Advertisement
ನೀವು ನಂಬುತ್ತೀರೋ ಇಲ್ಲವೋ, ನಿಜಕ್ಕೂ ಈ ಪುಸ್ತಕದ ಮೊದಲ ಕೆಲವು ಪುಟಗಳನ್ನು ಓದುವಾಗ ನನಗೆ ಹೀಗೆ ಅನ್ನಿಸಿದ್ದು.
Related Articles
Advertisement
ಓದಿ : ಮನ್ ಕಿ ಬಾತ್ : ಕೋವಿಡ್ ಹೋರಾಟದಲ್ಲಿ ರಾಜ್ಯಗಳ ಪರ ಕೇಂದ್ರ ಸರ್ಕಾರ ನಿಂತಿದೆ : ಮೋದಿ
ಹಿಟ್ಲರ್ ಸರ್ವಾಧಿಕಾರಿ ಧೋರಣೆಯ ಬಗ್ಗೆ ಬೇಕಾದಷ್ಟು ನಮಗೆ ಕೃತಿಗಳು ದೊರಕುತ್ತವೆ. ಅವನ ಆಡಳಿತದ ಆಚೆಗೆ ಇರುವ ಸುಡುಸುಡು ಖಾಸಗಿ ಬದುಕನ್ನು ಕಂಡ ಕುಟುಂಬವೊಂದರ ಎಳೆಯ ಬಾಲೆ ಬರೆದ ದಿನಚರಿಯಿದು.
ನಾಝಿಗಳು ನೆದರ್ಲೆಂಡ್ ನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಸಂದರ್ಭದಲ್ಲಿ ಗೆಸ್ಟಪೋಗಳ(ನಾಝಿ ಸರ್ಕಾರದಲ್ಲಿನ ಸಿಕ್ರೆಟ್ ಪೊಲೀಸರು) ಕಣ್ಣಿಂದ ತಪ್ಪಿಸಿಕೊಂಡು ಗುಪ್ತವಾಗಿ ಅಡಗುತಾಣವೊಂದರಲ್ಲಿ ವಾಸವಿದ್ದ ಎರಡು ಕುಟುಂಬಗಳ ಪೈಕಿ ಒಟ್ಟೊ ಫ್ರಾಂಕ್ ನ ಕುಟುಂಬದ ಹದಿಮೂರರ ಹರೆಯದ ಆ್ಯನ್ ತನ್ನ ಗೆಳೆಯ ಕಿಟಿ ಗೆ ಬರೆಯುವ ಪತ್ರಗಳ ರೂಪದ ಡೈರಿಯಲ್ಲಿ ಆಕೆ ಕಂಡ ಸುಡುವಾಗ್ನಿ ಕೆನ್ನಾಲಿಗಳ ಕಥೆ, ವ್ಯಥೆಗಳನ್ನು ಈ ದಿನಚರಿಯಲ್ಲಿ ತೋರಿಸಿಕೊಡುತ್ತಾಳೆ.
ಆಕೆ ತನ್ನ ಪ್ರತಿ ದಿನ ಬರೆಯುವ ಪತ್ರ ಅಥವಾ ಆ ದಿನಚರಿಯಲ್ಲಿ ಆಕೆ ಆರಂಭಿಸುವ ಮತ್ತು ಕೊನೆಗೊಳಿಸುವ ರೀತಿ ತುಂಬ ಆಪ್ತವೆನ್ನಿಸಿದೆ.
‘ಪ್ರಿಯ ಕಿಟಿ’ ಎಂದು ಆರಂಭಿಸುವ ಆಕೆ… ‘ನಿನ್ನ ಆ್ಯನ್’ ಎಂದು ಮುಗಿಸುತ್ತಾಳೆ. ಮತ್ತೊಂದು ವಿಚಾರವೆಂದರೇ, ಇದು ಹದಿಮೂರರ ಅಂಬೆ ಮನಸ್ಸು ಬರೆದ ದಿನಚರಿ ಹೌದೋ, ಅಲ್ಲವೋ ಎಂಬ ಪ್ರಶ್ನೆ ನಿಮ್ಮನ್ನು ಕಾಡದೇ ಇರುವುದಿಲ್ಲ.
