ಯಾದಗಿರಿ: ಸ್ವಚ್ಛ ಭಾರತ್ ಮಿಷನ್ ನಿಮಿತ್ತ ನಡೆಯುವ ಸ್ವಚ್ಛ ಮೇವ ಜಯತೆ ಆಂದೋಲನದಲ್ಲಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ಐದು ನೂರು ಗಿಡಗಳನ್ನು ನೆಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ಅರಣ್ಯ ಇಲಾಖೆಯಿಂದ ನೀಡುವ ಈ ಗಿಡಗಳನ್ನು ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕಚೇರಿ, ಶಾಲೆ, ವಸತಿ ನಿಲಯಗಳು, ಅಂಗನವಾಡಿ ಸೇರಿದಂತೆ ಮುಂತಾದೆಡೆ ನೆಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯೋಜನೆ ರೂಪಿಸಿಕೊಳ್ಳಬೇಕು. ಕಾಂಪೌಂಡ್ ಇರುವ ಆವರಣದಲ್ಲಿ ಗಿಡ ನೆಟ್ಟರೆ ಉತ್ತಮ. ಗಿಡ ನೆಡಲು 3X3 ಫೀಟ್ ಗುಂಡಿ ತೋಡಬೇಕು. ಇದರಿಂದ ಗಿಡಗಳ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಗಿಡಗಳನ್ನು ಹಚ್ಚಿದ ನಂತರ ಅವುಗಳ ಸಂರಕ್ಷಣೆ ಮುಖ್ಯ. ಹಾಗಾಗಿ, ಗಿಡಗಳ ಸಂರಕ್ಷಣೆಯಲ್ಲಿ ಅಧಿಕಾರಿಗಳ ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕರು ಪಾಲ್ಗೊಳ್ಳುವಂತೆ ಕಾರ್ಯಕ್ರಮ ಆಯೋಜಿಸಬೇಕು. ಸ್ವಚ್ಛಮೇವ ಜಯತೆ ಆಂದೋಲನದ ಪ್ರಯುಕ್ತ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಿ, ಕುಡಿಯುವ ನೀರು, ನೈರ್ಮಲ್ಯ, ಘನತ್ಯಾಜ್ಯ, ದ್ರವ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿಷೇಧ ಕುರಿತು ಗ್ರಾಮೀಣ ಸಮುದಾಯದಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಫಲಾನುಭವಿಗಳಿಗೆ ಮೇ 30ರೊಳಗೆ ಕಾರ್ಯಾದೇಶ ನೀಡಬೇಕು. ಜೂನ್ 15ರೊಳಗೆ ಜಿಲ್ಲೆಯಲ್ಲಿ ಬಾಕಿ ಇರುವ ಶೌಚಾಲಯಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕಟ್ಟುನಿಟ್ಟಿನ ಸೂಚನೆ ನೀಡಿದರು.
Advertisement
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂನ್ 11ರಿಂದ ಜುಲೈ 10ರ ವರೆಗೆ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಸ್ವಚ್ಛಮೇವ ಜಯತೆ ಆಂದೋಲನಕ್ಕೆ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳ ಹಂತದಲ್ಲಿ ಜೂನ್ 11ರಂದು ಚಾಲನೆ ನೀಡಬೇಕು. ಅದೇ ರೀತಿ ಜಲಾಮೃತ ಯೋಜನೆಗೂ ಅಂದು ಚಾಲನೆ ನೀಡಬೇಕು. ಜಿಲ್ಲೆಯಲ್ಲಿ ಕನಿಷ್ಠ 2ರಿಂದ 3 ಸ್ವಚ್ಛತಾ ರಥಗಳನ್ನು ನಿಯೋಜಿಸಿ, ಆಂದೋಲನದ ಬಗ್ಗೆ ಗ್ರಾಮೀಣರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
Related Articles
Advertisement
ಶಾಲಾ-ಕಾಲೇಜುಗಳಲ್ಲಿ ಸ್ವಚ್ಛತೆ ಕುರಿತು ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಬೇಕು. ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪ್ರತಿಜ್ಞಾವಿಧಿ ಬೋಧಿಸಬೇಕು. ಗ್ರಾಮಗಳಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳು, ಯುವಕ-ಯುವತಿಯರು, ಸ್ವಯಂ ಸೇವಕರು ಹಾಗೂ ಗ್ರಾಮಸ್ಥರನ್ನು ಒಳಗೊಂಡು ಶ್ರಮದಾನ ಕಾರ್ಯಕ್ರಮ ಆಯೋಜಿಸುವಂತೆ ನಿರ್ದೇಶಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತ ವಿ. ಕುಲಕರ್ಣಿ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಶಹಾಪುರ ತಾಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಿಂದೆ ಬಿದ್ದಿದ್ದಾರೆ. ಇದರಿಂದ ಜಿಲ್ಲೆಯ ಪ್ರತಿಶತ ಸಾಧನೆಗೆ ಧಕ್ಕೆಯಾಗುತ್ತಿದೆ. ಮೇ 25ರೊಳಗೆ ಪ್ರತಿ ಗ್ರಾಮ ಪಂಚಾಯಿತಿ ಶೇ. 