ಸಿಂಧನೂರು: ಕೆಲ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳು ಅವಧಿ ಮುಗಿದರೂ ಇನ್ನೂ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ಅಮಾನತು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಎಚ್ಚರಿಸಿದರು.
ನಗರದ ಸರ್ಕೂಟ್ ಹೌಸ್‌ನಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ನಗರದಲ್ಲಿ ಮೂರು ವರ್ಷ ಕಳೆದರೂ ಇನ್ನೂ ಕೆಲಸ ಬಾಕಿ ಇದೆ ಎಂದು ಹೇಳುತ್ತಿರುವ ಅಧಿಕಾರಿಗಳಿಗೆ ನಾಚಿಕೆ ಆಗಬೇಕು. 24/7, ನಗರೋತ್ಥಾನ, ಒಳಚರಂಡಿ ಕಾಮಗಾರಿಗಳು ಇನ್ನೂ ಮುಗಿದಿಲ್ಲ. ಅಧಿಕಾರಿಗಳಿಗೆ ಸರಿಯಾಗಿ ಕೆಲಸ ಮಾಡದಿದ್ದರೆ ರಾಜೀನಾಮೆ ಕೊಡಿ. ಹೊಸ ವರ್ಷದಿಂದ ಹೊಸಬರಿಗೆ
ಕೆಲಸ ಕೊಡುತ್ತೇನೆ. ಹುಚ್ಚುತನ ವರ್ತನೆ ಮಾಡೋದು ಬಿಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಬಸ್ ನಿಲ್ದಾಣವನ್ನು ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಮಾಡಬೇಕು. ಮಿನಿ ವಿಧಾನಸೌಧದ ಬಳಿ ಇರುವ ಬಸ್ ತಂಗುದಾಣವನ್ನು ಬೇರೆಕಡೆ ಸ್ಥಳಾಂತರಿಸುವಂತೆ ಸಚಿವರು ವಿಜಯ ಪಾಟೀಲರಿಗೆ ಎಚ್ಚರಿಸಿದರು.
ಅಧಿಕಾರಿಗಳು ತಮ್ಮ ಇಲಾಖೆಯ ಕೆಲಸದ ಕಡೆ ಗಮನಹರಿಸಬೇಕು. ಅಭಿವೃದ್ಧಿ ಕಾಮಗಾರಿ ವಿಷಯದಲ್ಲಿ ಅಲಕ್ಷ್ಯ, ಬೇಜವಾಬ್ದಾರಿ ತೋರಿದರೆ ಸಹಿಸಲಾಗದು. ಅಂತಹ ಅಧಿಕಾರಿಗಳಿಗೆ ಅಮಾನತು ಶಿಕ್ಷೆ ನೀಡಲಾಗುವುದು. ಯಾವುದೇ ಕೆಲಸವನ್ನು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನಿರ್ವಹಿಸಿ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.
ಜ.5ಕ್ಕೆ ಸಿಎಂ ಭೇಟಿ: 2019ರ ಜನವರಿ 5ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸಿಂಧನೂರಿಗೆ ಬರಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸಬೇಕು. 24/7 ಕುಡಿಯುವ ನೀರಿನ ಕಾಮಗಾರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದಲೇ ಚಾಲನೆ ಕೊಡಿಸುವುದಾಗಿ ಹೇಳಿದರು.
ಲಿಂಗಸುಗೂರು ಸಹಾಯಕ ಆಯುಕ್ತ ಮಾರುತಿ, ತಹಶೀಲ್ದಾರ್ ಶಿವಾನಂದ, ನಗರಸಭೆ ಪೌರಾಯುಕ್ತ ವಿರೂಪಾಕ್ಷ್ಯ ಮೂರ್ತಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿ ವಿಜಯ ಪಾಟೀಲ ಬಿಜಾಪುರ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಮೊಬೈಲ್ ಬಂದ್: ಸಭೆ ಆರಂಭಕ್ಕೂ ಮುನ್ನವೇ ಸಚಿವ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು. ಪರಿಣಾಮ ಸಭೆ ಮುಗಿಯುವವರೆಗೆ ಮೊಬೈಲ್ ರಿಂಗಣಿಸಲಿಲ್ಲ.