Advertisement

ಜಿಲ್ಲಾ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

12:46 PM Apr 18, 2018 | Team Udayavani |

ಮೈಸೂರು: ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾದ ಬೆನ್ನಲ್ಲೇ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ನಂಜನಗೂಡು ಮೀಸಲು ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಅವರಿಗೆ ಟಿಕೆಟ್‌ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಶಿವಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

Advertisement

ಇನ್ನು 2008ರ ಚುನಾವಣೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ವಿ.ಶ್ರೀನಿವಾಸಪ್ರಸಾದ್‌ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕೇವಲ 700 ಮತಗಳ ಅಂತರದಿಂದ ಪರಾಭವಗೊಂಡಿದ್ದ ಮಹಾದೇವಯ್ಯ, ಶ್ರೀನಿವಾಸ ಪ್ರಸಾದ್‌ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿಗೆ ಬಂದಾಗ ನಡೆದ ಉಪ ಚುನಾವಣೆಯಲ್ಲಿ ಅವರ ಪರ ಶ್ರಮಿಸಿದ್ದರು.

ಜತೆಗೆ ಇದೇ ನನ್ನ ಕೊನೆ ಚುನಾವಣೆ ಎಂದೂ ಶ್ರೀನಿವಾಸ ಪ್ರಸಾದ್‌ ಚುನಾವಣಾ ನಿವೃತ್ತಿ ಘೋಷಿಸಿದ್ದರಿಂದ ಎಸ್‌.ಮಹಾದೇವಯ್ಯ, ಕೋಟೆ ಎಂ.ಶಿವಣ್ಣ ಈ ಬಾರಿ ಟಿಕೆಟ್‌ ನಮಗೇ ಎಂದು ಭಾವಿಸಿದ್ದರು. ಆದರೆ, ಶ್ರೀನಿವಾಸಪ್ರಸಾದ್‌ ತಮ್ಮ ಅಳಿಯ ಹರ್ಷವರ್ಧನ್‌ಗೆ ಟಿಕೆಟ್‌ ಕೊಡಿಸಿರುವುದರಿಂದ ಈ ಇಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಣ್ಣೀರಿಟ್ಟ ಮಹಾದೇವಯ್ಯ: ಟಿಕೆಟ್‌ ಕೈತಪ್ಪಿದ್ದರಿಂದ ಮನನೊಂದು ಕಣ್ಣೀರಿಟ್ಟ ಮಹಾದೇವಯ್ಯ, ಶ್ರೀನಿವಾಸಪ್ರಸಾದ್‌ ಸ್ವಾರ್ಥಿ, ಯಾವೊಬ್ಬ ದಲಿತ ನಾಯಕರನ್ನು ಬೆಳೆಯಲು ಬಿಡಲ್ಲ ಎಂದು ಕಿಡಿಕಾರಿದರು.ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ನನ್ನ ಹಿರಿತನಕ್ಕೆ ಬಿಜೆಪಿ ನಾಯಕರು ಬೆಲೆ ನೀಡಿದೆ ಅಗೌರವ ತೋರಿದ್ದಾರೆ.

ಎಲ್ಲಾ ಪಕ್ಷಗಳಲ್ಲೂ ನಾನು ಮಣ್ಣು ಹೊತ್ತಿದ್ದೇನೆ. ಜೆಡಿಎಸ್‌ ನಾಯಕರು ಕರೆದರೂ ಹೋಗುವುದಿಲ್ಲ. ಸದ್ಯದಲ್ಲೇ ಯಡಿಯೂರಪ್ಪಜತೆ ಚರ್ಚಿಸಿ ರಾಜಕೀಯ ನಿವೃತ್ತಿಯನ್ನೇ ಪಡೆಯುತ್ತೇನೆ ಎಂದು ನಂಜನಗೂಡು ಕ್ಷೇತ್ರದ ಟಿಕೆಟ್‌ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Advertisement

ಬಿಜೆಪಿ ಕಚೇರಿಗೆ ಬೀಗ: ನರಸಿಂಹರಾಜ ಕ್ಷೇತ್ರದ ಟಿಕೆಟ್‌ ಕೈತಪ್ಪಿದ್ದಕ್ಕೆ ಮೈಸೂರು ಮಹಾ ನಗರಪಾಲಿಕೆ ಮಾಜಿ ಸದಸ್ಯ ಬಿ.ಎಂ.ನಟರಾಜು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ನಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದ ನಟರಾಜು, ನರಸಿಂಹರಾಜ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ವರ್ಷದ ಹಿಂದೆ ಬಿಜೆಪಿ ಸೇರಿದ್ದರು.

ಆದರೆ, ಇತ್ತೀಚೆಗೆ ಬಿಜೆಪಿ ಸೇರಿದ ಪಾಲಿಕೆ ಸದಸ್ಯ ಸಂದೇಶ್‌ಸ್ವಾಮಿಗೆ ಬಿಜೆಪಿ ಟಿಕೆಟ್‌ ನೀಡಿರುವುದರಿಂದ ನಟರಾಜು ಅಸಮಾಧಾನಗೊಂಡಿದ್ದಾರೆ. ಬಿ.ಎಂ.ನಟರಾಜು ಬೆಂಬಲಿಗರು ಮಂಗಳವಾರ ಮೈಸೂರಿನ ನಜರಾಬಾದ್‌ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಸೋಲಿಸ್ತೇವೆ ಎಂದೂ ಘೋಷಣೆ ಕೂಗಿ ಪ್ರತಿಭಟಿಸಿದರು.

ಇನ್ನು ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ 30 ಸಾವಿರ ಮತಗಳನ್ನು ಪಡೆದಿದ್ದ ಎಚ್‌.ಡಿ.ಗಣೇಶ್‌ ಈ ಬಾರಿಯೂ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರಿದ ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ ಪಕ್ಷ ಟಿಕೆಟ್‌ ನೀಡಿರುವುದರಿಂದ ಗಣೇಶ್‌ ಅಸಮಾಧಾನಗೊಂಡಿದ್ದಾರೆ.

ಎಲ್ಲ ಹಂತದ ಸಮೀಕ್ಷೆಗಳಲ್ಲೂ ನನ್ನ ಹೆಸರೇ ಮೊದಲಿತ್ತು. ಆದರೆ, ಯಾವ ಸಮೀಕ್ಷೆ ಆಧಾರದ ಮೇಲೂ ಟಿಕೆಟ್‌ ಹಂಚಿಕೆ ಮಾಡದೆ ಹಣಕ್ಕೆ ಮಾರಾಟ ಮಾಡಿದ್ದಾರೆ. ನನಗೆ ಟಿಕೆಟ್‌ ಕೈತಪ್ಪಲು ಸಂಸದ ಪ್ರತಾಪ್‌ ಸಿಂಹ ನೇರ ಕಾರಣ, ಅವರ ಚುನಾವಣೆಯೂ ಮುಂದೆ ಬರುತ್ತೆ ಮತದಾನದ ಮೂಲಕವೇ ಅವರಿಗೆ ಉತ್ತರ ಕೊಡುತ್ತೇವೆ ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next