ಖಾಸಗಿ ವೃತ್ತಿಪರ ಕಾಲೇಜುಗಳು ಸತತ ಮೂರನೇ ವರ್ಷ ತಮ್ಮ ಸರಕಾರಿ ಸೀಟುಗಳ ಶುಲ್ಕವನ್ನು ಹೆಚ್ಚಿಸಿಕೊಳ್ಳುವ ಬೇಡಿಕೆ ಇರಿಸಿವೆ. ಇದನ್ನು ಸರಕಾರ ಅಂಗೀಕರಿಸಿದರೆ ಖಾಸಗಿ ವೃತ್ತಿಪರ ಕಾಲೇಜುಗಳ ಲಾಬಿಗೆ ಮತ್ತೆ ಮಣಿದಂತಾಗುತ್ತದೆ. ಅಷ್ಟು ಮಾತ್ರ ಅಲ್ಲ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣ ಮತ್ತಷ್ಟು ಕನಸಿನ ಗಂಟಾಗುತ್ತದೆ.
ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳು ಈ ವರ್ಷವೂ ಸರಕಾರಿ ಮತ್ತು ಕಾಮೆಡ್-ಕೆ ಕೋಟಾದ ಸೀಟುಗಳ ಶುಲ್ಕವನ್ನು ಶೇ. 30ರಷ್ಟು ಹೆಚ್ಚಿಸಲು ಬೇಡಿಕೆಯಿಟ್ಟಿವೆ. ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ್ ಪ್ರಕಾಶ್ ಪಾಟೀಲ್ ಅವರನ್ನು ಭೇಟಿ ಮಾಡಿರುವ ಈ ಆಡಳಿತ ಮಂಡಳಿಗಳ ಒಕ್ಕೂಟ ಶುಲ್ಕ ಹೆಚ್ಚಿಸಲು ತೀವ್ರ ಒತ್ತಡ ಹೇರಿವೆ. ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದೆಂದು ಸಚಿವದ್ವಯರು ಭರವಸೆಯನ್ನೇನೋ ನೀಡಿದ್ದಾರೆ. ಆದರೆ ಶುಲ್ಕ ಹೆಚ್ಚಳವಾಗುವುದು ಬಹುತೇಕ ಖಚಿತ ಎಂದು ಬಲ್ಲ ಮೂಲಗಳು ಹೇಳುತ್ತಿವೆ. ಆಡಳಿತ ಮಂಡಳಿಗಳು ಕೋರಿದ ಶೇ. 30 ಅಲ್ಲದಿದ್ದರೂ ಹಿಂದಿನ ವರ್ಷಕ್ಕಿಂತ ತುಸು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ಹಿಂದಿನೆರಡು ಶೈಕ್ಷಣಿಕ ವರ್ಷಗಳಲ್ಲೂ ಶುಲ್ಕ ಹೆಚ್ಚಳ ಮಾಡಿರುವ ಕಾಂಗ್ರೆಸ್ ಸರಕಾರ ಸತತ ಮೂರನೇ ವರ್ಷ ವೃತ್ತಿಪರ ಕೋರ್ಸ್ ಗಳ ಶುಲ್ಕ ಹೆಚ್ಚಿಸಿದ ಅಪಖ್ಯಾತಿಗೆ ಗುರಿಯಾಗಬೇಕಾಗುತ್ತದೆ.
ರಾಜ್ಯದಲ್ಲಿ 8,075 ಮೆಡಿಕಲ್ ಸೀಟ್‌ಗಳು ಮತ್ತು ಸುಮಾರು 83,000 ಎಂಜಿನಿಯರಿಂಗ್ ಸೀಟುಗಳಿವೆ. ಕರ್ನಾಟಕ ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳ ಪ್ರವೇಶ ಮತ್ತು ಶುಲ್ಕ ಸ್ತರವನ್ನು ನಿರ್ಧರಿಸುವ ಕಾಯಿದೆ ಪ್ರಕಾರ ಈ ಪೈಕಿ ಅಲ್ಪಸಂಖ್ಯಾಕರ ಕಾಲೇಜು ಹೊರತುಪಡಿಸಿ ಉಳಿದ ಕಾಲೇಜುಗಳು ಶೇ.40 ಸೀಟುಗಳನ್ನು ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು. ಅಲ್ಪಸಂಖ್ಯಾಕರ ಕಾಲೇಜುಗಳು ಶೇ. 25 ಸೀಟುಗಳನ್ನು ಮೀಸಲಿಟ್ಟರೆ ಸಾಕು. ಈ ಮೀಸಲು ಸೀಟುಗಳ ಶುಲ್ಕವನ್ನು ಸರಕಾರ ನಿರ್ಧರಿಸುತ್ತದೆ. ಉಳಿದ ಸೀಟುಗಳ ಶುಲ್ಕವನ್ನು ಕಾಲೇಜುಗಳೇ ನಿರ್ಧರಿಸುತ್ತವೆ. ಹಾಗೆ ನೋಡಿದರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶವೇ ಈಗ ಗೊಂದಲದ ಗೂಡು. ಈ ಪ್ರವೇಶ ಬಯಸುವ ವಿದ್ಯಾರ್ಥಿಗಳು ನೀಟ್, ಕಾಮೆಡ್-ಕೆ, ಸಿಇಟಿ ಎಂದು ಮೂರು ಪರೀಕ್ಷೆಗಳನ್ನು ಬರೆಯಬೇಕು. ಯಾವುದರಲ್ಲಿ ಉತ್ತಮ ಅಂಕ ಲಭಿಸಿದೆಯೋ ಆ ಕೋಟಾದಡಿ ಸೀಟಿಗೆ ಅರ್ಜಿ ಹಾಕಬೇಕು. ಈ ವರ್ಷ ರಾಜ್ಯದ ಸುಮಾರು 1.25 ಲಕ್ಷ ವಿದ್ಯಾರ್ಥಿಗಳು ನೀಟ್ ಬರೆಯುವ ಅರ್ಹತೆ ಗಳಿಸಿಕೊಂಡಿದ್ದಾರೆ. ನೀಟ್‌ನಲ್ಲಿ ಶೇ.50ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಮಾತ್ರ ವೈದ್ಯಕೀಯ ಅಥವ ದಂತ ವೈದ್ಯಕೀಯ ಪ್ರವೇಶ ಭಾಗ್ಯ ದೊರೆಯುತ್ತದೆ.
