ಐಟಿ ಕ್ಷೇತ್ರದಲ್ಲಿ ಉದ್ಯೋಗ ನಷ್ಟ ನಿರುದ್ಯೋಗದ ಸವಾಲನ್ನು ಮತ್ತೆ ಮುಂಚೂಣಿಗೆ ತಂದು ನಿಲ್ಲಿಸುವ ಸಾಧ್ಯತೆಯಿದೆ. ಐಟಿ ಕ್ಷೇತ್ರವನ್ನು ಅತಿಯಾಗಿ ನೆಚ್ಚಿಕೊಂಡಿರುವುದು ಒಂದು ತಪ್ಪಾದರೆ ನಮ್ಮ ಐಟಿ ಉದ್ಯೋಗಿಗಳಲ್ಲಿ ಸ್ವಂತ ಅನ್ವೇಷಣೆಯಂತಹ ಗುಣಗಳ ಕೊರತೆಯೂ ಈ ಬಿಕ್ಕಟ್ಟಿಗೆ ಕಾರಣವಾಗಿದೆ.
ಬೆಂಗಳೂರು ಕೇಂದ್ರವಾಗಿರುವ ದೇಶದ ಐಟಿ ಉದ್ಯಮ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ದೈತ್ಯ ಐಟಿ ಕಂಪೆನಿಗಳಲ್ಲಿ ಕೈತುಂಬ ಸಂಬಳ ಪಡೆಯುವ ಉದ್ಯೋಗಿಗಳು ಯಾವ ಕ್ಷಣದಲ್ಲೂ ನೌಕರಿ ಕಳೆದುಕೊಂಡು ಬೀದಿಗೆ ಬೀಳುವ ಭೀತಿಯಲ್ಲಿದ್ದಾರೆ. ಇದಕ್ಕೆ ಕಾರಣ ಐಟಿ ಕಂಪೆನಿಗಳು ನೌಕರರ ಸಂಖ್ಯೆ ಕಡಿಮೆಗೊಳಿಸಲು ಮುಂದಾಗಿರುವುದು. ಇನ್ಫೋಸಿಸ್, ವಿಪ್ರೊ, ಟಿಸಿಎಸ್, ಎಚ್‌ಸಿಎಲ್ ಸೇರಿದಂತೆ ಭಾರತದ ಐಟಿ ಕಂಪೆನಿಗಳು ಮಾತ್ರವಲ್ಲದೆ, ಮೆಕ್ರೋಸಾಫ್ಟ್, ಕಾಂಗ್ನಿಜೆಂಟ್‌ನಂತಹ ವಿದೇಶಿ ಮೂಲದ ಕಂಪೆನಿಗಳು ನಾನಾ ನೆಪಗಳನ್ನು ಮುಂದಿಟ್ಟುಕೊಂಡು ನೌಕರರಿಗೆ ಪಿಂಕ್‌ಸ್ಲಿಪ್ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ. ಕಾಂಗ್ನಿಜೆಂಟ್ ಈ ವರ್ಷ ಸುಮಾರು 10,000 ನೌಕರರನ್ನು ಕಿತ್ತು ಹಾಕುವ ಯೋಚನೆಯಲ್ಲಿದೆ. ಸ್ನ್ಯಾಪ್‌ಡೀಲ್‌ನಂತಹ ಆನ್‌ಲೈನ್ ಮಾರುಕಟ್ಟೆ ಕಂಪೆನಿಗಳೂ ಈ ಹಾದಿಯನ್ನು ಹಿಡಿದಿರುವುದು ಕಳವಳಕ್ಕೆ ಕಾರಣವಾಗಿದೆ. ತಜ್ಞರು ಹೇಳುವ ಪ್ರಕಾರ ಜಾಗತಿಕವಾಗಿ ಐಟಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಉದ್ಯೋಗ ನಷ್ಟವಾಗುವ ಸಾಧ್ಯತೆಯಿದೆ. ಇದರ ದೊಡ್ಡ ಹೊಡೆತ ಬೀಳುವುದು ಭಾರತದ ಮೇಲೆ. ಆಧುನಿಕ ತಂತ್ರಜ್ಞಾನ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳು ಅಭಿವೃದ್ಧಿಗೊಂಡಿರುವುದರಿಂದ ಐಟಿ ಕಂಪೆನಿಗಳಿಗೆ ಈಗ ಹಿಂದಿನಷ್ಟು ಉದ್ಯೋಗಿಗಳ ಅಗತ್ಯವಿಲ್ಲ. ಉದ್ಯೋಗ ನಷ್ಟಕ್ಕೆ ಇದು ಒಂದು ಕಾರಣ; ಜಾಗತಿಕ ಆರ್ಥಿಕ ಹಿಂಜರಿತ, ಟ್ರಂಪ್ ನೀತಿ, ನೋಟು ರದ್ದು ಮತ್ತಿತರ ಕಾರಣಗಳೂ ಇವೆ.