ಆ್ಯನ್ ಅಪ್ಪಟ ಪುಸ್ತಕ ಪ್ರೇಮಿ, ಬರೆಯುವವಳು ಕೂಡ ಹೌದು. ತಾನು ಸುಮಾರು ಎರಡು ವರ್ಷಗಳ ಕಾಲ ಗೆಸ್ಟಪೋಗಳ ಕಣ್ಣಿಗೆ ಕಾಣಿಸಿದೆ ಆ ಅಡಗುತಾಣದಲ್ಲಿ ಇದ್ದು ಅನುಭವಿಸಿದ ನರಕ ಯಾತನೆಯನ್ನು ನಿವಾರಿಸಿಕೊಳ್ಳಲು ಆಕೆ ಕಂಡುಕೊಂಡ ಹವ್ಯಾಸವಿದು. ತನ್ನೆಲ್ಲಾ ಬೆಂಕಿಯುಗುಳುವ, ಎದೆಗೊದೆಯುವ ದುಃಖದಲೆಗಳನ್ನು ಮೆಟ್ಟಿ ನಿಲ್ಲುವ ಆಕೆಯ ನಿಲುವು ಮತ್ತು ಅದನ್ನು ತನ್ನ ಸಹಜವಾಗಿಯೇ, ಸರಳವಾಗಿಯೇ ಯಾವುದೇ ಮಿತಿಗಳಿಲ್ಲದೆ, ಗಡುವುಗಳಿಲ್ಲದೆ, ಮುಚ್ಚುಮರೆಯಿಲ್ಲದೆ ಹೊರಹಾಕಿಕೊಳ್ಳುವ ಆಕೆ ಬರೆಯುವ ಯಾವ ಪತ್ರವೂ ಆಕೆಯ ಪ್ರಿತಿಯ ಕಿಟಿಗೆ ತಲುಪದಿರುವುದು ಮತ್ತೊಂದು ಅಚ್ಚರಿ.
ರಾಜಕೀಯದ ರೌದ್ರತೆಯ ದವಡೆಯಿಂದ ತಪ್ಪಿಸಿಕೊಳ್ಳಲು ಆ ಅಡಗುತಾಣ ಆ್ಯನ್ ಳಿಗೆ ಆಕೆಯ ಬರಹಗಳು ಸಹಕರಿಸಿದವು ಅಂತನ್ನಿಸುತ್ತದೆ.
ಓದಿ : ಸಿರೋ ಸಮೀಕ್ಷೆ : ಕೋವಿಡ್ ವಿರುದ್ಧ ಹೋರಾಡಲು ಮಹಿಳೆಯರಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಇದೆ!
‘ನಮ್ಮ ಸ್ವಾತಂತ್ರ್ಯವನ್ನು ಮಿತಿಗೊಳಿಸಲಾಗಿತ್ತು. ಆದಾಗ್ಯೂ ಸಂಗತಿಗಳು ಸಹ್ಯವಾಗಿದ್ದವು’ ಅಂತ ಆ್ಯನ್ ಬರೆದುಕೊಂಡರೆ… ಮತ್ತೆ ಹಲವು ಕಡೆಗಳಲ್ಲಿ ಆಕೆ ಅಸಹ್ಯ ಬದುಕನ್ನು ಕಂಡದ್ದನ್ನು ಬಹಳ ನೋವಿನಿಂದ ಬರೆದುಕೊಂಡಿರುವುದನ್ನು ನಾವು ಕಾಣಬಹುದು.
1942 ಅಕ್ಟೋಬರ್ 9 ರಂದು ಬರೆದ ಪತ್ರವನ್ನು ಗಮನಿಸಬೇಕು…
“ಪ್ರಿಯ ಕಿಟಿ, ಇವತ್ತು ನಿನಗೊಂದು ನಿರಾಸೆಯ ಸಂಗತಿಯ ಹೇಳುವುದಿದೆ. ನಮ್ಮ ಯಹೂದಿ ಮಿತ್ರರನ್ನೆಲ್ಲಾ ಗುಂಪು ಗುಂಪಾಗಿ ಎಳೆದೊಯ್ಯಲಾಗುತ್ತಿದೆ. ಒಂದು ಚೂರು ಕರುಣೆಯಿಲ್ಲದಂತೆ. ಗೆಸ್ಟಪೋಗಳು ಇವರನ್ನೆಲ್ಲಾ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾರೆ. ದನದ ಗಾಡಿಗಳಲ್ಲಿ ತುರುಕಿ, ವೆಸ್ಟರ್ ಬ್ರಾಕ್ ನ ಡ್ರೆಂಟ್ ಎಂಬಲ್ಲಿಯ ಬೃಹತ್ ಯಹೂದಿ ಕ್ಯಾಂಪ್ ಗಳಿಗೆ ರವಾನಿಸಲಾಗುತ್ತಿದೆ. ವೆಸ್ಟರ್ ಬ್ರಾಕ್ ಹೆಸರು ಭಯ ಮೂಡಿಸುತ್ತೆ. “ಶೌಚದ ಸಣ್ಣ ಕೋಣೆಗಳಲ್ಲಿ ನೂರಾರು ಜನರನ್ನು ತುರುಕಲಾಗುತ್ತದೆ. ಅಲ್ಲದೆ ಅಲ್ಲಿ ಬೇಕಾದಷ್ಟು ಶೌಚಾಲಯಗಳಿಲ್ಲ. ಪ್ರತ್ಯೇಕ ವಾಸದ ವ್ಯವಸ್ಥೆಗಳಿಲ್ಲ. ಎಲ್ಲಾ ಗಂಡು, ಹೆಣ್ಣು, ಮಕ್ಕಳು ಎಲ್ಲರೂ ಒಂದೇ ಕಡೆ ನಿದ್ರಿಸಬೇಕು. ಇದರಿಂದಾಗಿ ಭಯಬೀಳಿಸುವಂತಹ ಅನೈತಿಕ ಸಂಗತಿಗಳ ಕೇಳಬೇಕಾಗಿದೆ. ಅಲ್ಲಿರುವ ಅನೇಕ ಮಹಿಳೆಯರು, ಮತ್ತು ಹುಡುಗಿಯರೂ ಕೂಡ ಯಾವ ಕ್ಷಣದಲ್ಲಿಯಾದರೂ ಗರ್ಭಿಣಿಯಾಗಬಹುದು” ಅಂತ ಆತಂಕ ವ್ಯಕ್ತಪಡಿಸುತ್ತಾಳೆ ಹದಿಮೂರರ ಹರೆಯದ ಆ್ಯನ್.
ನಾನು ಆರಂಭದಲ್ಲಿ ಇದೇ ವಿಚಾರಕ್ಕೆ ಹೇಳಿದ್ದು…ಈ ಪತ್ರಗಳನ್ನು, ದಿನಚರಿಯನ್ನು ಹದಿಮೂರು ವರ್ಷದ ಬಾಲಕಿಯೊಬ್ಬಳು ಬರೆದಿದ್ದು ಹೌದೋ, ಅಲ್ಲವೋ ಅಂತನ್ನಿಸುತ್ತದೆ ಎಂದು.
ಅಮೇರಿಕಾದ ಗ್ವಾಂಟನಾಮೊ ಬೇ ಜೈಲಿನ ಕ್ರೂರ ದೃಶ್ಯಗಳನ್ನು ನಮ್ಮ ಕಣ್ಣೆದುರಿಗೆ ತರಿಸುತ್ತವೆ ಆ್ಯನ್ ಬರೆದಿರುವ ಕೆಲವು ಸಂಗತಿಗಳು.
ಎಳೆಯ ವಯಸ್ಸಿನ ಎಂಥಾ ಪ್ರಬುದ್ಧ ಚಿಂತನೆ ಆ್ಯನ್ ಳದ್ದು..?! ಆ ಅಡುಗುತಾಣದಲ್ಲಿ ಎರಡು ವರ್ಷಗಳ ಕಾಲ ಆ್ಯನ್ ಳನ್ನು ಕಾಡುವ ದುಃಖ, ದುಮ್ಮಾನ, ನೋವು, ತಲ್ಲಣ, ಹಸಿವು, ತನ್ನ ಗೆಳೆಯನ ಕುರಿತಾದ ದೇಹ ಸೆಳೆತಗಳು ಪ್ರಬುದ್ಧಳಾಗಿ ಆಕೆಯನ್ನು ಬದಲಾಯಿಸುತ್ತದೆ.
ನಾಝಿ ಸೈನಿಕರ ಕಾನ್ಸಂಟ್ರೇಶನ್ ಕ್ಯಾಂಪ್ ನ ಗ್ಯಾಸ್ ಚೇಂಬರ್ ನಲ್ಲಿ ತನ್ನ ಸಹಚರರೆಲ್ಲಾ ಸುಟ್ಟು ಬೂದಿಯಾಗಿ ಬದಲಾಗುತ್ತಿರುವ ಅಸಹನೀಯ, ಕಣ್ಣಿಗೆ ಬೀಳುವ ನೋವಿನ ಪಾದದೊದೆತಗಳ ನಡುವೆ ಆ್ಯನ್ ಕೂಡ ಗ್ಯಾಸ್ ಚೇಂಬರ್ ನಲ್ಲಿ ಬೂದಿಯಾಗುತ್ತಾಳೆ. ಆಕೆ ಬರೆದಿಟ್ಟ ಈ ದಿನಚರಿಯನ್ನು ಹೊರತಾಗಿ ಎಲ್ಲವೂ ಹಾರುವ ಬೂದಿಯಾಗಿ ಪರಿವರ್ತನೆಯಾಗುತ್ತವೆ ಎನ್ನುವುದು ದುರಂತ.
