ಬೆಂಗಳೂರು: ಯತಿಶ್ರೇಷ್ಠ ವಿಶ್ವೇಶತೀರ್ಥ ಸ್ವಾಮೀಜಿ ಯವರ ಅಂತಿಮ ದರ್ಶನವನ್ನು ರಾಜಕೀಯ ನಾಯಕರು ಹಾಗೂ ನಾಡಿನ ಪ್ರಮುಖ ಮಠಾಧೀಶರು ಪಡೆದರು. ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ಶ್ರೀಗಳ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಮಧ್ಯಹ್ನ 4 ಗಂಟೆ ಹೊತ್ತಿಗೆ ಉಡುಪಿಯಿಂದ ಬೆಂಗಳೂರಿಗೆ ತರಲಾಗಿದ್ದ ಸ್ವಾಮೀಜಿಯವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುಳಸಿ ಮಾಲೆ ಅರ್ಪಿಸುವ ಮೂಲಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಸಿಎಂ ಯಡಿಯೂರಪ್ಪ ಅವರೊಂದಿಗೆ ಡಿಸಿಎಂ ಗಳಾದ ಡಾ. ಅಶ್ವತ್ಥ್ ನಾರಾಯಣ, ಗೋವಿಂದ ಕಾರ ಜೋಳ, ಸಚಿವರಾದ ಬಸವರಾಜ ಬೊಮ್ಮಾಯಿ, ಎಸ್.ಸುರೇಶ್‌ಕುಮಾರ್, ಆರ್. ಅಶೋಕ್, ವಿ. ಸೋಮಣ್ಣ, ಶಾಸಕ ಅರವಿಂದ ಲಿಂಬಾವಳಿ, ರವಿ ಸುಬ್ರಮಣ್ಯ, ಎಸ್.ಎ.ರಾಮದಾಸ್, ಸಂಸದರಾದ ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಅಂತಿಮ ದರ್ಶನ ಪಡೆದರು.
ಪ್ರಧಾನಿ, ಅಮಿತ್ ಶಾ ಗೌರವ: ವಿಶ್ವೇಶತೀರ್ಥ ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಖುದ್ದು ಹಾಜರಾಗಲು ಸಾಧ್ಯ ವಾಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿ ಯಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಳುಹಿಸಿಕೊಡಲಾಗಿತ್ತು.
ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ವೈಯಕ್ತಿಕ ಗೌರವ ಸಲ್ಲಿಸುವುದರ ಜೊತೆಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪರವಾಗಿ ಪ್ರತ್ಯೇಕವಾಗಿಯೇ ಸ್ವಾಮೀಜಿಗಳಿಗೆ ಪುಷ್ಪಗುಚ್ಚ ಅರ್ಪಿಸಿ ಗೌರವ ಸಲ್ಲಿಸಿದರು. ಶ್ರೀಗಳ ಪಾರ್ಥಿವ ಶರೀರ ನ್ಯಾಷನಲ್ ಕಾಲೇಜು ಮೈದಾನಕ್ಕೆ ಆಗಮಿಸಿದ ತಕ್ಷಣವೇ ಗೌರವ ಸಲ್ಲಿಸಿದ್ದ ಸಿಎಂ ಯಡಿಯೂರಪ್ಪ, ನಿರ್ಮಲಾ ಸೀತಾ ರಾಮನ್ ಆಗಮನದ ಸಂದರ್ಭದಲ್ಲಿ ಮತ್ತೂಂದು ಬಾರಿ ಶ್ರೀಗಳ ಅಂತಿಮ ದರ್ಶನ ಪಡೆದರು.
ಕಾದು ಕುಳಿತ ಸಿಎಂ: ನ್ಯಾಷನಲ್ ಕಾಲೇಜು ಮೈದಾನ ದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಸಾರ್ವಜನಿಕ ದರ್ಶನ ಮುಕ್ತಾಯವಾಗು ವವರೆಗೂ ಯಡಿಯೂರಪ್ಪ ಹಾಗೂ ಸಚಿವರು ಅಲ್ಲಿಯೇ ಕುಳಿತು ಕೊಂಡಿದ್ದರು. ಸಾರ್ವಜನಿಕರ ದರ್ಶನ ಮುಗಿದ ಕೂಡಲೇ ಸ್ವಾಮೀಜಿಗಳ ಅಂತ್ಯ ಸಂಸ್ಕಾರ ಮಾಡುವ ಪೂರ್ಣ ಪ್ರಜ್ಞ ವಿದ್ಯಾಪೀಠಕ್ಕೆ ತೆರಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿದರು.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಎಂ.ವೀರಪ್ಪ ಮೊಯ್ಲಿ, ರಾಮ ಲಿಂಗಾರೆಡ್ಡಿ, ಅಮರೇಗೌಡ ಬಯ್ನಾಪುರ ಅಂತಿಮ ದರ್ಶನ ಪಡೆದರು. ಜೆಡಿಎಸ್ ಮುಖಂಡ ಟಿ.ಎ. ಶರವಣ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಆರ್‌ಎಸ್‌ಎಸ್‌ನ ಪ್ರಮುಖರಾದ ಭಯ್ನಾಜಿ ಜೋಷಿ, ತೇಜಸ್ವಿನಿ ಅನಂತಕುಮಾರ್ ದರ್ಶನ ಪಡೆದರು.
ದರ್ಶನ ಪಡೆದ ಮಠಾಧೀಶರು: ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಶ್ರವಣಬೆಳ ಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ನಿಡುಮಾಮಿಡಿ ಮಠದ ವೀರಭದ್ರ ಚನ್ನ ಮಲ್ಲಸ್ವಾಮೀಜಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ ಅಂತಿಮ ದರ್ಶನ ಪಡೆದರು.