ಪ್ರಸರಣ-ವಿತರಣೆಯಲ್ಲಿ ಶೇ.20ರಷ್ಟು ವಿದ್ಯುತ್ ಸೋರಿ ಹೋಗುತ್ತಿದೆ. ಭಾರೀ ಪ್ರಮಾಣದಲ್ಲಿ ವಿದ್ಯುತ್ ಕಳ್ಳತನವೂ ಆಗುತ್ತದೆ. ಈ ಸಮಸ್ಯೆಗಳನ್ನು ನಿವಾರಿಸಿದರೆ ರಾಜ್ಯದ ಮುಕ್ಕಾಲು ಭಾಗಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಿದೆ.
ಪ್ರತಿ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರದ ಐದು ಗ್ರಾಮಗಳನ್ನು ಆಯ್ದು ದಿನದ 24 ತಾಸು ನಿರಂತರ ಗುಣಮಟ್ಟದ ವಿದ್ಯುತ್ ಪೂರೈಸುವ ಯೋಜನೆಯೊಂದನ್ನು ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ. ಇವುಗಳನ್ನು ವಿದ್ಯುತ್ ಅಡಚಣೆ ರಹಿತ ಗ್ರಾಮಗಳೆಂದು ಕರೆಯಲಾಗುವುದು. ಇದಕ್ಕಾಗಿ ಪ್ರತಿ ಗ್ರಾಮಕ್ಕೆ ಸರಕಾರ 40 ಲ. ರೂ.ನಷ್ಟು ಅನುದಾನ ಒದಗಿಸಲಿದೆ. ನಿರಂತರ ವಿದ್ಯುತ್ ಪೂರೈಕೆಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲು ಈ ಹಣ ಬಳಕೆಯಾಗಲಿದೆ. ಇದು ಒಂದು ರೀತಿಯಲ್ಲಿ ಕೇಂದ್ರ ಸರಕಾರ ರೂಪಿಸಿದ ಸಂಸದರ ಆದರ್ಶ ಗ್ರಾಮ ಯೋಜನೆಯ ಪಡಿಯಚ್ಚಿನಂತಿರುವ ಯೋಜನೆ. ಹಳ್ಳಿಗಳಿಗೆ ದಿನದ 24 ತಾಸು ನಿರಂತರ ವಿದ್ಯುತ್ ಪೂರೈಕೆಯಾಗಲಿದೆ ಎನ್ನುವುದನ್ನು ಕಲ್ಪಿಸಿಕೊಳ್ಳುವುದೇ ಬಹಳ ಖುಷಿ ನೀಡುತ್ತದೆ. ಆದರೆ ಇದು ಹೇಳಿದಷ್ಟು ಸುಲಭವೇ ಎನ್ನುವುದು ಇಲ್ಲಿರುವ ಪ್ರಶ್ನೆ. ಹಳ್ಳಿ ಬಿಡಿ, ನಗರಗಳಿಗೆ ನಿರಂತರ ವಿದ್ಯುತ್ ಪೂರೈಸಲು ಸಾಧ್ಯವಾಗದೆ ಸರಕಾರ ಏದುಸಿರು ಬಿಡುತ್ತಿದೆ. ಕಳೆದ ಬೇಸಿಗೆಯಲ್ಲಿ ಬೆಂಗಳೂರು ಕೂಡ ವಿದ್ಯುತ್ ಕಡಿತದ ಸಂಕಷ್ಟಕ್ಕೀಡಾಗಿತ್ತು. ಇನ್ನು ಚಿಕ್ಕ ನಗರಗಳ ಪಾಡು ಏನಾಗಿರಬಹುದು? ಹಳ್ಳಿಗಳ ಸ್ಥಿತಿಯಂತೂ ಹೇಳುವುದೇ ಬೇಡ. ಬೇಸಿಗೆಯಲ್ಲಿ ಲೋಡ್‌ಶೆಡ್ಡಿಂಗ್ ಮಾಮೂಲಿ. ಆದರೆ ಕೆಲವೊಮ್ಮೆ ಮಳೆಗಾಲದಲ್ಲೂ ತಾಸುಗಟ್ಟಲೆ ಕರೆಂಟ್ ಮಾಯವಾಗಿರುತ್ತದೆ. ರಾಜ್ಯದ ವಿದ್ಯುತ್ ಪರಿಸ್ಥಿತಿ ಹೀಗಿದ್ದರೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪ್ರತಿ ಕ್ಷೇತ್ರದ ತಲಾ ಐದು ಗ್ರಾಮಗಳಿಗೆ ನಿರಂತರ ವಿದ್ಯುತ್ ಪೂರೈಸುವ ಕನಸು ಬಿತ್ತಿದ್ದಾರೆ. ಈ ಯೋಜನೆಗೆ ಗ್ರಾಮಗಳನ್ನು ಆರಿಸುವ ಮಾನದಂಡ ಸೇರಿದಂತೆ ಉಳಿದೆಲ್ಲ ವಿಚಾರಗಳು ಇನ್ನಷ್ಟೇ ನಿಗದಿಯಾಗಬೇಕು. ಹಾಗೊಂದು ವೇಳೆ ಸಚಿವರು ಹೇಳಿದಂತೆ ಒಂದೂವರೆ ವರ್ಷದಲ್ಲಿ ನಿರಂತರ ವಿದ್ಯುತ್ ಪೂರೈಸುವ ಯೋಜನೆ ಜಾರಿಯಾದರೂ ಉಳಿದ ಗ್ರಾಮಗಳಿಗೇಕೆ ಇಲ್ಲ?
ಹಳ್ಳಿಗಳಿಗೆ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾದರೆ ಕೆಲವೊಂದು ಪ್ರಯೋಜನಗಳಂತೂ ಇವೆ. ಮೊದಲಾಗಿ ಕೃಷಿ ಕಾರ್ಯಗಳಿಗೆ ಇದರಿಂದ ಪ್ರತ್ಯಕ್ಷವಾಗಿ ಉತ್ತೇಜನ ನೀಡಿದಂತಾಗುತ್ತದೆ. ಪ್ರಸ್ತುತ ಸರಕಾರ ಕೃಷಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದ್ದರೂ ಅಸಮರ್ಪಕ ನಿರ್ವಹಣೆಯಿಂದಾಗಿ ರೈತರಿಗೆ ಭಾರೀ ಎನ್ನುವಂತಹ ಲಾಭವೇನೂ ಆಗಿಲ್ಲ. ದಿನವಿಡೀ ವಿದ್ಯುತ್ ಪೂರೈಕೆಯಾದರೆ ಕೃಷಿ ಕ್ಷೇತ್ರದ ಸುಧಾರಣೆಯಾಗಬಹುದು. ಅಂತೆಯೇ ಹಳ್ಳಿಗಳಲ್ಲಿ ಸಣ್ಣ ಉದ್ಯಮಗಳ ಸ್ಥಾಪನೆಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದರಿಂದ ಉದ್ಯೋಗ ಹುಡುಕಿಕೊಂಡು ಹಳ್ಳಿಗರು ನಗರಗಳಿಗೆ ವಲಸೆ ಹೋಗುವ ಪ್ರಮಾಣವೂ ಕಡಿಮೆಯಾಗಬಹುದು. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೂ ಚಿಂತೆಯಿಲ್ಲದೆ ಓದಬಹುದು. ವಿದ್ಯುತ್ ಆಡಚಣೆ ರಹಿತ ಗ್ರಾಮ ಯೋಜನೆ ಜಾರಿಗಾಗಿ ಸರಕಾರ ಒಟ್ಟು 3675 ಕೋ. ರೂ. ಅನುದಾನ ಒದಗಿಸಲಿದೆ ಎಂದು ಹೇಳಿದ್ದಾರೆ ಸಚಿವರು. ಆದರೆ ಇದಕ್ಕೆ ಸಂಪನ್ಮೂಲ ಕ್ರೂಢೀಕರಣ ಹೇಗೆ ಎನ್ನುವುದನ್ನು ಅವರು ತಿಳಿಸಿಲ್ಲ. ವಿದ್ಯುತ್ ಇಲಾಖೆಯ ಆರ್ಥಿಕ ಆರೋಗ್ಯ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಹೀಗಾಗಿ ಸಂಪನ್ಮೂಲಕ್ಕೆ ಬಾಹ್ಯ ಮೂಲಗಳನ್ನು ಅವಲಂಬಿಸುವ ಅಗತ್ಯವಿದೆ. ಅಲ್ಲದೆ ಸದ್ಯಕ್ಕೆ ಇಷ್ಟು ಪ್ರಮಾಣದ ವಿದ್ಯುತ್ ಉತ್ಪಾದನೆಯೂ ಆಗುತ್ತಿಲ್ಲ. ವಿದ್ಯುತ್ ಎಲ್ಲಿಂದ ತರುವುದು, ಸಂಪನ್ಮೂಲ ಯಾರು ಒದಗಿಸುತ್ತಾರೆ ಎಂಬೆಲ್ಲ ವಿವರಗಳನ್ನು ನೀಡದೆ ಯೋಜನೆಯೊಂದನ್ನು ಮಾತ್ರ ಘೋಷಿಸಲಾಗಿದೆ. ಪ್ರಸ್ತುತ ಸರಕಾರದ ಅವಧಿ ಇರುವುದು ಇನ್ನು 11 ತಿಂಗಳು ಮಾತ್ರ. ಇಷ್ಟರೊಳಗೆ ಈ ಯೋಜನೆ ಎಷ್ಟು ಪ್ರಗತಿಯಾದೀತು ಎನ್ನುವುದನ್ನು ಕಾದು ನೋಡಬೇಕಷ್ಟೆ. ಸೋರಿಕೆ ಮತ್ತು ಕಳ್ಳತನವೇ ವಿದ್ಯುತ್ ಪೂರೈಕೆಯಲ್ಲಿರುವ ಬಹುದೊಡ್ಡ ಸಮಸ್ಯೆ. ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆಯಂತೂ ಆಗುವುದಿಲ್ಲ. ಉತ್ಪಾದಿಸಿದ ವಿದ್ಯುತ್ತನ್ನು ಜನರಿಗೆ ತಲುಪಿಸಲು ದಕ್ಷವಾದ ಪ್ರಸರಣ ಜಾಲವನ್ನು ಮಾಡಿಕೊಳ್ಳಲು ಇನ್ನೂ ನಮ್ಮಿಂದ ಸಾಧ್ಯವಾಗಿಲ್ಲ. ಪ್ರಸರಣ ಮತ್ತು ವಿತರಣೆಯಲ್ಲಿ ಶೇ.20ರಷ್ಟು ವಿದ್ಯುತ್ ಸೋರಿ ಹೋಗುತ್ತಿದೆ. ಅಂತೆಯೇ ಭಾರೀ ಪ್ರಮಾಣದಲ್ಲಿ ವಿದ್ಯುತ್ ಕಳ್ಳತನವೂ ಆಗುತ್ತದೆ. ಈ ಸಮಸ್ಯೆಗಳನ್ನು ನಿವಾರಿಸಿದರೆ ರಾಜ್ಯದ ಮುಕ್ಕಾಲು ಭಾಗಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಿದೆ. ಗುಜರಾತ್ ಸೇರಿದಂತೆ ಉತ್ತರ ಭಾರತದ ಕೆಲವು ರಾಜ್ಯಗಳು ಹೆಚ್ಚುವರಿ ವಿದ್ಯುತ್ ಉತ್ಪಾದಿಸುತ್ತಿವೆ. ಆದರೆ ದಕ್ಷಿಣದ ಯಾವ ರಾಜ್ಯಕ್ಕೂ ಇದು ಸಾಧ್ಯವಾಗಿಲ್ಲ. ಇಷ್ಟು ಮಾತ್ರವಲ್ಲದೆ, ಉತ್ತರದಲ್ಲಿರುವ ಮಿಗತೆ ವಿದ್ಯುತ್ತನ್ನು ದಕ್ಷಿಣಕ್ಕೆ ಹರಿಸುವ ಗ್ರಿಡ್ ಜಾಲವೂ ಇಲ್ಲ. ಈ ಇಲ್ಲಗಳನ್ನೇ ಸರಿಪಡಿಸಿಕೊಂಡರೂ ಬೇಸಗೆಯಲ್ಲಿ ವಿದ್ಯುತ್‌ಗಾಗಿ ಪರದಾಡುವ ಅಗತ್ಯವಿಲ್ಲ.