Advertisement
ಇದು “ಉದಯವಾಣಿ’ಯ ವರದಿಗೆ ದಾನಿಗಳು ಸ್ಪಂದಿಸಿದ ಪರಿಣಾಮ. ಸರಳೇಬೆಟ್ಟಿನ ಗಣೇಶ್ ಭಾಗ್‌ನ ಗುಡ್ಡದಲ್ಲಿ ವಾಸಿಸುತ್ತಿದ್ದ ಪ್ರಮೀಳಾ ಪೂಜಾರಿ ಅವರ ಪುತ್ರರಾದ ಧನುಷ್(19) ಮತ್ತು ದರ್ಶನ್(16) ಡ್ನೂಸೆನ್ ಮಸ್ಕಾéಲರ್ ಡಿಸ್ಟ್ರೋಫಿ’ ಎಂಬ ಅಪರೂಪದ ಅಂಗವೈಕಲ್ಯ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಮನೆ ಎತ್ತರದಲ್ಲಿದ್ದುದರಿಂದ ಅವರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗಲೂ ಕೈಯಲ್ಲೇ ಎತ್ತಿಕೊಂಡು ಗುಡ್ಡದಿಂದ ಕೆಳಕ್ಕೆ ತರಬೇಕಾಗಿತ್ತು. ಈ ಬಗ್ಗೆ 2018ರ ಆ.20ರಂದು ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ್ದ ಉಡುಪಿ ಪುತ್ತೂರಿನ ಉದ್ಯಮಿ ದಿನೇಶ್ ಪೂಜಾರಿ ಅವರು ತನ್ನ ಗೆಳೆಯರ ಜತೆ ಸೇರಿ ಮನೆ ನಿರ್ಮಿಸಿಕೊಡುವ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಸುಮಾರು 12 ಲ.ರೂ. ವೆಚ್ಚದಲ್ಲಿ ಹಿರಿಯಡಕ ಪಡ್ಡಂನಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದೆ.
Related Articles
Advertisement
ಗುಡ್ಡದ ಮೇಲಿನ ಮನೆ ಬೇಡವೇ ಬೇಡ ಎಂದು ಮಕ್ಕಳಿಬ್ಬರೂ ಹಟ ಮಾಡುತ್ತಿದ್ದರು. ಪ್ರತಿ ಬಾರಿಯೂ ಗುಡ್ಡದಿಂದ ಎತ್ತಿಕೊಂಡು ಕೆಳಗಿಳಿಸುವುದನ್ನು ಕಂಡು ಮರುಗುತ್ತಿದ್ದರು.
ಹಸ್ತಾಂತರ ಕಾರ್ಯಕ್ರಮಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾಣ ಜಿ.ಶಂಕರ್ ಅವರು ಜು.3ರಂದು ‘ಧನುಷ್ ದರ್ಶನ್ ನಿಲಯ’ವನ್ನು ಹಸ್ತಾಂತರಿಸಿದರು. ತನ್ನ ವತಿಯಿಂದ 1 ಲ.ರೂ. ಮೊತ್ತವನ್ನು ಕೂಡ ನೀಡಿದರು. ಆಸ್ಪತ್ರೆ ವೆಚ್ಚವನ್ನು ಭರಿಸುವುದಾಗಿಯೂ ಭರವಸೆ ನೀಡಿದರು. ಹೊಟೇಲ್ ಉದ್ಯಮಿ ಭುವನೇಂದ್ರ ಕಿದಿಯೂರು, ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್, ದಾನಿಗಳಾದ ದಿನೇಶ್ ಪೂಜಾರಿ, ಯು. ವಿಶ್ವನಾಥ ಶೆಣೈ, ಶ್ರೀಪಾಲ್ ಸುರನ, ಕೃಷ್ಣಮೂರ್ತಿ ಭಟ್, ಉಮೇಶ್, ಶೇಖರ್, ಸಂತೋಷ್, ಸಂತೋಷ್ ವರ್ಮಾ, ಸುರೇಶ್, ಮಹೇಶ್, ಪ್ರಸಾದ್, ನಿವೃತ್ತ ಬ್ಯಾಂಕ್ ಉದ್ಯೋಗಿ ಬಾಬುರಾಯ ಶೆಣೈ, ವಾಸ್ತು ತಜ್ಞ ಯೋಗೀಶ್ ಚಂದ್ರಾಧರ ಮತ್ತು ಯಕ್ಷಗಾನ ಕಲಾರಂಗದ ಸದಸ್ಯರು ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಸ್ವಾಗತಿಸಿ ನಿರೂಪಿಸಿದರು. ಉದಯವಾಣಿ ಕಣ್ತೆರೆಸಿತು
ಕಳೆದ ವರ್ಷ “ಉದಯವಾಣಿ’ಯಲ್ಲಿ ಪ್ರಕಟವಾಗಿದ್ದ “ಗುಡ್ಡದ ಮೇಲೆ ಕುಟುಂಬದ ಅಸಹಾಯಕ ಬದುಕು’ ವರದಿ ನೋಡಿ ನನ್ನ ಮನ ಕರಗಿತು. ಆ ಕೂಡಲೇ ಆ ಮನೆಗೆ ತೆರಳಿ ಸಹಾಯ ಮಾಡಲು ಮುಂದಾದೆ. ಆದರೆ ಅಲ್ಲಿನ ಸ್ಥಿತಿ ಕಂಡು ಕುಗ್ಗಿ ಹೋದೆ. ಬೇರೆ ಕಡೆ ಮನೆ ಮಾಡಿಕೊಡಬೇಕೆಂದು ನಿರ್ಧರಿಸಿ ಗೆಳೆಯರಲ್ಲಿ ಪ್ರಸ್ತಾಪಿಸಿದೆ. ಕೃಷ್ಣಮೂರ್ತಿ ಹಾಗೂ ಇತರರು ಸ್ಪಂದಿಸಿದರು. ಸುಮಾರು 12 ಲ.ರೂ. ವೆಚ್ಚದ 700 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಿ ಹಸ್ತಾಂತರಿಸಿದ್ದೇವೆ.
– ದಿನೇಶ್ ಪೂಜಾರಿ, ದಾನಿ, ಪುತ್ತೂರು ಉಡುಪಿ ಹೊಸ ಮನೆಯಿಂದ ನೆಮ್ಮದಿ
ಧನುಷ್‌ನ ಆರೋಗ್ಯದಲ್ಲಿ ಮತ್ತಷ್ಟು ತೊಂದರೆಗಳಾಗುತ್ತಿವೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಹೋಗಿ ವಾಪಸ್ಸು ಬರುವಾಗ ಧನುಷ್ ಹಿಂದೆ ಗುಡ್ಡದ ಮೇಲೆ ಇದ್ದ ಮನೆಗೆ ಹೋಗುವುದು ಬೇಡ ಎಂದೇ ಹಟ ಹಿಡಿದಿದ್ದ. ಅವನ ಆಸೆ ಈಗ ಈಡೇರಿದೆ. ಹೊಸ ಮನೆಯಿಂದ ಒಂದಷ್ಟು ನೆಮ್ಮದಿ ಉಂಟಾಗಿದೆ.
-ಪ್ರಮೀಳಾ ಪೂಜಾರಿ
ಧನುಷ್, ದರ್ಶನ್ ತಾಯಿ