Advertisement

ಪಶು ಆಹಾರ ದರ ಇಳಿಸಲು ಆಗ್ರಹ

07:35 AM Dec 23, 2017 | Team Udayavani |

ಬೆಂಗಳೂರು: ರೈತರಿಗೆ ಅನುಕೂಲವಾಗಲು ಪಶು ಆಹಾರದ ದರವನ್ನು ಪ್ರತಿ ಟನ್‌ಗೆ ಕನಿಷ್ಠ ಎರಡು ಸಾವಿರ ರೂ. ಇಳಿಸುವಂತೆ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಆಗ್ರಹಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಕೆಎಂಎಫ್ನ 5 ಪಶು ಆಹಾರ ಕಾರ್ಖಾನೆಗಳು ಕಳೆದ ವರ್ಷ 58.55 ಕೋಟಿ ರೂ. ಹಾಗೂ ಈ ವರ್ಷದ ನವೆಂಬರ್‌ವರೆಗೆ 65.49 ಕೋಟಿ ರೂ. ಲಾಭ ಗಳಿಸಿದೆ. ಆದರೆ, ಪಶು ಆಹಾರದ ದರ ಪ್ರತಿ ಟನ್‌ಗೆ 18 ರಿಂದ 21 ಸಾವಿರ ರೂ. ಇದೆ. ಇದರಿಂದ ರೈತರಿಗೆ ಹೊರೆಯಾಗುತ್ತಿದೆ. ಪಶು ಆಹಾರ ಕಾರ್ಖಾನೆಗಳು ಲಾಭದಲ್ಲಿರುವಾಗ, ಆ ಲಾಭದ ಅನುಕೂಲ ರೈತರಿಗೆ ಆಗಲು ಪಶು ಆಹಾರದ ದರವನ್ನು ಪ್ರತಿ ಮೂಟೆಗೆ ಕನಿಷ್ಠ 250 ರಿಂದ 500 ರೂ. ಹಾಗೂ ಪ್ರತಿ ಟನ್‌ಗೆ ಕನಿಷ್ಠ 2 ರಿಂದ 5 ಸಾವಿರ ರೂ. ಇಳಿಸುವಂತೆ  ಒತ್ತಾಯಿಸಿದರು.

ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿ ಮತ್ತು ಸಿಬ್ಬಂದಿಗೆ ಪ್ರತಿ ಕೆ.ಜಿ ಹಾಲಿನ ಮೇಲೆ ಕನಿಷ್ಠ 30 ಪೈಸೆ ಪ್ರೋತ್ಸಾಹಧನ ನೀಡಬೇಕು. ತುಪ್ಪ, ಬೆಣ್ಣೆ, ಹಾಲಿನ ಪುಡಿ, ಹೊರ ರಾಜ್ಯಗಳಿಗೆ ಮಾರುವ ಸಗಟು ಹಾಲಿಗೆ ಹಾಲು ಒಕ್ಕೂಟಗಳಿಂದ ಕೆಎಂಎಫ್ ತೆಗೆದುಕೊಳ್ಳುತ್ತಿರುವ ಲೆವಿ ದರಗಳನ್ನು ರದ್ದುಪಡಿಸಬೇಕು ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ರಾಜ್ಯದ 10 ಹಾಲು ಉತ್ಪಾದಕ ಒಕ್ಕೂಟಗಳು 115 ಕೋಟಿ ರೂ. ನಷ್ಟ ಅನುಭವಿಸಿದೆ. 6 ಸಾವಿರ ಮೆಟ್ರಕ್‌ ಟನ್‌ ಬೆಣ್ಣೆ ದಾಸ್ತಾನು ಇದೆ ರೇವಣ್ಣ ಹೇಳಿದಾಗ, ಪಶುಸಂಗೋಪನಾ ಸಚಿವರು ರಾಜ್ಯದ ಯಾವ ಹಾಲು ಒಕ್ಕೂಟವೂ ನಷ್ಟದಲ್ಲಿ ಇಲ್ಲ, ಬೆಣ್ಣೆ ಬೇಡಿಕೆ ಸಾಕಷ್ಟಿದೆ ಎಂದು ಹೇಳಿದ್ದಾರೆ ಎಂದು ಕೇಳಿದ್ದಕ್ಕೆ, ಸುದ್ದಿಗೋಷ್ಠಿ ನಡೆಯುತ್ತಿದ್ದಾಗಲೇ ಕೆಎಂಎಫ್ ಮಾರುಕಟ್ಟೆ ಅಧಿಕಾರಿಯನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ಓಪನ್‌ ಸ್ಪೀಕರ್‌ನಲ್ಲಿ ಅವರಿಂದ ನಷ್ಟದ ಮಾಹಿತಿ ಪಡೆದು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next