Advertisement
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಹಾಕಲಾದ ತೇಪೆ ಎದ್ದು ಹೋಗಿದೆ. ಇದರಿಂದ ಈಗ ಹಿಂದಿಗಿಂತಲೂ ಹೆಚ್ಚು ಕಡೆಗಳಲ್ಲಿ ಹೆದ್ದಾರಿ ಮಧ್ಯೆಯೇ ಹೊಂಡ – ಗುಂಡಿಗಳಾಗಿವೆ. ಮಳೆ ಬಂದು, ನೀರೆಲ್ಲ ಈ ಹೊಂಡಗಳಲ್ಲಿ ನಿಂತಿದ್ದರೆ, ವಾಹನ ಸವಾರರಿಗೆ ಎಲ್ಲಿ ಹೊಂಡವಿದೆ, ಗುಂಡಿಗಳಿವೆ ಎಂದು ತಿಳಿಯದ ಸ್ಥಿತಿಯಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರಂತೂ ನಿತ್ಯ ಈ ನರಕ ಯಾತನೆ ಅನುಭವಿಸುವಂತಾಗಿದೆ.
ಮಳೆಗಾಲದ ಬಳಿಕ ದುರಸ್ತಿ ಮಾಡಲಿ
ಮಳೆಗಾಲ ಆರಂಭವಾಗುವ ಹೊತ್ತಿಗೆ ಕಾಮಗಾರಿ ಆರಂಭಿಸುತ್ತಾರೆ. ಅದು ಮಳೆಗಾಲ ಮುಗಿಯುವುದರೊಳಗೆ ಎದ್ದು ಹೋಗುತ್ತದೆ. ಬೇಸಿಗೆಯಲ್ಲಿ ರಸ್ತೆ ಡಾಮರೀಕರಣ ಮಾಡಿದರೆ ಉತ್ತಮ. ಬಸ್ರೂರು ಮೂರು ಕೈ ಬಳಿ ಮಳೆಗಾಲ ಆರಂಭದಿಂದ ಈವರೆಗೆ ನೀರು ನಿಂತಿದೆ. ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ಇಲ್ಲಿಲ್ಲ. ಈ ಸಲವಾದರೂ ಮಳೆಗಾಲ ಮುಗಿದ ತತ್‌ಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಿ.
– ಇರ್ಫಾನ್,ವಾಹನ ಸವಾರ
ಇನ್ನು ಬಸ್ರೂರು ಮೂರು ಕೈಜಂಕ್ಷನ್‌ಗಿಂತ ಸ್ವಲ್ಪ ಮುಂದೆ ಸರ್ವಿಸ್ ರಸ್ತೆಯಲ್ಲಿಯೇ ನೀರು ನಿಂತಿದ್ದು, ಇದು ರಸ್ತೆಯೋ ಅಥವಾ ನೀರು ಹರಿದು ಹೋಗುವ ತೋಡು ಎನ್ನುವ ಸಂಶಯ ಜನರದ್ದು. ಇಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯೇ ಇಲ್ಲ. ಭಾರೀ ಮಳೆಯಿದ್ದಾಗ ಅಂತೂ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟ. ಮಳೆ ಕಡಿಮೆ ಇದ್ದರೂ, ಇಲ್ಲಿ ನಿಂತ ನೀರು ಮಾತ್ರ ಕಡಿಮೆಯಾಗುವುದಿಲ್ಲ. ಈ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಕುಂದಾಪುರದ ಸಹಾಯಕ ಆಯುಕ್ತರೇ ತತ್‌ಕ್ಷಣ ಪರಿಹರಿಸಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರೂ, ಇನ್ನು ಇತ್ಯರ್ಥವಾಗಿಲ್ಲ.