Advertisement

ರಾಜ್ಯ ಸರ್ಕಾರಕ್ಕೆ ಸ್ಕೌಟ್ಸ್‌-ಗೈಡ್ಸ್‌ ಬೇಡಿಕೆ ಸಲ್ಲಿಕೆ

12:39 PM Feb 11, 2017 | Team Udayavani |

ದಾವಣಗೆರೆ: ಸ್ಕೌಟ್ಸ್‌ ಮತ್ತು ಗೈಡ್ಸ್‌ ತರಬೇತುದಾರರ ಭತ್ಯೆ ಹೆಚ್ಚಳ, ತರಬೇತಿ ಕೇಂದ್ರಗಳ ಉನ್ನತೀಕರಣ, ಪೊಲೀಸ್‌ ನೇಮಕಾತಿಯಲ್ಲಿ ಮೀಸಲಾತಿ… ಒಳಗೊಂಡಂತೆ ಹಲವಾರು ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ ತಿಳಿಸಿದ್ದಾರೆ. ಶುಕ್ರವಾರ ಜಿಲ್ಲಾಡಳಿತದ ತುಂಗಾಭದ್ರಾ ಸಭಾಂಗಣದಲ್ಲಿ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಮತ್ತು ಸೇವಾ ಪದಕಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

Advertisement

ತರಬೇತಿ ನೀಡುವಂತಹವರಿಗೆ ವಾರ್ಷಿಕ 700 ರೂಪಾಯಿ ಭತ್ಯೆ ನೀಡುತ್ತಿರುವುದನ್ನು 5 ಸಾವಿರ, ದಿನದ ಆಹಾರ ಭತ್ಯೆ 120 ರಿಂದ 150 ರೂಪಾಯಿಗೆ ಹೆಚ್ಚಿಸಲು, ರಾಷ್ಟ್ರಪತಿ ಪದಕ ಪಡೆದವರಿಗೆ ಭಾರತ ದರ್ಶನ ಪ್ರವಾಸಕ್ಕೆ ಅವಕಾಶ, ಪೊಲೀಸ್‌ ನೇಮಕಾತಿಯಲ್ಲಿ ಮೀಸಲು, ಇಂಜಿನಿಯರಿಂಗ್‌ ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಸೀಟುಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. 

ಸಾಮಾನ್ಯ ತರಬೇತಿಯ ಜೊತೆಗೆ ಧಾರವಾಡದ ಸ್ಕೌಟ್ಸ್‌ ಮತ್ತು ಗೈಡ್ಸ್‌ ತರಬೇತಿ ಕೇಂದ್ರದಲ್ಲಿ ತಾರಾಲಯ (ಪ್ಲಾನಿಟೋರಿಯಂ), ಉಡುಪಿಯಲ್ಲಿ ಜಲಸಾಹಸ ತರಬೇತಿಗೆ ಕ್ರಮ ಕೈಗೊಳ್ಳಲಾಗಿದೆ. ಮುರಾರ್ಜಿ ದೇಸಾಯಿ ಮತ್ತಿತರ ವಸತಿಯುತ ಶಾಲೆಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಪ್ರಾರಂಭಿಸಲಾಗುವುದು. ರಾಜ್ಯದ 17 ವಿಶ್ವವಿದ್ಯಾಲಯಲ್ಲಿ ಎನ್‌ಸಿಸಿ, ಎನ್‌ಎಸ್‌ ಎಸ್‌ ಮಾದರಿಯಲ್ಲಿ ರೇಂಜರ್ಸ್‌, ರೋವರ್‌ಗಳ ತರಬೇತಿಗಾಗಿ ಸಂಯೋಜಕರನ್ನು ಈಗಾಗಲೇ ನಿಯೋಜಿಸಲಾಗಿದೆ.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಗೆ ಇನ್ನೂ ಹೆಚ್ಚಿನ ಅನುದಾನದ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು. ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೂಲಕ ಮಕ್ಕಳು ಜೀವನಕಲೆ ಕಲಿತು ಪರಿಪೂರ್ಣ ವ್ಯಕ್ತಿತ್ವದವರಾಗಿ ರೂಪುಗೊಳ್ಳುವರು. ಒಮ್ಮೆ ಸ್ಕೌಟ್ಸ್‌ ಮತ್ತು ಗೈಡ್‌ನ ತೆಕ್ಕೆಗೆ ಬಂದವರು ಕೊನೆವರೆಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳಾಗಿಯೇ ಇರುತ್ತಾರೆ.

