ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಖಾಲಿ ಇರುವ 2,997 ಉಪನ್ಯಾಸಕರ ಹುದ್ದೆಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ- 217, ರಾಯಚೂರು-172, ಮೈಸೂರು- 154, ಹಾಸನ- 150,ತುಮಕೂರು- 141, ಬೆಳಗಾವಿ-125,ಬಾಗಲಕೋಟೆ-118, ಬಳ್ಳಾರಿ- 117, ಚಿಕ್ಕಮಗಳೂರು-111, ಕಲಬುರಗಿ ಮತ್ತು ಕೋಲಾರ- ತಲಾ 100, ಗದಗ- 86,ಕೊಪ್ಪಳ- 103 ಹಾಗೂ ಉಡುಪಿ-77 ಸೇರಿ ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳಲ್ಲಿ ಖಾಲಿ ಇರುವ 2,997 ಉಪನ್ಯಾಸಕರ ಹುದ್ದೆಗಳಿಗೆ ಅತಿ ಶೀಘ್ರದಲ್ಲೇ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಆಯಾ ಜಿಲ್ಲಾ ಉಪ ನಿರ್ದೇಶಕರಿಗೆ ನಿರ್ದೇಶಿಸಲಾಗಿದೆ.
ಅತಿಥಿ ಉಪನ್ಯಾಸಕರಿಗೆ ಪ್ರತಿ ತಿಂಗಳು 9,000 ರೂ.ಗೌರವಧನ ನೀಡಲಾಗುತ್ತದೆ.2019ರ ಮಾರ್ಚ್ ಅಥವಾ ಕಾಯಂ ಉಪನ್ಯಾಸಕರ ನೇಮಕಾತಿಯವರೆಗೆ ಮಾತ್ರ ಎಂಬ ಷರತ್ತುಗಳೊಂದಿಗೆ ಅತಿಥಿ ಉಪನ್ಯಾಸಕರನ್ನು ಭರ್ತಿಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
2018-19ನೇ ಸಾಲಿನಲ್ಲಿ ಬಿ.ಇಡಿ ವ್ಯಾಸಂಗಕ್ಕೆ ತೆರಳಿರುವ ಉಪನ್ಯಾಸಕರ ಸ್ಥಾನಗಳನ್ನು ಒಳಗೊಂಡಂತೆ 3,376 ಹುದ್ದೆಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರ್ಕಾರ ಅನುಮೋದನೆ ನೀಡಿತ್ತು. ಸರ್ಕಾರಿ ಪಿಯು ಕಾಲೇಜಿನಲ್ಲಿ ಕಾರ್ಯಭಾರ ಇಲ್ಲದ ಉಪನ್ಯಾಸಕರನ್ನು ಸರಿದೂಗಿಸಿದ ನಂತರ ಉಳಿದ 2,997 ಹುದ್ದೆಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದೆ.
ಅತಿಥಿ ಉಪನ್ಯಾಸಕರ ನೇಮಕಾತಿ ನಂತರ ಆಯಾ ಜಿಲ್ಲೆಯ ಉಪ ನಿರ್ದೇಶಕರು,ಕಾಲೇಜಿನ ಹೆಸರು, ಅತಿಥಿ ಉಪನ್ಯಾಸಕರ ಹೆಸರು, ಮಾಸಿಕ ವೇತನ ಸೇರಿ ಎಲ್ಲ ವಿವರಗಳನ್ನು ಜುಲೈ 31ರೊಳಗೆ ಇಲಾಖೆಗೆ ಸಲ್ಲಿಸುವಂತೆ ಸೂಚಿಸಲಾಗಿದೆ.