ಈಗಲೂ ಭಾರತವೇ ಐಟಿ ಉದ್ಯೋಗಿಗಳ ರಫ್ತಿನಲ್ಲಿ ಮುಂಚೂಣಿಯಲ್ಲಿದ್ದರೂ ಅವರ ಗುಣಮಟ್ಟದ ಬಗ್ಗೆ ದೂರುಗಳಿವೆ. ಇದರ ಜತೆಗೆ ಫಿಲಿಪ್ಪೀನ್ಸ್‌ನಂತಹ ದೇಶಗಳು ಮತ್ತು ಪೂರ್ವ ಐರೊಪ್ಯ ದೇಶಗಳು ಐಟಿ ಉದ್ಯಮದಲ್ಲಿ ಭಾರತಕ್ಕೆ ಪ್ರಬಲ ಸ್ಪರ್ಧೆ ಒಡ್ಡುತ್ತಿವೆ. ಐಟಿ ಉದ್ಯಮದ ಗತವೈಭವದ ಕನವರಿಕೆಯಲ್ಲಿ ಮೈಮರೆತಿರುವ ನಮ್ಮನ್ನಾಳುವವರಿಗೆ ಪರಿಸ್ಥಿತಿ ಬದಲಾಗಿರುವುದು ಅರಿವಾಗುತ್ತಿಲ್ಲ.
ನರೇಂದ್ರ ಮೋದಿ ಸರಕಾರ ಉದ್ಯೋಗ ಸೃಷ್ಟಿಗಾಗಿ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಘೋಷಿಸಿದ್ದರೂ ಯಾವುದೂ ಇನ್ನೂ ಫಲ ನೀಡುವ ಮಟ್ಟಕ್ಕೆ ಬೆಳೆದಿಲ್ಲ. ಮೇಕ್ ಇನ್ ಇಂಡಿಯಾದಿಂದ ಅಭಿವೃದ್ಧಿಯಾಗಿರುವುದು ಮೊಬೈಲ್ ಉದ್ಯಮ ಮಾತ್ರ. ಕೇವಲ 10 ನಿಮಿಷದಲ್ಲಿ ಐದು-ಆರು ಅಂಕಿಯ ಸಂಬಳ ತರುವ ನೌಕರಿ ಕಳೆದುಕೊಂಡು ಬೀದಿಗೆ ಬೀಳುವವರ ಒಡಲಾಳದ ನೋವನ್ನು ಶಮನಗೊಳಿಸುವಂತಹ ಯಾವ ಪರ್ಯಾಯ ವ್ಯವಸ್ಥೆಯೂ ಸದ್ಯಕ್ಕೆ ಗೋಚರಿಸುತ್ತಿಲ್ಲ. ವಿಪರ್ಯಾಸವೆಂದರೆ ವೈಭವೋಪೇತ ಕಚೇರಿಯಲ್ಲಿ ಸೂಟುಬೂಟು ಧರಿಸಿ ಬೆಳಗ್ಗಿನಿಂದ ನಡುರಾತ್ರಿಯ ತನಕ ಶಿಸ್ತಿನಿಂದ ದುಡಿಯುವ ವಿದ್ಯಾವಂತ ಐಟಿ ನೌಕರರಿಗೆ ತಮ್ಮ ಪರವಾಗಿ ಧ್ವನಿಯೆತ್ತಲು ಒಂದು ಗಟ್ಟಿಯಾದ ಯೂನಿಯನ್ ಕೂಡ ಇಲ್ಲ. ದೇಶದಲ್ಲಿ ಸುಮಾರು 40 ಲಕ್ಷ ಐಟಿ ಉದ್ಯೋಗಿಗಳಿದ್ದಾರೆ. ಈ ಪೈಕಿ ಯಾರಿಗೂ ತಾವು ಸಂಘಟಿತರಾಗಿರಬೇಕೆಂಬ ಯೋಚನೆ ಹೊಳೆದಿರಲಿಲ್ಲ ಅಥವಾ ಅಂತಹ ಯೋಚನೆ ಅವರ ತಲೆಗೆ ನುಸುಳದಂತೆ ಮಾಡಲಾಗಿತ್ತು. ಕಳೆದ ವರ್ಷವಷ್ಟೇ ಬೆಂಗಳೂರಿನಲ್ಲಿ ಮತ್ತು ಚೆನ್ನೈಯಲ್ಲಿ ಒಂದೊಂದು ಯೂನಿಯನ್‌ಗಳು ಹುಟ್ಟಿಕೊಂಡಿವೆ.