ವಿಶ್ವ ಭಾತೃತ್ವ, ಮಾನವೀಯ ಮೌಲ್ಯ ಮತ್ತು ಎಲ್ಲದಕ್ಕಿಂತಲೂ ಮುಖ್ಯವಾಗಿ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುವಂಥದ್ದನ್ನು ಸ್ಕೌಟ್ಸ್‌ ಮತ್ತು ಗೈಡ್ಸ್‌ ನಲ್ಲಿ ಕಲಿಸಿಕೊಡಲಾಗುತ್ತದೆ ಎಂದು ಹೇಳಿದರು. ದಾವಣಗೆರೆ  ಒಳಗೊಂಡಂತೆ ಎಲ್ಲಾ ಕಡೆ ಅಭಿವೃದ್ಧಿ ಕಂಡು ಬರುತ್ತಿದೆ.

Advertisement

ಆದರೂ, ಅನೇಕ ಸಾಮಾಜಿಕ ಸಮಸ್ಯೆ ಇವೆ. ಪರಿಸರ ಹಾಳಾಗುತ್ತಿದೆ. ಮರಳು, ಕಬ್ಬಿಣವನ್ನೇ ತಿಂದು ಹಾಕುವಂತಹ  ಪ್ರವೃತ್ತಿ ಹೆಚ್ಚಾಗಿದೆ. ಇಡೀ ಪರಿಸರವನ್ನೇ ಸಂಪೂರ್ಣವಾಗಿ ಹಾಳು ಮಾಡುವ ಹಂತಕ್ಕೆ ಬಂದಿದ್ದೇವೆ. ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಬೇಕು ಹಾಗೂ ವಿಶ್ವದ ಶಾಂತಿಗಾಗಿ ಶ್ರಮಿಸಬೇಕು ಎಂದು ತಿಳಿಸಿದರು. 

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್‌.ಎಂ. ಪ್ರೇಮಾ ಮಾತನಾಡಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೂಲಕ ವ್ಯಕ್ತಿತ್ವ ವಿಕಸನ, ಜೀವನ ಕೌಶಲ್ಯ, ದೇಶಪ್ರೇಮ, ಸನ್ನಡತೆ, ಸೇವಾ ಪ್ರವೃತ್ತಿಯನ್ನ ಕಲಿಯುವ ಮೂಲಕ ಪ್ರತಿ ವಿದ್ಯಾರ್ಥಿ  ಪರಿಪೂರ್ಣ ವ್ಯಕ್ತಿ ಮತ್ತು ಶಕ್ತಿಯಾಗಿ ಹೊರ ಹೊಮ್ಮುತ್ತಾರೆ.

ವಿಶ್ವ ಭಾತೃತ್ವದ… ಉದ್ದೇಶದಿಂದ ಬೇಡನ್‌ ಪೊವೆಲ್‌ 20 ಜನರೊಂದಿಗೆ ಪ್ರಾರಂಭಿಸಿದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಇಂದು 250 ದೇಶದಲ್ಲಿ 5 ಕೋಟಿ ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳನ್ನು ಹೊಂದಿರುವುದು ಇಲ್ಲಿನ ಶಿಸ್ತಿನ ಕಲಿಕೆಗೆ ಸಾಕ್ಷಿ ಎಂದರು. ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಅಧ್ಯಕ್ಷ ಮಹಮ್ಮದ್‌ ವಾಸಿಲ್‌ ಅಧ್ಯಕ್ಷತೆ ವಹಿಸಿದ್ದರು. 

ಕೆ.ಜಿ. ಶರಣಪ್ಪ, ಸುಧಾ ದಿಬ್ದಳ್ಳಿ, ಡಾ| ಶಶಿಧರ್‌, ಬೂಸ್ನೂರ್‌ ವಿಶ್ವನಾಥ್‌, ಮಂಗಳಾ ವಿಶ್ವನಾಥ್‌, ಶಾಂತಾ ಯಾವಗಲ್‌,  ಮಂಜುಳಾ, ಎ.ಪಿ. ಸದಾಶಿವಪ್ಪ, ಪುಟ್ಟಮ್ಮ ಮಹಾರುದ್ರಯ್ಯ, ಎ.ಪಿ. ಷಡಕ್ಷರಪ್ಪ ಇತರರು ಇದ್ದರು. ಮುರುಘರಾಜೇಂದ್ರ ಚಿಗಟೇರಿ ಸ್ವಾಗತಿಸಿದರು. 800ಕ್ಕೂ ಅಧಿಕ ಮಕ್ಕಳಿಗೆ  ಜಿಲ್ಲಾ ಪುರಸ್ಕಾರ ಪ್ರಶಸ್ತಿ, ತರಬೇತುದಾರರಿಗೆ ಸೇವಾ ಪದಕ ಪ್ರದಾನ ಮಾಡಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next