ಜರ್ಮನ್ ಹಾಗೂ ಬ್ರಿಟಿಷ್ ನಡುವಿನ ಯುದ್ಧ, ಭೂಗತವಾಗಿರುವವರಿಗೆ ಹಣದ ವ್ಯವಸ್ಥೆ ಮಾಡುವ “ದಿ ಫ್ರಿ ನೆದರ್ಲೆಂಡ್, ಫ್ರೆಂಚ್ ನ ಬಾಯೆಕ್ಸ್ ಎಂಬ ಚಿಕ್ಕ ಹಳ್ಳಿಯೊಂದನ್ನು ವಶಪಡಿಸಿಕೊಂಡ ಘಟನೆಗಳ ಬಗ್ಗೆ ಬರೆದಿರುವುದನ್ನು ಸೇರಿ… 1944 ಜುಲೈ 21, ಅಂದು ಶುಕ್ರವಾರ, ಆಕೆ ಕಿಟಿಗೆ ಬರೆಯುವ ಪತ್ರದಲ್ಲಿ ಬರೆಯುತ್ತಾಳೆ….’ಒಂದು ಮಹತ್ವದ ಸುದ್ದಿ ಇದೆ..! ಹಿಟ್ಲರ್ ನ ಜೀವವನ್ನು ತೆಗೆಯುವ ಪ್ರಯತ್ನವೊಂದು ನಡೆದಿದೆ. ಇದರಲ್ಲಿ ಯಹೂದಿ ಕಮ್ಯುನಿಸ್ಟ್ ಗಳ ಕೈವಾಡವಾಗಲಿ ಅಥವಾ ಇಂಗ್ಲಿಷ್ ಬಂಡವಾಳಶಾಹಿಗಳ ಹಸ್ತ ಕ್ಷೇಪವಾಗಲಿ ಇಲ್ಲ. ಆದರೇ ಒಬ್ಬ ಸ್ವಾಭಿಮಾನಿ ಜರ್ಮನ್ ಸೇನಾಧಿಪತಿಯೊಬ್ಬನ ಕೈವಾಡವಿದೆ. ಆದರೇ ಈ ಸರ್ವಾಧಿಕಾರಿಯ ಜೀವ ಅದು ಹೇಗೋ ದೇವರ ಕೃಪೆಯಿಂದ ಉಳಿದಿದೆ’ ಎನ್ನುತ್ತಾಳೆ. ನನಗೆ ಗೊತ್ತಿರುವ ಮಟ್ಟಿಗೆ ಎಲ್ಲಿಯೂ ಸಿಗದ ಮಾಹಿತಿಗಳನ್ನು ಹದಿಮೂರರ ಬಾಲಕಿ ತನ್ನ ವಿಸ್ತಾರ ಕಣ್ಣುಗಳಿಂದ ನೋಡಿದ್ದಾಳೆ, ಅದನ್ನು ದಾಖಲಿಸಿದ್ದಾಳೆ ಅಂತನ್ನಿಸುತ್ತದೆ. ‘ಅದು ಹೇಗೋ ಸರ್ವಾಧಿಕಾರಿಯ ಜೀವ ದೇವರ ಕೃಪೆಯಿಂದ ಉಳಿದಿದೆ’ ಎನ್ನುವುದು ರಾಜಕೀಯ ಚರಿತ್ರೆಯ ಕ್ರೂರತೆಯ, ಬದುಕಿನ ಬೇಗುದಿಯ ನಡುವೆ ಹಿಟ್ಲರ್ ನನ್ನು ದ್ವೇಷಿಸಬೇಕಾದವಳು ಹೀಗೆ ಹೇಳಿರುವುದು ಬಹಳ ಆಶ್ಚರ್ಯ ಎನ್ನಿಸುತ್ತದೆ.
