ಕೊಪ್ಪಳ: ಜಿಲ್ಲೆಯಲ್ಲಿ 16 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಆಂಗ್ಲ ಭಾಷೆಯ ವಿಷಯಕ್ಕೆ ಪರೀಕ್ಷೆಯು ಜೂ.18ರಂದು ನಡೆಯಲಿದ್ದು, 13,582 ವಿದ್ಯಾರ್ಥಿಗಳು ಕೋವಿಡ್ ಅಬ್ಬರದಲ್ಲೂ ಪರೀಕ್ಷೆ ಎದುರಿಸಲು ಸನ್ನದ್ಧರಾಗಿದ್ದಾರೆ. ಇಲಾಖೆ ಸಹಿತ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರದ ಜಾಗೃತಿ ಮೂಡಿಸಿದೆಯಲ್ಲದೆ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಎರಡು ವಿಶೇಷ ಕೊಠಡಿ ಮೀಸಲಿರಿಸಿದೆ.
ಜಿಲ್ಲೆಯಲ್ಲಿ ಜೂ.25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದರೆ, ಅದಕ್ಕೂ ಪೂರ್ವದಲ್ಲಿ ಬಾಕಿ ಉಳಿದ ದ್ವಿತೀಯ ಪಿಯುಸಿ ಕೊನೆಯ ಆಂಗ್ಲ ಭಾಷೆಯ ಪರೀಕ್ಷೆ ಜೂ.18 ರಂದು ನಡೆಯಲಿದೆ. ಈ ಪರೀಕ್ಷಾ ಸಿದ್ಧತೆ ಅನುಸಾರ ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಸಾಧಕ-ಬಾಧಕಗಳ ಅನುಸಾರ ಕೋವಿಡ್ ಅಬ್ಬರದಲ್ಲೂ ಪರೀಕ್ಷೆ ಎದುರಿಸಲು ಸರ್ಕಾರ ಸಿದ್ಧವಾಗಿದೆ.
ಆರಂಭಿಕ ದಿನದಲ್ಲಿ ಕೋವಿಡ್ ದಿಂದ ಮುಕ್ತವಾಗಿದ್ದ ಕೊಪ್ಪಳ ಜಿಲ್ಲೆಯಲ್ಲಿ ಲಾಕ್ ಡೌನ್ ತೆರವಾದ ಬಳಿಕ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಇದರಿಂದ ಜಿಲ್ಲೆಯ ಪಾಲಕರು ಸೇರಿದಂತೆ ವಿದ್ಯಾರ್ಥಿಗಳಿಗೂ ಆತಂಕ ಮೂಡಿದೆ. ಇನ್ನೂ ಇಲಾಖೆ ಸಹಿತ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದರೂ ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಿರುವುದಕ್ಕೆ ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಲು ಸನ್ನದ್ಧವಾಗಿದೆ.
ಜಿಲ್ಲೆಯಲ್ಲಿ 13,582 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಆಂಗ್ಲ ವಿಷಯದ ಪರೀಕ್ಷೆ ಬರೆಯಲು ಸಿದ್ಧರಿದ್ದಾರೆ. ಪಪೂ ಶಿಕ್ಷಣ ಇಲಾಖೆ ಸಹಿತ ಜಿಲ್ಲೆಯ 16 ಪರೀಕ್ಷಾ ಕೇಂದ್ರಗಳನ್ನು ಗುರುತು ಮಾಡಿದ್ದು, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣದಲ್ಲಿನ ಕೇಂದ್ರಗಳಿಗೆ ಔಷಧ ಸಿಂಪರಣೆ ಮಾಡಿ ಸೋಂಕು ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಿದೆ. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು. ಕರ್ಚಿಪ್ ಕಟ್ಟಿಕೊಂಡು ಬಂದರೆ ಪರೀಕ್ಷಾ ಕೇಂದ್ರಕ್ಕೆ ಅವಕಾಶವಿಲ್ಲ. ಆದರೆ ಅವರಿಗೆ ಇಲಾಖೆಯಿಂದಲೇ ಆಯಾ ಕೇಂದ್ರಗಳಲ್ಲಿ ಮಾಸ್ಕ್ ವಿತರಣೆ ಮಾಡಲು ಇಲಾಖೆ ಸಿದ್ಧವಾಗಿದೆ.
