Advertisement

ಕುಂಭಮೇಳ ರಾಜ್ಯದ ಘನತೆ ಹೆಚ್ಚುವಂತಿರಲಿ

07:22 AM Jan 24, 2019 | Team Udayavani |

ಮೈಸೂರು: ಪ್ರತಿ ಮೂರು ವರ್ಷಗಳಿಗೊಮ್ಮೆ ತಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಫೆ.17 ರಿಂದ ನಡೆಯುವ ಕುಂಭಮೇಳ ಕಾರ್ಯಕ್ರಮದ ಮೂಲಕ ಕರ್ನಾಟಕದ ಘನತೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು. ಕುಂಭಮೇಳ ಸಂಬಂಧ ಬುಧವಾರ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಧಾರ್ಮಿಕ ಮುಖಂಡರು, ರಾಜಕೀಯ ಗಣ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

Advertisement

ಕಾವೇರಿ, ಕಪಿಲಾ, ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮದಲ್ಲಿ ನಡೆಯುವ ಕುಂಭಮೇಳ ಅತ್ಯಂತದೊಡ್ಡ ಮಟ್ಟದಲ್ಲಿ ವ್ಯವಸ್ಥಿತವಾಗಿ ನಡೆಯಬೇಕು. ಈ ವರ್ಷ 150ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲವಿದೆ. ಮುಂದಿನ ವರ್ಷ ಉತ್ತಮ ಮಳೆಯಾಗಿ ಜನ ನಮ್ಮೆದಿಯಿಂದ ಬದುಕುವಂತಾಗಬೇಕು ಎಂದರು. ಕುಂಭಮೇಳ ಆಯೋಜನೆಗೆ ಹಣದ ಕೊರತೆ ಇಲ್ಲ. ಸೋಪಾನಕಟ್ಟಿ, ರಸ್ತೆ ದುರಸ್ತಿ, ಶೌಚಾಲಯ, ಸ್ನಾನದ ಘಟ್ಟ ವ್ಯವಸ್ಥೆ, ಕುಡಿಯುವ ನೀರು ಮುಂತಾದ ವ್ಯವಸ್ಥೆಗಳು ಅಚ್ಚುಕಟ್ಟಾಗಿ ಆಗಬೇಕು ಎಂದರು.

ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಬೆಂಗಳೂರಿನ ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿಗಳ ಆಶಯದಂತೆ ಅವರ ಸಲಹೆ ಪಡೆದು ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಕುಂಭಮೇಳಕ್ಕೆ ಹಲವಾರು ರಾಜ್ಯಗಳಿಂದ ಆಗಮಿಸಲಿರುವ ಯತಿವರ್ಯರಿಗೆ ಎಲ್ಲ ರೀತಿಯ ಸೌಕರ್ಯ ಮಾಡಿಕೊಡಬೇಕು.

ಅವರು ಕರ್ನಾಟಕದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದರು. ಕುಂಭಮೇಳಕ್ಕೆ ಶಾಶ್ವತವಾದ ಮೂಲ ಸೌಕರ್ಯಗಳ ಒದಗಿಸಲು ಗಮನಹರಿಸಬೇಕು, ಪ್ರವಾಸೋದ್ಯಮ ಇಲಾಖೆಯಿಂದ ಈ ಕ್ಷೇತ್ರದಲ್ಲಿ ಶಾಶ್ವತವಾದ ಅಭಿವೃದ್ಧಿ ಕೆಲಸ ಮಾಡಲು ನೀಲನಕ್ಷೆ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಮುಖ್ಯಮಂತ್ರಿಗಳ ಸೂಚನೆಯಂತೆ ಎಲ್ಲ ವ್ಯವಸ್ಥೆಗಳು ಅಟ್ಟುಕಟ್ಟಾಗಿ ನಡೆಯಬೇಕು. ಕುಂಭಮೇಳಕ್ಕೆ ಕೇವಲ 23 ದಿನಗಳು ಮಾತ್ರ ಉಳಿದಿದೆ. ಸಮರೋಪಾದಿಯಲ್ಲಿ ಕೆಲಸಗಳು ಆಗಬೇಕು ಎಂದು ತಿಳಿಸಿದರು.

Advertisement

ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ, ಬೆಂಗಳೂರಿನ ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ, ಓಂಕಾರ ಪೀಠದ ಮಧುಸೂದನಾನಂದ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಸಚಿವರಾದ ಸಾ.ರಾ. ಮಹೇಶ್‌,

ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್‌, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಅಶ್ವಿ‌ನ್‌ ಕುಮಾರ್‌, ಎಚ್‌.ವಿಶ್ವನಾಥ್‌, ಸುರೇಶ್‌ಗೌಡ, ನಾರಾಯಣಗೌಡ, ಶ್ರೀನಿವಾಸ್‌, ಅನ್ನದಾನಿ, ರವೀಂದ್ರ ಶ್ರೀಕಂಠೇಗೌಡ, ಸಂಸದ ಎಲ್‌.ಆರ್‌.ಶಿವರಾಮೇಗೌಡ, ವಿಧಾನ ಪರಿಷತ್‌ ಸದಸ್ಯ ಅಪ್ಪಾಜಿಗೌಡ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಉತ್ತರಭಾರತದಲ್ಲಿ ಇತ್ತೀಚೆಗೆ ನಡೆದ ಕುಂಭಮೇಳಕ್ಕೆ ಸಾವಿರಾರು ಕೋಟಿ ರೂ. ಖರ್ಚಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲಿ ಯಾವ ರೀತಿ ಆಯೋಜನೆ ಆಗಿದೆ ಎಂದು ಇಬ್ಬರು ಅಧಿಕಾರಿಗಳು ಹೋಗಿ ಅಧ್ಯಯನ ಮಾಡುವಂತೆ ಸೂಚಿಸಿದ್ದೇನೆ.
-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next