ದಾವಣಗೆರೆ: ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ 44 ವಿವಿಧ ಹಕ್ಕೊತ್ತಾಯದ ಕಾರ್ಮಿಕ ಸನ್ನದನ್ನು ಶನಿವಾರ ಮಹಾತ್ಮಗಾಂಧಿ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ವತಿಯಿಂದ ಬಿಡುಗಡೆ ಮಾಡಲಾಯಿತು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಮುಖಂಡ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಗಗನಕ್ಕೇರಿರುವ ವಸ್ತುಗಳ ಬೆಲೆ ನಿಯಂತ್ರಣ ಆಗದೇ ಇರುವ ಕಾರಣಕ್ಕೆ ಜನಸಾಮಾನ್ಯರ ಜೀವನ ದುಸ್ತರವಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಂತಹ ಯಾವುದೇ ಸರ್ಕಾರ, ಜನ ಸಾಮಾನ್ಯರು ಪ್ರತಿ ದಿನ ಬಳಸುವ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಅತೀ ಮುಖ್ಯವಾಗಿರುವ ಸಾರ್ವಜನಿಕ ವಿತರಣಾ ಪದ್ಧತಿಯನ್ನ ಸಧೃಢವಾಗಿ ವಿಸ್ತರಣೆ ಮಾಡಬೇಕು. ಪಡಿತರ ವಿತರಣೆಗೆ ಆಧಾರ್ ಕಾರ್ಡ್ ಕಡ್ಡಾಯವನ್ನು ತೆಗೆದುಹಾಕಬೇಕು. ಕೇಂದ್ರ ಸರ್ಕಾರವೇ ಜಾರಿಗೆ ತಂದಿರುವ ಕನಿಷ್ಠ ವೇತನ ಕಾಯ್ದೆ ಅನ್ವಯ ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಪ್ರತಿ ತಿಂಗಳು 18 ಸಾವಿರ ವೇತನ ನೀಡಬೇಕು. ಸರ್ಕಾರಿ ಜೀತದ ಪ್ರತೀಕವಾಗಿರುವ ಗುತ್ತಿಗೆ, ಹೊರ ಗುತ್ತಿಗೆ ಪದ್ಧತಿಯನ್ನ ಸಂಪೂರ್ಣವಾಗಿ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಾದ, ಕಾರ್ಮಿಕರ ವಿರೋಧಿಯಾದ ತಿದ್ದುಪಡಿ ಕೈ ಬಿಡಬೇಕು. ದೇಶದ ಸಂಪನ್ಮೂಲ ಸೃಷ್ಟಿಸುವಂತಹ ಕಾರ್ಮಿಕರ ಪರವಾದ ನೀತಿ ಜಾರಿಗೆ ತರಬೇಕು. ಈಗಿರುವ ಕಾರ್ಮಿಕ ನೀತಿಗಳನ್ನ ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು. ಪುರುಷರಂತೆ ಮಹಿಳಾ ಕಾರ್ಮಿಕರಿಗೂ ಸಮಾನ ವೇತನ ನೀಡಬೇಕು. ಕಾರ್ಮಿಕ ಕ್ಷೇತ್ರದಲ್ಲಿ ದ್ವಿ ಪಕ್ಷೀಯ, ತ್ರಿ ಪಕ್ಷೀಯ ಮಾತುಕತೆ ವಿಧಾನ ಬಲಪಡಿಸುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಕೆ.ಎಲ್. ಭಟ್, ಆವರಗೆರೆ ಚಂದ್ರು, ಆನಂದರಾಜ್, ಶ್ರೀನಿವಾಸಮೂರ್ತಿ, ಬಾಡ ಇ. ಶ್ರೀನಿವಾಸ್, ಆವರಗೆರೆ ವಾಸು, ಕೆ.ಎಚ್. ಆನಂದರಾಜ್, ಐರಣಿ ಚಂದ್ರು, ಎನ್.ಟಿ. ಬಸವರಾಜ್, ತಿಪ್ಪೇ ಸ್ವಾಮಿ, ಪರಶುರಾಮ್, ಎಂ.ಬಿ. ಶಾರದಮ್ಮ, ಸರೋಜ, ಉಮೇಶ್, ಟಿ.ಎಸ್. ನಾಗರಾಜ್ ಇತರರು ಇದ್ದರು