ನಂಜನಗೂಡು: ರಾಜಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಲಿಂಗಾಯತ, ವೀರಶೈವ ರಾಜಕಾರಣ ಸುತ್ತೂರಿನ ಜಾತ್ರಾ ಮಹೋತ್ಸವದ ಕೃಷಿ ವಿಚಾರ ಸಂಕಿರಣದಲ್ಲೂ ಬುಧವಾರ ಮಾರ್ದನಿಸಿತು.ಮಂಗಳವಾರ ನಡೆದ ಕೃಷಿ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗಿಯಾದ ಶಾಸಕ ಹಾಗೂ ಮಾಜಿ ಸಚಿವರಾದ ಶ್ರೀ ಬಸವರಾಜಹೊರಟ್ಟಿ ಈ ವಿಚಾರವನ್ನು ಪ್ರಸ್ತಾಪಿಸಿದರು.
ಸಾಮಾಜಿಕ ಬದ್ಧತೆಯಿರುವ ರಾಜಕಾರಣಿಗಳು, ಮಠಾಧೀಶರುಗಳು ವಿರಳವಾಗುತ್ತಿದ್ದಾರೆ ಎಂದ ಹೊರಟ್ಟಿ, ಮಠಾಧೀಶರೇ ನೀವು ಸಮಾಜಕ್ಕೆ ಮಾರ್ಗದರ್ಶಕರಾಗಿ ಟೀಕೆಗೆ ಇಳಿಯಬೇಡಿ ಎಂದರು. ನೀವು ಸಮಾಜಮುಖೀಯಾಗಿ ಕೆಲಸ ಮಾಡಿದ್ದರೆ ಇಂದು ನಮ್ಮ ಸಮಾಜದಲ್ಲಿ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ.
ಟೀಕೆ ಮಾಡುತ್ತಿರುವ ನಿಮಗೂ ರಾಜಕಾರಣಿಗಳಾದ ನಮಗೂ ಏನು ವ್ಯತ್ಯಾಸ ಎಂದು ಮಠಾಧೀಶರನ್ನು ನೇರವಾಗಿ ಪ್ರಶ್ನಿಸಿದರು. ಶೇ.85 ಮಠಾಧೀಶರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಹೊರಟ್ಟಿ ಇದು ಸರಿಯಲ್ಲ, ರಾಜಕಾರಣಿಗಳಾದ ನಾವು ದಾರಿ ತಪ್ಪಿ ನಡೆದಾಗ ಕರೆದು ಬುದ್ಧಿ ಹೇಳಿ ನಮ್ಮನ್ನು ತಿದ್ದುವ ಗೌರವವಾದ ಸ್ಥಾನ ನಿಮ್ಮದಾಗಿದ್ದು, ಅದನ್ನು ಉಳಿಸಿಕೊಳ್ಳಿ ಎಂದರು.
ನಿನ್ನೆಯ (ಸೋಮವಾರದ)ಈ ವೇದಿಕೆಯಲ್ಲಿ ಮಠಾಧೀಶರೊಬ್ಬರು( ರಂಭಾಪುರಿ ಜಗದ್ಗುರುಗಳು ) ಪ್ರಚಲಿತವಿರುವ ಸಮಾಜದ ಸಮಸ್ಯೆಯನ್ನು ಇಲ್ಲಿ ಪ್ರಸ್ತಾಪಿಸಿರುವುದರಿಂದ ತಾವು ಈ ಮಾತು ಹೇಳಬೇಕಾಯಿತು ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.
ಇಡೀ ರಾಜ್ಯದ ಮಠಾಧೀಶರ ನೇತೃತ್ವವನ್ನು ಸುತ್ತೂರು ಪೀಠಾಧ್ಯಕ್ಷರು ಆದ ಶಿವರಾತ್ರಿ ದೇಶಿಕೇಂದ್ರರು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು .ಆಗ ಸುತ್ತೂರು ಶ್ರೀಗಳ ಆದೇಶವನ್ನು ನಾವೆಲ್ಲಾ ಶಿರಸಾ ವಹಿಸಿ ಪಾಲಿಸಲು ಸಿದ್ಧರಿದ್ದೇವೆ ಎಂದು ಸಭೆಯಲ್ಲಿ ಹೊರಟ್ಟಿ ಘೋಷಿಸಿದರು.