Advertisement

ಮಕ್ಕಳ ಶಿಕ್ಷಣ ಹಕ್ಕು ನಿರಾಕರಣೆಗೆ ಕ್ರಮ

01:12 PM Feb 16, 2017 | |

ದಾವಣಗೆರೆ: ಮಕ್ಕಳಿಗೆ ಸಂವಿಧಾನಬದ್ಧ ಶಿಕ್ಷಣದ ಹಕ್ಕನ್ನು ಅರ್ಥಪೂರ್ಣವಾಗಿ ಜಾರಿ ಹಾಗೂ ಖಾತರಿಗೊಳಿಸುವುದು ಸ್ಥಳೀಯ ಸರ್ಕಾರಗಳ ಪ್ರಮುಖ ಕರ್ತವ್ಯ ಎಂದು ಜಿಲ್ಲಾ ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಎಲ್‌.ಎಚ್‌. ಅರುಣ್‌ ಕುಮಾರ್‌ ಹೇಳಿದ್ದಾರೆ.

Advertisement

ಬ್ರೆಡ್‌ ಸಂಸ್ಥೆ, ಡಾನ್‌ಬಾಸ್ಕೋ ಬಾಲ ಕಾರ್ಮಿಕರ ಮಿಷನ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಡಾನ್‌ಬಾಸ್ಕೋ ಶಾಲೆಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಕ್ಲಬ್‌ ಒಕ್ಕೂಟ ರಚನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಯಾರೇ ಆಗಲಿ ಮಕ್ಕಳ ಶಿಕ್ಷಣದ ಹಕ್ಕು ನಿರಾಕರಿಸಿದಲ್ಲಿ ಕಾನೂನಿನಡಿ ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದರು. 

ಮಕ್ಕಳಿಗೆ ಶಿಕ್ಷಣದ ಹಕ್ಕು ಕಡ್ಡಾಯವಾಗಿರುವಾಗ ಯಾವುದಾದರೂ ಮಗು ದುಡಿಯಲು ಹೋದರೆ ಅದು ಆ ಮಗುವಿನ ಹಕ್ಕು ಕಸಿದುಕೊಂಡಂತೆ ಆಗುತ್ತದೆ. ಪ್ರತಿ ಮಗುವನ್ನು ಅಕ್ಕರೆಯಿಂದ ಜಾಗರೂಕತೆಯಿಂದ ಬೆಳೆಸಿ ಯಾವುದೇ ಮಗುವು ಎಂತಹ ಪ್ರಸಂಗದಲ್ಲೂ ಒತ್ತಡಕ್ಕೆ ಬೀಳದಂತೆ ಜೀವನ ನಡೆಸುವಂತೆ ನೋಡಿಕೊಳ್ಳುವುದು ಸಮುದಾಯದ ಕರ್ತವ್ಯ ಎಂದು ತಿಳಿಸಿದರು. 

ಮಕ್ಕಳು ಬೆಳೆದು ಕುಟುಂಬ, ರಾಜ್ಯ, ದೇಶವನ್ನು ಉತ್ತಮವಾಗಿ ಮುನ್ನೆಡೆಸಬೇಕೆಂಬುದು ಎಲ್ಲರ ಆಶಯ ಅರ್ಥಪೂರ್ಣವಾಗಿ ಸಫಲ ಆಗಬೇಕಾದರೆ ಮಕ್ಕಳು ತಮ್ಮ ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸಬೇಕು. ಕುಟುಂಬ, ಶಾಲೆ ಮತ್ತು ಸಮುದಾಯಗಳ ಒಳಗೆ, ಹೊರಗೆ ಎಲ್ಲ ಮಕ್ಕಳೆಲ್ಲರಿಗೂ ಒಂದೇ ರೀತಿಯ ಅವಕಾಶ ದೊರೆಯುತ್ತಿಲ್ಲ.

ಮಕ್ಕಳು ಲಿಂಗ, ಜಾತಿ, ಧರ್ಮ, ಆಹಾರ, ಉಡುಗೆ-ತೊಡುಗೆ, ಆಸ್ತಿ, ಅಂತಸ್ತು ಇತರೆ ಕ್ಷೇತ್ರದಲ್ಲಿನ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು. ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳ ಒಡಂಬಡಿಕೆ ಮೂಲಕ ಎಲ್ಲ ಮಕ್ಕಳಿಗೂ ಬದುಕುವ, ರಕ್ಷಣೆಯ, ಅಭಿವೃದ್ಧಿ ಹೊಂದುವ ಮತ್ತು ಭಾಗವಹಿಸುವ ಹಕ್ಕನ್ನು ನೀಡಿದೆ.

Advertisement

ದೇಶದ ಜನಸಂಖ್ಯೆಯಲ್ಲಿ ಶೇ.42ರಷ್ಟು ಪ್ರಮಾಣ (52 ಕೋಟಿ) ಮಕ್ಕಳಿದ್ದಾರೆ. ಪ್ರತಿಯೊಬ್ಬರೂ ಮಕ್ಕಳಿಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು, ಸ್ವತಂತ್ರವಾಗಿ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಮಕ್ಕಳ ಹಕ್ಕುಗಳ ಕ್ಲಬ್‌ ಸಹಕಾರ ನೀಡಬೇಕು ಎಂದು ತಿಳಿಸಿದರು.

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪಿ.ಬಿ. ಮಲ್ಲಿಕಾರ್ಜುನ್‌ ಮಾತನಾಡಿ, ಶಾಲೆ ಹಾಗೂ ಸಮುದಾಯವನ್ನು ಮಕ್ಕಳ ಸ್ನೇಹಿಯಾಗಿ ಪರಿವರ್ತಿಸುವುದು ಮಕ್ಕಳ ಹಕ್ಕುಗಳ ಕ್ಲಬ್‌ನ ಗುರಿಯಾಗಿದೆ. ಮಕ್ಕಳ ಭಾಗವಹಿಸುವ ಹಕ್ಕು ಪ್ರತಿಪಾದನೆ ಹಾಗೂ ನಾಯಕತ್ವದ ಗುಣ ಬೆಳೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಕ್ರೀಂ ಯೋಜನೆ ನಿರ್ದೇಶಕ ಫಾದರ್‌ ಸಿರಿಲ್‌ ಸಗಾಯ್‌ರಾಜ್‌, ಡಾನ್‌ಬಾಸ್ಕೋ ಆಡಳಿತಾಧಿಕಾರಿ ಫಾ| ಜಾನ್‌ ಪೌಲ್‌, ಎ.ಟಿ. ವಸಂತ್‌ಕುಮಾರ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next