40ರಷ್ಟು ಗುರಿ ಸಾಧನೆ ಮಾಡಬೇಕು. ಇಲ್ಲವಾದಲ್ಲಿ ಪ್ರತಿಶತ ಸಾಧನೆಯಲ್ಲಿ ಹಿಂದೆ ಬಿದ್ದ ತಾಲೂಕಿನ ಕೊನೆಯ 5 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಗುಲಸರಂ, ನಾಯ್ಕಲ್, ಸುರಪುರ ತಾಲೂಕಿನ ಮಾಲಗತ್ತಿ, ತಿಂಥಣಿ, ಹೆಬ್ಟಾಳ ಬಿ., ದೇವತ್ಕಲ್, ಯಾದಗಿರಿ ತಾಲೂಕಿನ ಬೆಳಗುಂದಿ, ವರ್ಕನಳ್ಳಿ, ಯರಗೋಳ, ಬಂದಳ್ಳಿ, ಠಾಣಗುಂದಿ ಗ್ರಾಮ ಪಂಚಾಯಿತಿಗಳಲ್ಲಿ ಕೂಲಿಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಣೆ ಮತ್ತು ಕೆಲಸ ಒದಗಿಸಲು ವಿಳಂಬ ಮಾಡುತ್ತಿರುವುದು ಕಂಡು ಬಂದಿದೆ. ಕೂಲಿಕಾರ್ಮಿಕರಿಗೆ ನಾಳೆಯೇ ಉದ್ಯೋಗ ಚೀಟಿಗಳನ್ನು ವಿತರಿಸಿ, ಕೆಲಸ ಒದಗಿಸಲು ಸೂಚಿಸಿದರು.
ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ ಗುರುನಾಥ ಗೌಡಪ್ಪನೋರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಭಯ್ಯ, ಚನ್ನಬಸಪ್ಪ, ಜಗದೇವಪ್ಪ, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ವ್ಯವಸ್ಥಾಪಕ ಪ್ರಶಾಂತ, ಜಿಲ್ಲಾ ಸಂಯೋಜಕ ವೆಂಕಟೇಶ ಪವಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುತ್ತಣ್ಣ ಟಿ. ಡೆಂಗಿ, ಮನರೇಗಾ ಸಹಾಯಕ ಜಿಲ್ಲಾ ಸಂಯೋಜಕ ಬನ್ನಪ್ಪ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
ಗೋಡೆಬರಹ ಬರೆಯಿಸಿ:
ಶೌಚಾಲಯ ಬಳಕೆ, ಮಕ್ಕಳ ಮಲ ಸೂಕ್ತ ವಿಲೇವಾರಿ ಹಾಗೂ ಘನ ತ್ಯಾಜ್ಯ ನಿರ್ವಹಣೆ ಕುರಿತಂತೆ ಪ್ರತಿ ಗ್ರಾಮದಲ್ಲಿ 5 ಗೋಡೆ ಬರಹಗಳನ್ನು ಬರೆಸಬೇಕು. ಶಾಲಾ ಮತ್ತು ಅಂಗನವಾಡಿ ಕಟ್ಟಡ, ಪಂಚಾಯಿತಿ ಕಚೇರಿ, ಸಾರ್ವಜನಿಕ ಸ್ಥಳ, ಸಮುದಾಯ ಶೌಚಾಲಯ, ಜನನಿಬಿಡ ಪ್ರದೇಶದಲ್ಲಿನ ಕಟ್ಟಡ, ಬಯಲು ಬಹಿರ್ದೆಸೆಯ ಸ್ಥಳಗಳಲ್ಲಿ ಹಾಗೂ ಬಸ್‌ನಿಲ್ದಾಣಗಳ ಸಮೀಪ ಗೋಡೆಬರಹ ಬರೆಯಿಸಿ. -ಕವಿತಾ ಮನ್ನಿಕೇರಿ, ಸಿಇಒ
ಇಂಟರ್‌ನೆಟ್ ಸಂಪರ್ಕ ಕಲ್ಪಿಸದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ:
ಯಾದಗಿರಿ ಮಹತ್ವಾಕಾಂಕ್ಷೆ ಜಿಲ್ಲೆಯಾಗಿರುವುದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್‌ನೆಟ್ ಸಂಪರ್ಕ ಕಲ್ಪಿಸುವ ಕಾರ್ಯ ಒಂದು ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಮಹತ್ವಾಕಾಂಕ್ಷೆ ಜಿಲ್ಲೆಯ ಕೇಂದ್ರ ಸರ್ಕಾರದ ನೋಡಲ್ ಅಧಿಕಾರಿ ಹಾಗೂ ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಈ ಬಗ್ಗೆ ವಿಶೇಷ ಸೂಚನೆ ನೀಡಿದ್ದಾರೆ. ಆದರೂ, ಇಂಟರ್‌ನೆಟ್ ಸಂಪರ್ಕ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿಇಒ, ಇಂಟರ್‌ನೆಟ್ ಸಂಪರ್ಕ ಕಲ್ಪಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.