Advertisement

‘ಅಪ್ಪೆ ಟೀಚರ್‌’ಪ್ರದರ್ಶನ ನಿಷೇಧಕ್ಕೆ ಮಹಿಳಾ ಸಂಘಟನೆಗಳ ಆಗ್ರಹ

11:00 AM Jun 03, 2018 | Team Udayavani |

ಮಹಾನಗರ : ತುಳು ಸಿನೆಮಾ ‘ಅಪ್ಪೆ ಟೀಚರ್‌’ನಲ್ಲಿ ಸ್ತ್ರೀ ಸಮುದಾಯ ಮುಜುಗರಪಟ್ಟುಕೊಳ್ಳುವಂತಹ ದೃಶ್ಯ ಹಾಗೂ ಸಂಭಾಷಣೆಗಳಿವೆ ಎಂದು ಆರೋಪಿಸಿ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನ ಸಭೆ ನಡೆಸಿದರು.

Advertisement

ಸಭೆಯನ್ನುದ್ದೇಶಿಸಿ ಮಾತನಾಡಿದ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ ಮಾತನಾಡಿ, ಅಪ್ಪೆ ಟೀಚರ್‌ ತುಳು ಸಿನೆಮಾ ಭರ್ಜರಿ ಪ್ರಚಾರ ಗಳಿಸಿದರೂ ಇಲ್ಲಿನ ಶಿಕ್ಷಕಿಯರ ಸಮುದಾಯವನ್ನು ಅವಮಾನ ಮಾಡಿದೆ. ಕೀಳು ಮಟ್ಟದ ಪದಬಳಕೆ ಮಾಡಿ, ಸ್ತ್ರೀಯರನ್ನು ಅವಮಾನಗೊಳಿಸಿದೆ. ಚಿತ್ರದಲ್ಲಿರುವ ಸಂಭಾಷಣೆ ಅತ್ಯಾಚಾರಕ್ಕೆ ಪ್ರೋತ್ಸಾಹ ನೀಡುವಂತಿದೆ. ಹಾಗಾಗಿ ಈ ಚಿತ್ರ ಎಲ್ಲಿಯೂ ಪ್ರದರ್ಶನವಾಗದಂತೆ ಬಹಿಷ್ಕರಿಸಬೇಕು ಎಂದು ಒತ್ತಾಯಿಸಿದರು.

ಅವಮಾನಿಸುವುದು ಸರಿಯಲ್ಲ
ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ ಅದ್ಯಕ್ಷೆ ಮರ್ಲಿನ್‌ ಮಾರ್ಟಿಸ್‌ ಮಾತನಾಡಿ, ಸ್ತ್ರೀಯರು ಮುಜುಗರಕ್ಕೊಳಪಡುವಂತಹ ಸನ್ನಿವೇಶಗಳನ್ನು ಚಿತ್ರದಲ್ಲಿ ತುರುಕಿ ಅದಕ್ಕೆ ಅಶ್ಲೀಲ ಸಂಭಾಷಣೆಗಳನ್ನು ಸೇರಿಸಿ ಸ್ತ್ರೀ ಸಮುದಾಯವನ್ನು ಅವಮಾನ ಗೊಳಿಸಿರುವುದು ಸರಿಯಲ್ಲ. ಈ ಸಿನೆಮಾದ ಪ್ರದರ್ಶನಕ್ಕೆ ನಿರ್ಬಂಧವನ್ನು ಹೇರಬೇಕಲ್ಲದೆ ದೃಶ್ಯ ಮಾಧ್ಯಮಗಳಲ್ಲಿ ಮಹಿಳೆಯರನ್ನು ತಪ್ಪು ಹಾದಿಗೆಳೆಯುವ ಧಾರಾವಾಹಿಗಳನ್ನೂ ನಿಷೇಧಿಸಬೇಕು ಎಂದರು.

ಪ್ರತಿಭಟನ ಮೆರವಣಿಗೆ, ಮನವಿ
ಸಭೆಗೆ ಮೊದಲು ನಡೆದ ಪ್ರತಿಭಟನ ಮೆರವಣಿಗೆ ನಗರದ ಅಂಬೇಡ್ಕರ್‌ ವೃತ್ತ ದಿಂದ ಹೊರಟು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದವರೆಗೆ ಸಾಗಿತು. ಸಭೆಯ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕರಾವಳಿ ಲೇಖಕಿಯರ ಹಾಗೂ ವಾಚಕಿ ಯರ ಸಂಘದ ಅಧ್ಯಕ್ಷೆ ಶಶಿಲೇಖಾ ಬಿ., ಜಮಾತೆ ಇಸ್ಲಾಮಿ ಮಹಿಳಾ ಸಂಘದ ಶಹನಾಜ್‌ ಎಂ., ಮಹಿಳಾ ಮಂಡಲಗಳ ಸ್ಥಾಪಕಾಧ್ಯಕ್ಷೆ ಕೆ.ಎ. ರೋಹಿಣಿ, ಪ್ರಜ್ಞಾ ಕೌನ್ಸೆಲಿಂಗ್‌ ಸೆಂಟರ್‌ನ ಹಿಲ್ಡಾ ರಾಯಪ್ಪನ್‌, ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್‌. ಸುವರ್ಣ, ಬೆಳ್ತಂಗಡಿ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ವಿಜಯಲಕ್ಷ್ಮೀ ಶೆಟ್ಟಿ, ಸುಮನ್‌ ಶರಣ್‌ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next