ಕಾಲೇಜು ಪ್ರವೇಶದಂತೆ ಶುಲ್ಕವೂ ಗೊಂದಲಮಯ. ಖಾಸಗಿ ವೃತ್ತಿಪರ ಶಿಕ್ಷಣವೇ ಈಗ ಅತಿ ದೊಡ್ಡ ವ್ಯಾಪಾರ. ಖಾಸಗಿ ಕಾಲೇಜುಗಳ ಪ್ರವೇಶ ಶುಲ್ಕ ಪ್ರತಿ ವರ್ಷ ಏರುತ್ತಾ ಹೋಗುತ್ತಿದೆ. ಅದರಲ್ಲೂ ಬಹುಬೇಡಿಕೆಯ ವೈದ್ಯಕೀಯ ಕೋರ್ಸ್‌ಗಳು ಈಗ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಗನ ಕುಸುಮವೇ ಸರಿ. ಉತ್ತಮ ದರ್ಜೆಯ ಖಾಸಗಿ ಮೆಡಿಕಲ್ ಕಾಲೇಜಿನ ಮೆನೇಜ್‌ಮೆಂಟ್ ಕೋಟಾದ ಸೀಟು ಕಡಿಮೆ ಎಂದರೂ 1 ಕೋ. ರೂ. ಬೆಲೆಬಾಳುತ್ತದೆ. ಈ ಕಾಲೇಜುಗಳು ತಮ್ಮ ಸೀಟುಗಳನ್ನು ಕೋಟಿಗಳಿಗೆ ಮಾರಿಕೊಳ್ಳುತ್ತಿರುವುದು ರಹಸ್ಯ ವಿಷಯವೇನೂ ಅಲ್ಲ. ಈ ಸೀಟುಗಳಿಗೆ ಅಂಕ ಮುಖ್ಯವಲ್ಲ; ಎಷ್ಟು ಕೋಟಿ ನೀಡಲು ಸಮರ್ಥನಿದ್ದಾನೆ ಎನ್ನುವುದೇ ಮಾನದಂಡ. ಇದು ಸಾಲದು ಎನ್ನುವಂತೆ ಈ ಕಾಲೇಜುಗಳು ಸರಕಾರಿ ಕೋಟಾದ ಸೀಟುಗಳ ಶುಲ್ಕವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಿವೆ. ಕಳೆದ 10 ವರ್ಷಗಳಲ್ಲಿ ಕರ್ನಾಟಕದಲ್ಲಿ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕ ಶೇ. 80ರಿಂದ ಶೇ. 290 ತನಕ ಏರಿಕೆಯಾಗಿವೆ ಎಂಬ ಬೆಚ್ಚಿಬೀಳಿಸುವ ಅಂಶವನ್ನು ಅಂಕಿಅಂಶಗಳು ತಿಳಿಸುತ್ತಿವೆ.
ಕರ್ನಾಟಕ ಎಂದಲ್ಲ, ಬಹುತೇಕ ರಾಜ್ಯಗಳಲ್ಲಿ ಖಾಸಗಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಬಲಿಷ್ಠ ಲಾಬಿ ಹೊಂದಿವೆ. ಬಹುತೇಕ ಕಾಲೇಜುಗಳ ಮಾಲಕರು ರಾಜಕಾರಣಿಗಳು, ಅವರ ಬಂಧುಗಳು ಇಲ್ಲವೇ ಹಿತೈಷಿಗಳಾಗಿರುತ್ತಾರೆ. ಹೀಗಾಗಿ ವರ್ಷ ವರ್ಷವೂ ಸರಕಾರಗಳು ಹೆಚ್ಚೇನೂ ತಕರಾರು ಮಾಡದೆ ಶುಲ್ಕ ಹೆಚ್ಚಿಸುತ್ತಿವೆ. ಈ ರೀತಿ ದುಬಾರಿ ಹಣ ಕೊಟ್ಟು ಪದವಿ ಪಡೆದವರು ಅನಂತರ ಹಾಕಿದ ಬಂಡವಾಳವನ್ನು ಹಿಂಪಡೆಯಲು ಅಡ್ಡದಾರಿ ಹಿಡಿಯುತ್ತಾರೆ ಮತ್ತು ಔಷಧ ಕಂಪೆನಿಗಳ ಕೈಗೊಂಬೆಯಾಗಿ ಕುಣಿಯುತ್ತಾರೆ. ಇಂದು ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ದುಬಾರಿಯಾಗಲು ಇದೂ ಒಂದು ಕಾರಣ. ಶಿಕ್ಷಣ ವ್ಯವಸ್ಥೆಯೇ ಸರಿಯಿಲ್ಲದಿರುವಾಗ ಈ ವ್ಯವಸ್ಥೆಯಲ್ಲಿ ಕಲಿತು ಬಂದವರು ಸರಿಯಿರಬೇಕೆಂದು ನಿರೀಕ್ಷಿಸುವುದು ಎಷ್ಟು ಸರಿ? ಸರಕಾರ ಇದನ್ನು ನಿಯಂತ್ರಿಸಲೇ ಬೇಕು.