ಬೆಂಗಳೂರು: ತಮ್ಮ ವಿರುದ್ಧ ಮಾತನಾಡುವ ಪ್ರತಿಪಕ್ಷಗಳನ್ನು ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು. 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬಿಜೆಪಿ ಕೋಮುವಾದ ಸಿದ್ಧಾಂತದ ಮೇಲೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಕೇಂದ್ರ ಸರ್ಕಾರ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಆಡಳಿತ ನಡೆಸುತ್ತಿದೆ. ಸುಳ್ಳಿನ ದಾಖಲೆ ಪ್ರತಿಪಾದಿಸುತ್ತ ರಾಜಕೀಯ ಮಾಡುತ್ತಿದೆ. ದೇಶದಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.
ಭಯದ ವಾತಾವರಣ ಸೃಷ್ಟಿ: ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ದೇಶದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂಬ ಹಿನ್ನೆಲೆಯಲ್ಲಿ ದೇಶ ಕಟ್ಟಿದ್ದಾರೆ. ಆದರೆ, ನಾವು ಈಗ ಅವರ ಕಲ್ಪನೆಗಳಿಂದ ಬಹಳ ದೂರ ಬಂದಿದ್ದೇವೆ ಎನಿಸುತ್ತಿದೆ. ಗಾಂಧಿ, ನೆಹರು, ಪಟೇಲ್ ಅವರ ಕನಸಿನ ಭಾರತ ಈಗ ಇಲ್ಲ ಎಂಬ ಭಾವನೆ ಮೂಡುತ್ತಿದೆ. ಭಯದ ವಾತಾವರಣ ಮೂಡಿಸುವ ಕೆಲಸವಾಗುತ್ತಿದೆ ಎಂದು ಹೇಳಿದರು.
ಸರ್ವ ತ್ಯಾಗಕ್ಕೂ ಸಿದ್ಧರಾಗಿ: ಪಾಕಿಸ್ತಾನ ಧರ್ಮಾಧಾರಿತ ದೇಶವಾಗಿ ಬೆಳೆಯಲು ಪ್ರಯತ್ನಿಸಿತು. ಆದರೆ, ಅದು ಯಶಸ್ವಿಯಾಗಿಲ್ಲ. ಭಾರತ ಜಾತ್ಯತೀತ ರಾಷ್ಟ್ರ. ನಾವು ಜಾತ್ಯತೀತ ವ್ಯವಸ್ಥೆಯಲ್ಲಿ ಯಶಸ್ವಿಯಾಗಿದ್ದೇವೆ. ಸಮಾನತೆ ಹಾಗೂ ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಅನೇಕ ಮಹನೀಯರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ತ್ಯಾಗವನ್ನು ಸ್ಮರಿಸಿಕೊಳ್ಳಬೇಕಿದೆ.
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕರ್ತರು ಸರ್ವ ತ್ಯಾಗಕ್ಕೂ ಸಿದ್ಧರಾಗಬೇಕಿದೆ. ಅದಕ್ಕಾಗಿ ಎಲ್ಲರೂ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಇದೆ. ಕಾಂಗ್ರೆಸ್ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಜನರ ರಕ್ಷಣೆಗೆ ನಿಲ್ಲುವ ಕೆಲಸ ಮಾಡಬೇಕು. ಕೇಂದ್ರ-ರಾಜ್ಯ ಸರ್ಕಾರಗಳು ನೆರೆ ಸಂತ್ರಸ್ತರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.