ಬೆಂಗಳೂರು: ಸರ್ವಾಧಿಕಾರಿ ಧೋರಣೆಯ ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಕೆಪಿಸಿಸಿ ಅಧಕ್ಷ ದಿನೇಶ್ ಗುಂಡೂರಾವ್ ವಾಗ್ಧಾಳಿ ನಡೆಸಿದರು. ಭಾರತ್ ಬಂದ್ ವೇಳೆ ಮೈಸೂರು ಬ್ಯಾಂಕ್ ವೃತ್ತದಿಂದ ಆನಂದ್ ರಾವ್ ಸರ್ಕಲ್‌ವರೆಗೂ ಎತ್ತಿನ ಗಾಡಿಯಲ್ಲಿ ಹತ್ತಿ ಪ್ರತಿಭಟನಾ ಮೆರವಣಿಗೆ ನಡೆಸಿದ ದಿನೇಶ್ ಗುಂಡೂರಾವ್, ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿಕೊಂಡು ನಾಲ್ಕೂವರೆ ವರ್ಷ ಅಧಿಕಾರ ನಡೆಸಿದ್ದಾರೆ.
ನೋಟು ಅಮಾನ್ಯದಿಂದ ಭಯೋತ್ಪಾದನೆ ಕಡಿಮೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ, ಭಯೋತ್ಪಾದನೆ ಹೆಚ್ಚಾಗಿದೆ. ಶ್ರೀಮಂತರು ನೋಟು ಅಮಾನ್ಯದ ಲಾಭ ಪಡೆದಿದ್ದಾರೆ. ಹಣ ಸಿಗದೇ ಬಡವರು ಸತ್ತಿದ್ದಾರೆ. ನೂರು ದಿನ ಸಮಯ ಕೊಡಿ ಬದಲಾವಣೆ ಮಾಡದಿದ್ದರೆ ಬೀದಿಯಲ್ಲಿ ನೇಣಿಗೇರಿಸಿ ಎಂದು ಪ್ರಧಾನಿ ಮನವಿ ಮಾಡಿದ್ದರು. 4 ವರ್ಷದಲ್ಲಿ ಶೇಕಡಾ 400ರಷ್ಟು ತೈಲ ಬೆಲೆ ಏರಿಕೆಯಾಗಿದೆ.
ಇಂತಹ ವ್ಯಕ್ತಿ ದೇಶದ ಪ್ರಧಾನಿಯಾಗಿರುವುದು ದುರ್ದೈವ ಎಂದು ಹರಿಹಾಯ್ದರು. ಪ್ರಧಾನಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಮೋದಿಯವರು ನಾನು ಮಾಡಿದ್ದೇ ಸರಿ ಎನ್ನುವ ಧೋರಣೆ ತಾಳಿದ್ದರಿಂದ ದೇಶದಲ್ಲಿ ಎಲ್ಲ ಬೆಲೆ ಗಗನಕ್ಕೇರುತ್ತಿವೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಬಸ್, ಆಟೋ ದರ ಹೆಚ್ಚಳವಾಗುತ್ತದೆ. ರೈತರ ಉತ್ಪನ್ನಗಳ ಬೆಲೆ ಏರಿಕೆಗೂ ಇದು ಕಾರಣವಾಗಲಿದೆ.
ಆದರೂ ಪ್ರಧಾನಿ ನರೇಂದ್ರ ಮೋದಿ ಕೋಟೆಯಲ್ಲಿ ಕುಳಿತುಕೊಂಡಿದಾರೆ. ಪ್ರಧಾನಿಗೆ ಕಣ್ಣು, ಕಿವಿ,ಮೂಗು ಯಾವುದೂ ಇಲ್ಲ. ಮೋದಿ ವರ್ತಮಾನದ ಬಗ್ಗೆ ಮಾತನಾಡದೇ 2022 ಕ್ಕೆ ಎಲ್ಲವನ್ನೂ ಸರಿಪಡಿಸುತ್ತೇನೆಂದು ಭವಿಷ್ಯದ ಬಗ್ಗೆ ಮಾತನಾಡುತ್ತಾರೆ. ನಾಲ್ಕೂವರೆ ವರ್ಷ ಏಣು ಮಾಡಿದ್ಧೀರಿ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿದ್ದು, ಅಲ್ಲಿ ದೇಶದಲ್ಲಿ ಚರ್ಚಿತವಾಗುತ್ತಿರುವ ಬೆಲೆ ಏರಿಕೆ,
ರೂಪಾಯಿ ಮೌಲ್ಯ ಇಳಿಕೆ ವಿಷಯಗಳು ಚರ್ಚೆ ಮಾಡದೇ ಕೇವಲ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈಗಲಾದರೂ ದೇಶದ ಜನರ ಸಂಕಷ್ಟ ಅರಿತು ಪ್ರತಿಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸಿ ತೆರಿಗೆ ಇಳಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದೇಶದ ಆರ್ಥಿಕ ಸ್ಥಿತಿ ಸುಧಾರಿಸುವಂತೆ ಕ್ರಮ ಕೈಗೊಂಡು ಮುತ್ಸದ್ದಿ ರಾಜಕಾರಣಿಯಾಗಿ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.
ದೇಶಕ್ಕೆ ಅಚ್ಚೇದಿನ್ ಬರಲಿಲ್ಲ. ಕೆಟ್ಟ ದಿನಗಳು ಬಂದಿವೆ. ಈ ಸರ್ಕಾರವನ್ನು ಕಿತ್ತು ಒಗೆಯಬೇಕು. ಕೇಂದ್ರದ ಬಿಜೆಪಿ ಸರ್ಕಾರ ಜಾತಿವಾದ, ಕೋಮುವಾದವನ್ನು ಹೆಚ್ಚಿಸಿದೆ.ರೈತ ವಿರೋಧಿ ಸರ್ಕಾರವನ್ನು ಕಿತ್ತೂಗೆಯುವ ಸಂಕಲ್ಪ ತೊಡಬೇಕು.
-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
ಪಾಪ ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ನಡೆದುಕೊಂಡಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ನವರಿಗೆ ಅಚ್ಚೇದಿನ್ ಬಂದಿದೆ. ಸಾಮಾನ್ಯ ಜನರಿಗೆ ಅಚ್ಚೆದಿನ್ ಬಂದಿಲ್ಲ. ಇಂದಿನ ಹೋರಾಟ ಸರ್ಕಾರ ಕಿತ್ತೂಗೆಯುವವರೆಗೂ ಮುಂದುವರೆಯಲಿದೆ.
-ಜಮೀರ್ ಅಹಮದ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