Advertisement

ಮೈಲಾರದಲ್ಲಿ ಭಕ್ತ ಸಾಗರ

10:28 AM Feb 23, 2019 | |

ಹೂವಿನಹಡಗಲಿ: ನಾಡಿನ ಸುಕ್ಷೇತ್ರ ತಾಲೂಕಿನ ಮೈಲಾರದ ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಶುಕ್ರವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಡೆಂಕನಮರಡಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ನಡುವೆ ಗೊರವಯ್ಯ ರಾಮಣ್ಣ ಸಂಪ್ರದಾಯದಂತೆ ನೆರೆದಿದ್ದ ಭಕ್ತ ಸಾಗರ ನೋಡು ನೋಡುತ್ತಿದ್ದಂತೆ ಸುಮಾರು 18 ಅಡಿ ಎತ್ತರದ ಬಿಲ್‌ ಸರ ಸರನೇ ಏರಿ ಸುತ್ತಲು ತದೇಕ ಚಿತ್ತದಿಂದ ಆಕಾಶ ವೀಕ್ಷಣೆ ಮಾಡಿ ಸದ್ದಲೇ ಎನ್ನುವ ಧಾರ್ಮಿಕ ಆದೇಶವನ್ನು ಭಕ್ತರಿಗೆ ನೀಡಿದನು.

Advertisement

ಕೂಡಲೇ ನೆರೆದಿದ್ದ ಲಕ್ಷಾಂತರ ಭಕ್ತ ಸಮೂಹ ಮಂತ್ರಮುಗ್ದರಾಗಿ ಕಾರ್ಣಿಕ ನುಡಿಯುವ ಗೊರವಯ್ಯನ ನುಡಿ ಆಲಿಸಲು ತಮ್ಮ ಚಿತ್ತ ನೆಟ್ಟರು. ಈ ಸಂದರ್ಭದಲ್ಲಿ ಕಾರ್ಣಿಕ ನುಡಿಯುವ ಗೊರವಯ್ಯ “ಕಬ್ಬಿಣದ ಸರಪಳಿ ಹರಿತಲೆ ಪರಾಕ್‌’ ಎಂಬ ದೈವವಾಣಿ ನುಡಿದರು.

ಬಿದ್ದ ಕಡೆ ಲೆಕ್ಕಾಚಾರ: ಇನ್ನೂ ಕಾರ್ಣಿಕ ನುಡಿದ ಗೊರವಯ್ಯ ಯಾವ ದಿಕ್ಕಿನಲ್ಲಿ ಬೀಳುತ್ತಾನೆ ಎನ್ನುವುದು ಸಹ ತುಂಬಾ ಕುತೂಹಲಕಾರಿ ಸಂಗತಿಯಾಗಿದೆ. ಕಾರಣ ಕಾರ್ಣಿಕ ನುಡಿ ಹೇಳಿ ಬಿಲ್‌ನಿಂದ ಕಾರ್ಣಿಕ ನುಡಿದ ಗೊರವಯ್ಯ ಬೀಳುವಾಗ ಯಾವ ಗ್ರಾಮದ ಕಡೆ ತಲೆ ಮಾಡಿದ್ದಾನೆ, ಯಾವ ದಿಕ್ಕಿನಲ್ಲಿ ಬಿದ್ದರು.. ಹೀಗೆ ಹತ್ತು ಹಲವಾರು ಲೆಕ್ಕಾಚಾರವನ್ನು ಭಕ್ತರು ತಮ್ಮದೇ ಆದ ಲೆಕ್ಕಾಚಾರ ಮಾಡಿಕೊಂಡು ಕೂಡಿ-ಕಳೆದು ಭಾಗಿಸಿ ಒಂದು ಇತ್ಯರ್ಥಿಕ್ಕೆ ಬರುತ್ತಾರೆ.

ಮಣ್ಣಿನಲ್ಲಿ ಕನಸಿನ ಮನೆ ನಿರ್ಮಾಣ: ಕಾರ್ಣಿಕ ನುಡಿ ಕೇಳಲು ಆಗಮಿಸಿದಂತಹ ಭಕ್ತರು ತಾವು ಭವಿಷ್ಯದ ಜೀವನದಲ್ಲಿ ಸುಂದರ ಮನೆ ನಿರ್ಮಾಣ ಮಾಡಬೇಕೆಂಬ ಸಂಕಲ್ಪ ಮಾಡಿಕೊಂಡು ಡೆಂಕನ ಮರಡಿಯಲ್ಲಿ ಕಾರ್ಣಿಕದ ನಂತರದಲ್ಲಿ ಮಣ್ಣಿನಲ್ಲಿ ಮನೆ ನಿರ್ಮಾಣ ಮಾಡಿ ಬರುವ ಜಾತ್ರೆಯೊಳಗೆ ಮನೆ ನಿರ್ಮಾಣ ಕಾರ್ಯ ನಡೆಯಬೇಕು ಎನ್ನುವ ಹರಕೆ ಹೊತ್ತು ಬರುತ್ತಾರೆ.