ವಿಪರೀತವಾಗಿ ಹೆಣಗಾಡುತ್ತಲೇ ಆ್ಯನ್ ಬದುಕುತ್ತಾಳೆ. ಆ ನೋವಿನ ಅಲೆಗಳಲ್ಲಿ ತನ್ನ ಹವ್ಯಾಸವನ್ನು ಜೊತೆಗೆ ಕಾಪಾಡಿಕೊಂಡು ಹೋಗುವುದು ನಿಜಕ್ಕೂ ಅದ್ಭುತ ಅನ್ನಿಸುತ್ತದೆ. ಎಷ್ಟೋ ಪುಸ್ತಕಗಳನ್ನು ಓದುತ್ತಾಳೆ, ತನಗಿಷ್ಟವಾದ ಆ ಪುಸ್ತಕಗಳ ಅಧ್ಯಾಯಗಳನ್ನು ಭಾಷಾಂತರ ಮಾಡುತ್ತಾಳೆ, ಹೊಸ ಪದಗಳ ಅರ್ಥ ಟಿಪ್ಪಣಿ ಮಾಡುತ್ತಾಳೆ ಎಷ್ಟು ನೋವಿನ ಸಮಯವನ್ನೂ ಸಾರ್ಥಕ್ಯಗೊಳಿಸಿಕೊಂಡಳು ಆ್ಯನ್…!? ಅದ್ಭುತ.
ಓದಿ : ಕರುಣಾಜನಕ ಕಥೆಗಳು: ತಾಯಿ ಮುಖ ನೋಡುವ ಅವಕಾಶವೂ ಸಿಗಲಿಲ್ಲ
ಕೃತಿಯ ಹಿಂಪುಟದಲ್ಲಿ ಉಲ್ಲೇಖಿಸಿರುವ ಹಾಗೆ, ಆ್ಯನ್ ಳ ಈ ದಿನಚರಿಯ ಹಸ್ತಾಕ್ಷರದ ಕಟ್ಟು, ಪರಿಷ್ಕೃತಗೊಂಡು ಯುದ್ಧಾನಂತರ ಪುಸ್ತಕ ರೂಪದಲ್ಲಿ ಡಚ್ ಭಾಷೆಯಲ್ಲಿ ಪ್ರಕಟಗೊಂಡಿತು. ಸಿನೆಮಾ ಕಥೆಯಾಗಿಯೂ ಪ್ರಸಿದ್ಧಿ ಪಡೆಯಿತು ಎಂಬುವುದು ವಿಶೇಷ.
ನಾಗರೇಖಾ ಗಾಂವಕರ ಒಳ್ಳೆಯ ಕೃತಿಯನ್ನು ತಡವಾಗಿಯಾದರೂ ಕನ್ನಡಕ್ಕೆ ಕೊಟ್ಟಿದ್ದಾರೆ. ಕನ್ನಡಕ್ಕೆ 2021ರಲ್ಲಿಯಾದರೂ ಈ ಕೃತಿ ಬರುವ ಹಾಗೆ ಮಾಡಿದ್ದಕ್ಕೆ ಅವರಿಗೆ ನಮಸ್ಕಾರಗಳು.
ಆದರೇ, ಚೆನ್ನಪ್ಪ ಕಟ್ಟಿ ಮುನ್ನುಡಿಯಲ್ಲಿ ಬರೆದು ನಾಗರೇಖಾ ಗಾಂವಕರ ಅವರನ್ನು ಹಾಡಿ ಹೊಗಳಿರುವಂತೆ ಈ ಕೃತಿ ಇಲ್ಲ. ಅನುವಾದವನ್ನು ಸಮರ್ಥವಾಗಿ ಮಾಡಿದ್ದಾರೆಂದು ಚೆನ್ನಪ್ಪ ಅವರು ಹೇಳಿದ್ದಾರೆ. ಆದರೇ ಒಬ್ಬ ಓದುಗನಾಗಿ, ಹಲವು ಅನುವಾದ ಕೃತಿಗಳನ್ನು ಓದಿದವನಾಗಿ ನನಗೆ ಅಷ್ಟೇನು ಒಳ್ಳೆಯ ಅನುವಾದ ಅಂತನ್ನಿಸಲಿಲ್ಲ. ಅದರ ಹೊರತಾಗಿ ಒಳ್ಳೆಯ ವಿಷಯವನ್ನು ಕನ್ನಡದ ಓದುಗರ ಪಾಲಿಗೆ ತಂದಿರುವುದು ನಿಜಕ್ಕೂ ಶ್ಲಾಘನೀಯ.
ಈ ಕೃತಿ ನಿಮ್ಮಿಂದ ಓದನ್ನು ಬಯಸಿದೆ.
-ಶ್ರೀರಾಜ್ ವಕ್ವಾಡಿ
ಓದಿ : ವ್ಯವಸ್ಥೆ ವಿಫಲವಾಗಿದೆ, ಈಗ ‘ಜನ್ ಕಿ ಬಾತ್’ ಮುಖ್ಯ : ರಾಹುಲ್ ಗಾಂಧಿ