ಇನ್ನೂ ಈ ಬಾರಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಕ್ಕೆ ಬೆಳಗ್ಗೆ 8:30ಕ್ಕೆ ಆಗಮಿಸಬೇಕು. ಬಳಿಕ ಅವರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿಯೇ ಕೇಂದ್ರದೊಳಗೆ ಬಿಡಲಾಗುವುದು. ಪ್ರತಿ ಕೇಂದ್ರದಲ್ಲಿ ಇಬ್ಬರು ಆಶಾ ಅಥವಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿರಲಿದ್ದಾರೆ. ಅವರು ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ನಿಗಾ ವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಕೇಂದ್ರದೊಳಗೆ ಸ್ಯಾನಿಟೈಜರ್ ಬಳಸಿ ಒಳ ಪ್ರವೇಶಕ್ಕೆ ಸೂಚನೆ ನೀಡಿದೆ. ಅಲ್ಲದೇ ಪ್ರತಿ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ.
ಪ್ರತಿ ಕೇಂದ್ರದಲ್ಲಿ 2 ವಿಶೇಷ ಕೊಠಡಿ: ಇನ್ನು ಎಸ್‌ಎಸ್‌ಎಲ್‌ಸಿಗೆ ಪೂರ್ವ ತಯಾರಿ ಮಾಡಿಕೊಂಡಂತೆ ಪಿಯುಸಿ ಇಂಗ್ಲಿಷ್ ವಿಷಯ ಪರೀಕ್ಷೆಗೂ ಪಿಯು ಇಲಾಖೆ ಪೂರ್ವ ತಯಾರಿ ಮಾಡಿಕೊಂಡಿದ್ದು, 16 ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ಕೇಂದ್ರದಲ್ಲಿ 2 ವಿಶೇಷ ಕೊಠಡಿಯನ್ನ ಕಾಯ್ದಿರಿಸಿದೆ. ಅಲ್ಲಿ ಜ್ವರ, ಕೆಮ್ಮು, ನೆಗಡಿಯಿಂದ ಬಳಲುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.
ಅಲ್ಲದೇ, ಹೊರ ಜಿಲ್ಲೆಗಳಲ್ಲಿ ಶಿಕ್ಷಣ ಪಡೆದ ಜಿಲ್ಲೆಯ 794 ವಿದ್ಯಾರ್ಥಿಗಳು ಜಿಲ್ಲೆಯಲ್ಲಿಯೇ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದೆ. ಅವರಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಅಲ್ಲದೇ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕಾಳಜಿ ವಹಿಸಲು ಸಾರಿಗೆ ಘಟಕದಿಂದ 291 ರೂಟ್‌ಗಳಲ್ಲಿ ಬಸ್ ಗಳ ಸಂಚಾರಕ್ಕೆ ಮ್ಯಾಪಿಂಗ್ ವ್ಯವಸ್ಥೆಯನ್ನೂ ಮಾಡಿದೆ.
ಜಿಲ್ಲೆಯಲ್ಲಿ ಜೂ.18 ರಂದು ಆಂಗ್ಲ ಭಾಷೆಯ ವಿಷಯಕ್ಕೆ ಪರೀಕ್ಷೆ ನಡೆಯಲಿದೆ. 13,582 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಿದ್ದಾರೆ. ಅವರಿಗೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು. ಸ್ಯಾನಿಟೈಜರ್ ಬಳಕೆ ಸೇರಿದಂತೆ ಇತರೆ ಜಾಗೃತಿಯ ಮಾಹಿತಿ ನೀಡಿದ್ದೇವೆ. 16 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
– ಡಿ.ಬಿ.ಗಡೇದ್, ಕೊಪ್ಪಳ ಡಿಡಿಪಿಯು