ಚನ್ನಗಿರಿ: ದೇಶದ ಪ್ರತಿಯೊಂದು ಹಳ್ಳಿಗಳಲ್ಲಿನ ಕೆರೆಗಳು ಅಭಿವೃದ್ಧಿಯಾದರೆ ನಾವುಗಳು ಪ್ರಗತಿ ಕಾಣಲು ಸಾಧ್ಯ. ಇದನ್ನು ಮನಗಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದಿಂದ ಕೆರೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವುದರ ಜತೆಗೆ ಕೆರೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಧರ್ಮಸ್ಥಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಹೇಳಿದರು.
ತಾಲೂಕಿನ ಚಿಕ್ಕಬೆನ್ನೂರು ಗ್ರಾಮದದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು ಕೆರೆಗಳ ರಕ್ಷಣೆಯಿಂದ ದೇಶವು ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅಂತರ್ ಜಲಮಟ್ಟದ ಕೊರತೆಯಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುವಂತೆ ಆಗಿದೆ.
ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕೆರೆಗಳ ಬಗ್ಗೆ ಹೊಂದಿದ ಅಸಕ್ತಿ ಇಂದಿನ ಯುವಕರಿಗೆ ಇಲ್ಲವಾಗಿದೆ. ಕೆರೆಗಳೆಂದರೆ ನಿರ್ಲಕ್ಷé ವಹಿಸಲಾಗುತ್ತಿದೆ. ಹೀಗಾಗಿ ಬರಗಾಲದ ದಂತಹ ವಾತಾವರಣ ನಿರ್ಮಾಣವಾಗಿದೆ. ತಕ್ಷಣ ಎಚ್ಚೆತ್ತುಕೊಂಡು ಕೆರೆಗಳ ರಕ್ಷಣೆ ಕೈಗೊಂಡರೆ ಸಮಾಜ ಉಳಿಯಲು ಸಾಧ್ಯ ಎಂದರು.
ಪ್ರಸಕ್ತ ವರ್ಷ 100 ಕೆರೆಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಿದ್ದು, ಕೆರೆ ರಕ್ಷಿಸಿ ನೀರನ್ನು ಸಂರಕ್ಷಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಲಾಗುತ್ತದೆ. ಕೃಷಿ ತೋಟಗಳಿಗೆ ಅಂತರ್ಜಲದ ಮಹತ್ವದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಯೋಜನೆಯಿಂದ 10 ಲಕ್ಷ ರೂ. ಅನುದಾನ ಹಾಗೂ ಗ್ರಾಮಸ್ಥರಿಂದ 15 ಕ್ಷ ರೂ. ಸಹಕಾರದೊಂದಿಗೆ 8 ಎಕರೆಯ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಮುಂದಿನ ದಿನಗಳಲ್ಲಿ ಕೆರೆಯನ್ನು ನಿರ್ವಹಣೆ ಮಾಡುವುದರ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಜಿಪಂ ಸದಸ್ಯ ವಾಗೀಶ್ ಮಾಸ್ಟರ್ ಮಾತನಾಡಿ., ಧರ್ಮಸ್ಥಳ ಗ್ರಾಮಾಭಿವೃಧಿದ್ಧಿ ಸಂಸ್ಥೆಯು ಸಾಮಾಜಿಕ ಕಳಕಳಿ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಸ್ವಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಚಿಕ್ಕಬೆನ್ನೂರುಕೆರೆಯ ನೀರು ತುಂಬಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದರು.
ತಾಪಂ ಸದಸ್ಯ ಪ್ರಕಾಶ್, ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ ಮೂರ್ತಪ್ಪ, ಕಾಂಗ್ರೆಸ್ ಯುವ ಮುಖಂಡ ವಡ್ನಾಳ್ ಜಗದೀಶ್, ಪ್ರಾದೇಶಿಕ ನಿರ್ದೇಶಕ ಜಯಶಂಕರ್ ಶರ್ಮ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಲಪ್ಪ, ಜಿಲ್ಲಾ ನಿರ್ದೇಶಕ ಚಂದ್ರಶೇಖರ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರೇಗೌಡ, ತಾಲೂಕು ಯೋಜನಾಧಿಧಿಕಾರಿ ಎಸ್. ಜನಾರ್ಧನ್, ಕಾಕನೂರ್ ನಾಗರಾಜ್, ಎನ್ .ಪಿ. ನಾಗೇಶ್, ಮಹಾಬಲೇಶ್ವರ್ ಇತರರಿದ್ದರು.