ದೇಶದಲ್ಲಿ ಐಟಿ ಕ್ಷೇತ್ರ ಅರಳಲು ಪ್ರಾರಂಭವಾದದ್ದು 1990ರಿಂದೀಚೆಗೆ. ಈ ಉದ್ಯೋಗ ತಂದುಕೊಡುವ ಐಷರಾಮಿ ಜೀವನ ನೋಡಿದ ಬಳಿಕ ಎಲ್ಲರೂ ಐಟಿಯತ್ತಲೇ ಹೆಚ್ಚಿನ ಒಲವು ತೋರಿಸಲಾರಂಭಿಸಿದರು. ಹೀಗಾಗಿ ಬೇಕಾಬಿಟ್ಟಿ ಐಟಿ ಕಾಲೇಜುಗಳು ಮತ್ತು ಕೋರ್ಸ್‌ಗಳು ಹುಟ್ಟಿಕೊಂಡವು. ಪ್ರತಿ ವರ್ಷ ಲಕ್ಷಗಟ್ಟಲೆ ಐಟಿ ಪದವೀಧರರು ಇವುಗಳಿಂದ ಹೊರಬರುತ್ತಿದ್ದಾರೆ. ಆದರೆ ಆ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಐಟಿ ಪದವೀಧರರಲ್ಲಿ ಸ್ವಯಂ ಶೋಧ, ಅನ್ವೇಷಣೆಯಂತಹ ಗುಣಗಳ ಕೊರತೆ ಢಾಳಾಗಿ ಕಂಡುಬರುತ್ತಿದೆ. ಹೊಸ ಆವಿಷ್ಕಾರದಲ್ಲಿ ಭಾರತದ ಐಟಿ ತಂತ್ರಜ್ಞರ ಕೊಡುಗೆ ನಗಣ್ಯ ಎಂಬಂತಿದೆ. ಅನ್ಯರ ಅಡಿಯಾಳಾಗಿ ದುಡಿಯುವ ನೌಕರಿ ಸಂಸ್ಕೃತಿಯನ್ನೇ ಭಾರತೀಯರು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಹೀಗಾಗಿ ನೌಕರಿ ಹೋದರೆ ಇನ್ನೊಂದು ನೌಕರಿ ಹುಡುಕುವ ಕೆಲಸದಲ್ಲಿ ತೊಡಗುತ್ತಾರೆಯೇ ಹೊರತು ಅನ್ಯ ಯೋಚನೆಯನ್ನು ಮಾಡುವುದಿಲ್ಲ. ದುಡಿಯುವ ಕೈಗಳಿಗೆ ಕೆಲಸ ಸಿಗದಿದ್ದರೆ ಸಾಮಾಜಿಕ ಅಸಮತೋಲನ ಉಂಟಾಗಿ ಅನೇಕ ಸಮಸ್ಯೆಗಳು ಸೃಷ್ಟಿಯಾಗುವುದನ್ನು ನಾವು ನೋಡುತ್ತಾ ಇದ್ದೇವೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಅಗತ್ಯವಿರುವ ದೇಶ ನಮ್ಮದು. ಆದರೆ ಸೃಷ್ಟಿಯಾಗುತ್ತಿರುವುದು ಕೆಲವೇ ಲಕ್ಷ ಉದ್ಯೋಗ. ಈ ಪರಿಸ್ಥಿತಿಯಲ್ಲಿ ಐಟಿ ಕ್ಷೇತ್ರ ಕೈಕೊಟ್ಟರೆ ಪರಿಸ್ಥಿತಿ ಇನ್ನಷ್ಟು ವಿಷಮಿಸಬಹುದು.