ಹುಣಸೂರು: ಪರಿಸರ ಉಳಿವಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಸಿರು ಇಂಧನ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ 3 ಸಾವಿರ ಸೋಲಾರ್ ಹಾಗೂ 6 ಸಾವಿರ ಹೊಗೆ ರಹಿತ ಒಲೆಗಳನ್ನು ವಿತರಿಸಲಾಗಿದೆ ಎಂದು ಎಸ್‌ಕೆಡಿಆರ್‌ಡಿಪಿಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ತಿಳಿಸಿದರು.
ತಾಲೂಕಿನ ಹನಗೋಡು ಹೋಬಳಿಯ ಕಿರಂಗೂರಿನಲ್ಲಿ ಹಸಿರು ಇಂದನ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ವಿದ್ಯುತ್ ಉಳಿತಾಯ ಹಾಗೂ ಪರಿಸರ ಹಿತ ದೃಷ್ಠಿಯಿಂದ ಸೋಲಾರ್ ವ್ಯವಸ್ಥೆಯನ್ನು ಮೈಸೂರಿನ ಸೆಲ್ಕೋ ಸೋಲಾರ್ ಲೈಟ್‌ಕಂಪನಿಯ ಸಹಕಾರದಲ್ಲಿ ಕಡಿಮೆ ಬೆಲೆಗೆ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ,
ಧರ್ಮಸ್ಥಳ ಕ್ಷೇತ್ರದವತಿಯಿಂದ ಸೋಲಾರ್ ವ್ಯವಸ್ಥೆಗೆ ಪ್ರತಿ ಕುಟುಂಬಕ್ಕೆ ತಲಾ 500ರೂ.ಆರ್ಥಿಕ ನೆರವು ಹಾಗೂ ಹೊಗೆರಹಿತ ಒಲೆಗಳಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಇದರಿಂದ ಹಳ್ಳಿಗಳಲ್ಲಿ ವಿದ್ಯುತ್ ವ್ಯತಯದಿಂದ ಪರೀಕ್ಷೆ ಸಮಯದಲ್ಲಿ ರಾತ್ರಿ ವೇಳೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
50 ಲಕ್ಷ ರೂ.ಪ್ರಗತಿ: ಇತ್ತೀಚಿನ ವರ್ಷಗಳಲ್ಲಿ ಸಂಪನ್ಮೂಲ ಕಡಿಮೆಯಾಗುತ್ತಿದ್ದು, ಸಂಪತ್ತನ್ನುಗಳಿಸಬಹುದಾದರೂ ಸಂಪನ್ಮೂಲಗಳನ್ನು ಪಡೆಯುವುದು ಕಷ್ಟ, ಈ ನಿಟ್ಟಿನಲ್ಲಿ ಸಂಸ್ಥೆಯ ಹಸಿರು ಇಂಧನ ಯೋಜನೆ ವರವಾಗಿ ಪರಿಣಮಿಸಿದ್ದು. ತಾಲೂಕಿನಲ್ಲಿ 15 ಕುಟುಂಬಕ್ಕೆ ವಾಟರ್ ಹೀಟರ್ ಸೇರಿದಂತೆ 450 ಸೋಲಾರ್ ದೀಪ ಹಾಗೂ ಐದು ಮಂದಿಗೆ ಸೋಲಾರ್ ಜೆರಾಕ್ಸ್ ಯಂತ್ರ ವಿತರಿಸಲಾಗಿದ್ದು, ಒಟ್ಟು 2.25 ಲಕ್ಷರೂ. ಅನುದಾನ ನೀಡಲಾಗಿದೆ.
ಈ ಯೋಜನೆಗೆ ಜಿಲ್ಲೆಯಲ್ಲಿ 50 ಲಕ್ಷ ರೂ. ಪ್ರಗತಿ ನಿಧಿ ಸಾಲ ವಿತರಿಸಲಾಗಿದೆ. ಹಸಿರು ಇಂಧನ ಕಾರ್ಯಕ್ರಮದ ಸಾಧನೆಗಾಗಿ ಲಂಡನ್‌ನಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರಿಗೆ ಆಸಿಡನ್ ಗೋಲ್ಡ್ ಅವಾರ್ಡ್‌ನ 35ಲಕ್ಷ ರೂ.ನಗದು ಬಹುಮಾನ ಸಿಕ್ಕಿದೆ ಎಂದು ತಿಳಿಸಿ, ಎಲ್ಲರೂ ಸೋಲಾರ್ ಬಳಕೆಗೆ ಮುಂದಾಗಬೇಕೆಂದು ಆಶಿಸಿದರು.
ಸೋಲಾರ್‌ಗೆ ಆದ್ಯತೆ ನೀಡಿ: ಸೋಲಾರ್ ಕಂಪನಿಯ ಎಜಿಎಂ ಗುರುಪ್ರಕಾಶ್ ಶೆಟ್ಟಿ ಪ್ರಸ್ತುತ ಸಂದರ್ಭದಲ್ಲಿ ಸೋಲಾರ್ ಬಳಕೆ ಮಹತ್ವದ್ದಾಗಿದ್ದು, ಯೋಜನೆಯೊಡಗೂಡಿ ಸೋಲಾರ್ ಬಳಕೆಗೆ ಆದ್ಯತೆ ನೀಡಲಾಗಿದೆ ಎಂದರು. ಮಂಡ್ಯದ ಗ್ರೀನ್ ವೇ ಮ್ಯಾನೇಜರ್ ಜಯಸಿಂಹ ಕುಕ್ ಸ್ಟವ್ ಅಳವಡಿಕೆ ಹಾಗೂ ಬಳಕೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಿರಂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೆಲುವರಾಜು, ತಾಪಂ ಸದಸ್ಯೆ ಮಂಜುಳಾರಾಜೇಗೌಡ, ವಿಎಸ್‌ಎಸ್‌ಎನ್ ಅಧ್ಯಕ್ಷ ಅಂದಾನಿಗೌಡ, ತಾಲೂಕು ಯೋಜನಾಧಿಕಾರಿ ಯಶೋಧಾಶೆಟ್ಟಿ, ಮಾತನಾಡಿದರು. ಕೃಷಿ ಮೇಲ್ವಿಚಾರಕ ಯೋಗೇಶ್, ವಲಯ ಮೇಲ್ವಿಚಾರಕಿ ಸರೋಜಾ, ಗ್ರಾಮದ ಮುಖಂಡ ಚಂದ್ರೇಶ್, ಮುಖ್ಯಶಿಕ್ಷಕ ಮುಕುಂದ, ಸೋಲಾರ್ ಕಂಪನಿಯ ಜಗದೀಶ್,ಸುಕುಮಾರ್, ಸೇವಾಪ್ರತಿನಿಧಿಗಳು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.