ಕಾರ್ಣಿಕೋತ್ಸವ ಪೂರ್ವದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌ ಕುದುರೆ ಸವಾರಿಯೊಂದಿಗೆ ಭವ್ಯ ಮೆರವಣಿಗೆ ಮೂಲಕ ಡೆಂಕನ ಮರಡಿಗೆ ಆಗಮಿಸಿದರು. ನಂತರ ಕಾರ್ಣಿಕ ನುಡಿಯುವ ಗೊರವಯ್ಯ ಸಂಪ್ರದಾಯದಂತೆ ಸುಮಾರು 18 ಅಡಿ ಎತ್ತರದ ಬಿಲ್ಲನ್ನೇರಿ ಕಾರ್ಣಿಕ ನುಡಿದರು.

Advertisement

ಈ ಸಂದರ್ಭದಲ್ಲಿ ಮುಜರಾಯಿ ಖಾತೆ ಸಚಿವ ಪಿ.ಟಿ. ಪರಮೇಶ್ವರ್‌ನಾಯ್ಕ, ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ, ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌, ಎಸ್‌ಪಿ ಅರಣ್‌ ರಂಗರಾಜನ್‌, ರಾಜಕೀಯ ಮುಖಂಡರಾದ ಎಂ.ಪರಮೇಶ್ವರಪ್ಪ, ಬಸವನಗೌಡ, ಎಲ್‌.ಚಂದ್ರನಾಯ್ಕ, ಜ್ಯೋತಿ ಮಲ್ಲಣ್ಣ, ಬಿ. ಹನುಮಂತಪ್ಪ, ತಾಪಂ ಸದಸ್ಯರು, ಜಿಪಂ ಸದಸ್ಯರು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ವಿವಿಧ ಸೇವೆ ಸಲ್ಲಿಸಿದ ಭಕ್ತರು 
ಹೂವಿನಹಡಗಲಿ:
ಸುಕ್ಷೇತ್ರ ಮೈಲಾರದಲ್ಲಿ ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆಯಿಂದಲೇ ಅನೇಕ ಧಾರ್ಮಿಕ ವಿಧಿವಿಧಾನ ನಡೆದವು.

ಬೆಳಗ್ಗೆಯಿಂದಲೇ ಭಕ್ತರು ಡೆಂಕನ ಮರಡಿಗೆ ತೆರಳಿ ಮೀಸಲು ಬುತ್ತಿ ಸಲ್ಲಿಸಿದ ಬಳಿಕ ಶ್ರೀಮೈಲಾರಲಿಂಗ ಸ್ವಾಮಿ ಸನ್ನಿಧಿಗೆ ಆಗಮಿಸಿ ದೀವಟಿಗೆ ಸೇವೆ, ಕುದುರೆ ಕಾರು ಸೇವೆ, ಹಣ್ಣು ತುಪ್ಪ ನೀಡುವುದು ಮುಂತಾದ ಧಾರ್ಮಿಕ ಕಾರ್ಯಗಳು ಸುಕ್ಷೇತ್ರ ಮೈಲಾರದಲ್ಲಿ ನಡೆದವು.

ಕಾರ್ಣಿಕ ನುಡಿ ಮುದ್ರಿಸಲು ಜಿಲ್ಲಾಡಳಿತದಿಂದ ಉತ್ತಮ ವ್ಯವಸ್ಥೆ ಕಾರ್ಣಿಕ ನಡೆಯುವ ಡೆಂಕನಮರಡಿ ಸ್ಥಳದಲ್ಲಿ ಜಿಲ್ಲಾಡಳಿತ ಈ ಬಾರಿ ಗೊಂದಲ ಆಗದಂತೆ 20 ಲೈನರ್‌ ಸ್ಪೀಕರ್‌ ಮೂವಿಂಗ್‌ ಕ್ಯಾಮೆರಾ ಅಳವಡಿಲಾಗಿತ್ತು. ಅಲ್ಲದೆ, ಗೊರವಯ್ಯನಿಗೆ ಸೂಕ್ಷ್ಮಧ್ವನಿ ಗ್ರಹಿಸುವ ಮೈಕ್ರೋಫೋನ್‌ ಜೋಡಣೆ ಮಾಡಲಾಗಿತ್ತು. ಕಾರ್ಣಿಕ ನುಡಿಯುವ ಪೂರ್ವದಲ್ಲಿ ಅಧಿಕಾರಿಗಳು ಪ್ರತಿಯೊಂದು ಮೈಕ್‌ಗಳನ್ನು ಪರೀಕ್ಷಿಸಿದ ನಂತರ ಕಾರ್ಣಿಕ ನುಡಿಯಲು ಅನುವು ಮಾಡಿಕೊಡಲಾಗಿತ್ತು. ಧ್ವನಿ ಮುದ್ರಿಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ದೈವವಾಣಿ ಮುಗಿದ ನಂತರ ಪದೇ ಪದೇ ಮತ್ತೂಮ್ಮೆ ಲಕ್ಷಾಂತರ ಭಕ್ತರಿಗೆ ಕೇಳಿಸಲಾಯಿತು.

