತಿಯನ್ನು ಶೇ.20ಕ್ಕೆ ಹೆಚ್ಚಿಸಬೇಕು. 15 ವರ್ಷಗಳ ಹಿಂದೆ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ನೀಡುವುದಾಗಿ ಹೇಳಿ, 257 ಮಾಜಿ ಸೈನಿಕರಿಂದ ತಲಾ 8 ಸಾವಿರ ರೂ. ಪಡೆದುಕೊಂಡಿದ್ದು, ಇದುವರೆಗೂ ನಿವೇಶನ ನೀಡಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next