Advertisement

ಕಿರಂಗೂರು ಗ್ರಾಪಂ ಅವ್ಯವಹಾರ ತನಿಖೆಗೆ ಇಲಾಖೆ ಆದೇಶ

05:34 PM May 29, 2017 | |

ಶ್ರೀರಂಗಪಟ್ಟಣ: ತಾಲೂಕಿನ ಕಿರಂಗೂರು ಗ್ರಾಮ ಪಂಚಾಯಿತಿಯಲ್ಲಿ 2010-11ನೇ ಸಾಲಿನಿಂದ 2014-15ನೇ ಸಾಲಿನವರೆಗೆ ವಿವಿಧ ಯೋಜನೆಗಳಡಿ ಬೀದಿ ದೀಪಗಳು ಹಾಗೂ ನೀರಿನ ಮೋಟಾರ್‌ಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Advertisement

ಪಂಚಾಯಿತಿಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಪ್ಪಿತಸ್ಥರು ಎಂದು ಕಂಡುಬಂದಲ್ಲಿ ತಮ್ಮ ಹಂತದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು. ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಅವ್ಯವಹಾರದಲ್ಲಿ ಭಾಗಿಯಾಗಿದ್ದರೆ, ಅವರ ಸದಸ್ಯತ್ವ ರದ್ದುಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಿ.ದೇವಸಹಾಯಂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

ಕಿರಂಗೂರು ಗ್ರಾಪಂನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಿರಂಗೂರು ಪಾಪು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ತನಿಖಾ ತಂಡವು ಫೆ. 4 ಮತ್ತು 6ರಂದು ನಡೆಸಲಾದ ಪರಿಶೀಲನೆ ಸಮಯದಲ್ಲಿ ಕೆಲವು ನ್ಯೂನ್ಯತೆಗಳು ಕಂಡುಬಂದಿವೆ.

ನಿಯಮಾವಳಿ ಉಲ್ಲಂಘನೆ: 2011-12ರಲ್ಲಿ ಸಾಯಿಬಾಬ ಎಲೆಕ್ಟ್ರಿಕಲ್ಸ್‌ನಿಂದ 26,695 ರೂ.ಗಳಿಗೆ ಸಾಮಗ್ರಿ ಖರೀದಿಸಲಾಗಿದೆ. ಆದರೆ, ಚೆಕ್‌ನ್ನು ಸಾಯಿಬಾಬ ಎಲೆಕ್ಟ್ರಿಕಲ್ಸ್‌ನವರಿಗೆ ನೀಡದೆ ಗ್ರಾಪಂ ಬಿಲ್‌ ಕಲೆಕ್ಟರ್‌ ವರದರಾಜು ಹೆಸರಿಗೆ ಪಾವತಿಸಲಾಗಿದೆ. ವೋಚರ್‌ ಪ್ರತಿಯಲ್ಲಿ ದಿನಾಂಕ ನಮೂದಿಸಿಲ್ಲ. ಇವೆಲ್ಲ ಡಿ.ಸಿ. ಬಿಲ್‌ ಪರಿಶೀಲನೆ ಸಮಯದಲ್ಲಿ ಕಂಡುಬಂದಿವೆ.

ಮತ್ತೂಂದು ಬಿಲ್‌ನಲ್ಲಿ ಸಾಯಿಬಾಬ ಎಲೆಕ್ಟ್ರಿಕಲ್ಸ್‌ನಿಂದ 20,025 ರೂ.ಗಳಿಗೆ ಸಾಮಗ್ರಿ ಖರೀದಿಸಿದ್ದು, ಆ ಚೆಕ್‌ ಕೂಡ ವರದರಾಜು ಹೆಸರಿಗೇ ನೀಡಲಾಗಿದೆ. ಕೊಟೇಷನ್‌ನಲ್ಲಿ ಪಿಡಿಒ ಸಹಿ ಹಾಕಿಲ್ಲ. ಇನ್ನೊಂದು ಬಿಲ್‌ 2012-13ರಲ್ಲಿ ಭೈರವೇಶ್ವರ ಎಲೆಕ್ಟ್ರಿಕಲ್ಸ್‌ರವರಿಂದ 9,011 ರೂ.ಗಳಿಗೆ ಸಾಮಗ್ರಿ ಖರೀದಿಸಿದ್ದು, ಈ ಚೆಕ್‌ನ್ನು ಬಿಲ್‌ ಕಲೆಕ್ಟರ್‌ ಸೋಮಯ್ಯರಿಗೆ ನೀಡಿರುವುದು ಕಂಡುಬಂದಿದೆ.

Advertisement

2013-14ರಲ್ಲಿ ತಾರಾ ಎಲೆಕ್ಟ್ರಿಕಲ್ಸ್‌ನಿಂದ 35,690 ರೂ.ಗಳಿಗೆ ಸಾಮಗ್ರಿ ಖರೀದಿಸಿದ್ದು, ಬಾಲರಾಜು ಎಂಬುವರಿಗೆ ಪಾವತಿಸಲಾಗಿದೆ. ತಾರಾ ಎಲೆಕ್ಟ್ರಿಲ್ಸ್‌ನಿಂದ 16,900 ರೂ.ಗಳಿಗೆ ಖರೀದಿಸಿದ ಸಾಮಗ್ರಿಗಳಿಗೆ ಚೆಕ್‌ನ್ನು ಬಿಲ್‌ ಕಲೆಕ್ಟರ್‌ ಸೋಮಯ್ಯರಿಗೆ ನೀಡಲಾಗಿದೆ. ಇದೇ ಮಾದರಿಯಲ್ಲಿ ಹಲವಾರು ಡಿಸಿ ಬಿಲ್‌ಗ‌ಳ ಚೆಕ್‌ ಪಾವತಿಯಲ್ಲಿ ನಿಯಮಾವಳಿ ಪಾಲಿಸದಿರುವುದು ಕಂಡುಬಂದಿದೆ.

ಕಿರಂಗೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಎಂ.ಎಸ್‌.ಶಿವಣ್ಣೇಗೌಡ, ಬಿ.ಮಹದೇವು ಅವಧಿಯಲ್ಲಿ ಡಿಸಿ ಬಿಲ್‌ಗ‌ಳ ನಿಯಮಾವಳಿ ಉಲ್ಲಂಘನೆ ನಡೆದಿದ್ದು, ಮತ್ತೋರ್ವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಆರ್‌.ಪ್ರಮೀಳಾ ಪರಿಶೀಲನೆ ವೇಳೆ ಗೈರು ಹಾಜರಾಗಿದ್ದರು.

ಎರಡು ಕಡತ ನಾಪತ್ತೆ: ನಿರ್ದಿಷ್ಟ ಕಾಮಗಾರಿಗಳಿಗೆ ಆಯವ್ಯಯ, ಕ್ರಿಯಾಯೋಜನೆಯನ್ನೇ ತಯಾರಿಸದೆ ಖರ್ಚು ಮಾಡಿರುವುದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪಕ್ಕೆ ಸಾಕ್ಷಿ ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿತ್ತು. ಕಿರಂಗೂರು ಗ್ರಾಪಂನಲ್ಲಿ ಮೂರು ಮೋಟಾರ್‌ಗಳನ್ನು ಖರೀದಿ ಮಾಡಿದ್ದು, ಈ ಸಂಬಂಧ ಒಂದು ಕಡತ ಮಾತ್ರ ಲಭ್ಯವಿದೆ. ಇಲ್ಲಿಯೂ ನಿಯಮ ಪಾಲಿಸಿಲ್ಲ.

ಶೌಚಾಲಯ ನಿರ್ಮಿಸದೇ ಹಣ ಪಾವತಿ: ಕಿರಂಗೂರು ಗ್ರಾಮದ ಜಯಮ್ಮ ಅವರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ನಿರ್ಮಲ್‌ ಭಾರತ್‌ ಅಭಿಯಾನ ಒಗ್ಗೂಡಿಸುವಿಕೆಯಲ್ಲಿ ವೈಯಕ್ತಿಕ ಗೃಹ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಇದಕ್ಕೆ 3,820 ರೂ. ಪಾವತಿಸಲಾಗಿದೆ. ಆದರೆ, ಸ್ಥಳಕ್ಕೆ ತೆರಳಿ ನೋಡಿದಾಗ ಶೌಚಾಲಯ ನಿರ್ಮಿಸಿಕೊಂಡಿಲ್ಲದಿರುವುದು ಕಂಡುಬಂದಿದೆ. ಫ‌ಲಾನುಭವಿಯ ವೈಯಕ್ತಿಕ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಿರುವುದು ದೃಢಪಟ್ಟಿದೆ. ಈ ಬಗ್ಗೆ ಗ್ರಾಪಂನಲ್ಲಿ ಕಡತ ನಿರ್ವಹಣೆಯಾಗಿಲ್ಲ. ನಿರ್ಮಲ್‌ ಭಾರತ್‌ ಅಭಿಯಾನದಡಿ ಪಾವತಿಯೂ ಆಗಿಲ್ಲ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2010-11ರಿಂದ 2016-17ರವರೆಗೆ ಅಳವಡಿಸಿರುವ ಜಾಹೀರಾತು ಫ‌ಲಕಗಳಾದ ಲೋಸಿರ್‌, ವಿಂಡ್‌ಪ್ಲವರ್‌, ಮಾರಿಯಮ್ಮ ದೇವಸ್ಥಾನದ ಜಾಹೀರಾತು, ಹೋಟೆಲ್‌ ರೂಪಾ, ಪೆನ್ನಾ ಸಿಮೆಂಟ್‌, ಸಿದ್ಧಾರ್ಥ ಹೋಟೆಲ್‌, ರಾಧಾರಮಣ ಧಾರಾವಾಹಿ ಜಾಹೀರಾತು, ನಾರಾಯಣ ಆಸ್ಪತ್ರೆ, ಸುಮಾನ್‌, ಬಾದ್‌ಷಾ ಬಜಾರ್‌ ಸೇರಿದಂತೆ 15 ಜಾಹೀರಾತು ಫ‌ಲಕಗಳ ಬಾಬಿ¤ಗೆ ತೆರಿಗೆ ವಿಧಿಸಿಲ್ಲ ಮತ್ತು ವಸೂಲಿ ಮಾಡಿಲ್ಲವೆಂದು ತಿಳಿಸಲಾಗಿದೆ.

ಅನುಮೋದನೆ ಪಡೆದಿಲ್ಲ: ಸಕ್ರಮ ಪ್ರಾಧಿಕಾರವಾದ ನಗರ ಮತ್ತು ಗ್ರಾಮೀಣ ಯೋಜನಾ ಪ್ರಾಧಿಕಾರದಿಂದ ನಿಯಮಾನುಸಾರ ಅನುಮೋದನೆ ಪಡೆಯದೇ 70 ನಿವೇಶನಗಳನ್ನು ಇ-ಸ್ವತ್ತು ತಂತ್ರಾಂಶದಲ್ಲಿ ಅಳವಡಿಸಿ ಖಾತೆ ಮಾಡಿ ನಮೂನೆ-9 ಮತ್ತು 11ನ್ನು ವಿತರಿಸಲಾಗಿದೆ. ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ದಾಖಲಿಸಿದೆ ಎಂದು ರೈತ ಮುಖಂಡ ಕಿರಂಗೂರು ಪಾಪು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next