ಸರಪಳಿ, ಭಗಣಿಗೂಟ ಪವಾಡ ಇಂದು 
ಹೂವಿನಹಡಗಲಿ: ಮೈಲಾರಲಿಂಗೇಶ್ವರ ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಫೆ.23 ರಂದು (ಶನಿವಾರ) ಸಂಜೆ 4.30ಕ್ಕೆ ಗೊರವರು ಹಾಗೂ ಕಂಚಿ ವೀರರಿಂದ ಸರಪಳಿ ಪವಾಡ ಮತ್ತು ಭಗಣಿ ಗೂಟ ಪವಾಡಗಳು ನಡೆಯಲಿವೆ. ಡೆಂಕಣ ಮರಡಿಯಲ್ಲಿ ರಾಕ್ಷಸರನ್ನು ಸಂಹಾರ ಮಾಡಿದ್ದ ಹಿನ್ನೆಲೆಯಲ್ಲಿ ಶುಭ ನುಡಿಯಬೇಕೆಂಬ ಕಾರಣಕ್ಕಾಗಿ ಕಾರ್ಣಿಕ ನುಡಿದ ಗೊರವಪ್ಪನವರು ಮರುದಿನ ಹಲವಾರು ಪವಾಡಗಳನ್ನು ನಡೆಸುತ್ತಾ ಬಂದಿರುವುದು ದೇವಸ್ಥಾನದ ಸಂಪ್ರದಾಯವಾಗಿದೆ. ಈ ಸಂದರ್ಭದಲ್ಲಿ ಗೊರವರು, ಕಂಚಿ ವೀರರು ಮನೆಯಲ್ಲಿ ಸಾಕಷ್ಟು ಮಡಿಯುಡಿಯಿಂದ ದೇವರಿಗೆ ಹರಕೆ ತೀರಿಸುತ್ತಾರೆ. ವಂಶ ಪಾರಂಪರ್ಯವಾಗಿ ದೇವರ ಕೆಲಸವನ್ನು ಮಾಡುತ್ತಿದ್ದಾರೆ. ದೇವಸ್ಥಾನ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್‌ ಸಮ್ಮುಖದಲ್ಲಿ ಕಂಚಿ ವೀರರ ಆಯುಧಗಳಿಗೆ ಪೂಜೆ ಸಲ್ಲಿಸಿದ ನಂತರದಲ್ಲಿ ಪವಾಡಗಳು ನಡೆಯಲಿವೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕಾಧಿಕಾರಿ ಎಂ.ಎಚ್‌.ಪ್ರಕಾಶರಾವ್‌ ತಿಳಿಸಿದ್ದಾರೆ.

ಡೆಂಕನ ಮರಡಿಯಲ್ಲಿ ರಾರಾಜಿಸಿದ ಮೊಬೈಲ್‌ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದ ಅಂಗವಾಗಿ ಗೊರವಪ್ಪನ ಕಾರ್ಣಿಕ ನುಡಿ ಕೇಳಲು ಡೆಂಕನ ಮರಡಿಯಲ್ಲಿ ಲಕ್ಷಾಂತರ ಭಕ್ತರು ಜಮಾಯಿಸಿದ್ದರು. ಕಾರ್ಣಿಕ ನುಡಿಯಲು ಬಿಲ್ಲನ್ನೇರಿದ ಗೊರವಪ್ಪ, ಸದ್ದಲೇ ಎಂದಾಕ್ಷಣ ತುಟಿಪಿಟಿಕ್‌ ಎನ್ನದೇ ನಿಶ್ಯಬ್ದಗೊಂಡ ಭಕ್ತರು, ತಮ್ಮಲ್ಲಿನ ಮೊಬೈಲ್‌ಗ‌ಳನ್ನು ತೆಗೆದು ಕಾರ್ಣಿಕ ನುಡಿಯ ವೀಡಿಯೋ ಚಿತ್ರೀಕರಣ ಮಾಡುವಲ್ಲಿ ನಿರತರಾದರು. ಕಾರ್ಣಿಕ ನುಡಿ ಹೇಳುತ್ತಿದ್ದಂತೆ ಚಿತ್ರೀಕರಿಸಿದ ವೀಡಿಯೋವನ್ನು ಕ್ಷಣಾರ್ದದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next