Advertisement

ಪ್ರಜಾತಂತ್ರದ ಕತ್ತುಹಿಚುಕುವ ನಿರ್ಧಾರ ಅಸ್ಥಿರತೆಯತ್ತ ತಮಿಳುನಾಡು

12:42 PM Sep 20, 2017 | |

ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಬಣಗಳು ರಾಜಿಯಾಗುವುದ ರೊಂದಿಗೆ ಒಂದು ಹಂತದಲ್ಲಿ ಸ್ಥಿರತೆಗೆ ಬಂತು ಎಂದು ಭಾವಿಸಿದ್ದ ತಮಿಳುನಾಡಿನ ರಾಜಕೀಯ ಮತ್ತೆ ಅಸ್ಥಿರತೆಯತ್ತ ಸಾಗಿದೆ. ಸೋಮವಾರ ಸ್ಪೀಕರ್‌ ಪಿ. ಧನಪಾಲ್‌ ಎಐಎಡಿಎಂಕೆಯ 18 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಪಕ್ಷದಿಂದ ಉಚ್ಛಾಟಿತರಾಗಿರುವ ಟಿ. ಟಿ. ವಿ. ದಿನಕರನ್‌ ಅವರನ್ನು ಬೆಂಬಲಿಸುತ್ತಿರುವ 18 ಶಾಸಕರನ್ನು ಪಕ್ಷಾಂತರ ವಿರೋಧಿ ಕಾಯಿದೆ ಯಡಿಯಲ್ಲಿ ಅನರ್ಹಗೊಳಿಸಿರುವ ಕ್ರಮದ ಕಾನೂನು ಮತ್ತು ಸಾಂವಿಧಾನಿಕ ಮಾನ್ಯತೆಯ ಕುರಿತು ಈಗ ಭಾರೀ ಚರ್ಚೆಯಾಗುತ್ತಿದೆ. ಸ್ಪೀಕರ್‌ ನಿರ್ಧಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಇದು ಪ್ರಜಾತಂತ್ರದ ಕತ್ತು ಹಿಚುಕುವ ಕ್ರಮ ಎಂದು ಹೇಳಲಾಗುತ್ತಿದೆ.

Advertisement

18 ಶಾಸಕರು ಪಳನಿಸ್ವಾಮಿ ವಿರುದ್ಧ ಬಂಡೆದಿದ್ದಾರೆಯೇ ಹೊರತು ಪಕ್ಷದ ಸಚೇತಕಾಜ್ಞೆಯನ್ನು ಉಲ್ಲಂ ಸಿಲ್ಲ ಹಾಗೂ ಬೇರೊಂದು ಪಕ್ಷಕ್ಕೆ ಸೇರಿಲ್ಲ. ಅಲ್ಲದೆ ಪಕ್ಷಕ್ಕೆ ರಾಜೀನಾಮೆಯನ್ನೂ ನೀಡಿಲ್ಲ. ಹೀಗಾಗಿ ಇದು ಪಕ್ಷಾಂತರ ವಿರೋಧಿ ಕಾಯಿದೆಯಡಿ ನಿಷ್ಕರ್ಷೆಯಾಗಬೇಕಾದ ಪ್ರಕರಣವಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರವಿದ್ದಾಗ ಇದೇ ರೀತಿ 11 ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಹೈಕೋರ್ಟ್‌ ಈ ಕ್ರಮವನ್ನು ಎತ್ತಿ ಹಿಡಿದರೂ ಅನಂತರ ಸುಪ್ರೀಂ ಕೋರ್ಟ್‌ ಅನರ್ಹತೆ ನಿರ್ಧಾರವನ್ನು ರದ್ದುಗೊಳಿಸಿತ್ತು. ತಮಿಳುನಾಡಿನ ಈಗಿನ ಪರಿಸ್ಥಿತಿಗೂ ಕರ್ನಾಟಕದ ಹಿಂದಿನ ಪರಿಸ್ಥಿತಿಗೂ ಬಹಳಷ್ಟು ಸಾಮ್ಯತೆಗಳಿವೆ. ಈ ಪ್ರಕರಣದಲ್ಲಿ ಪಕ್ಷಾತೀತವಾಗಿ ವರ್ತಿಸಬೇಕಾಗಿದ್ದ ಸ್ಪೀಕರ್‌ ಸರಕಾರವನ್ನು ಉಳಿಸುವ ಸಲುವಾಗಿ ಸಂವಿಧಾನ ಮತ್ತು ಕಾನೂನನ್ನು ಗಾಳಿಗೆ ತೂರಿರುವುದು ಪ್ರಜಾತಂತ್ರಕ್ಕೆ ಭೂಷಣವಾಗಿರುವ ನಡತೆಯಲ್ಲ. ಅನರ್ಹಗೊಂಡಿರುವ ಶಾಸಕರಿಗೆ ತತ್‌ಕ್ಷಣವೇ ಶಾಸಕರ ಭವನವನ್ನು ತೆರವುಗೊಳಿಸಬೇಕೆಂದು ಆದೇಶಿಸಿರುವುದು ಸೇಡಿನ ಕ್ರಮದಂತೆ ಕಾಣಿಸುತ್ತಿದೆ. 

ಸದ್ಯದ ಬಲಾಬಲದ ಪ್ರಕಾರ ಬಹುಮತ ಸಾಬೀತುಪಡಿಸಲು 103 ಶಾಸಕ ಬಲ ಇದ್ದರೆ ಸಾಕಾಗುತ್ತದೆ. ಇಷ್ಟು ಶಾಸಕರು ಪಳನಿಸ್ವಾಮಿ ಜತೆಗಿರುವುದರಿಂದ ವಿಶ್ವಾಸಮತ ಗೆಲ್ಲುವ ಸಾಧ್ಯತೆಯಿದೆ. ಆದರೆ ಇತ್ತೀಚೆಗಿನ ಬೆಳವಣಿಗೆಗಳಿಂದಾಗಿ ಎಐಎಡಿಎಂಕೆ ಮತ್ತು ನಿರ್ದಿಷ್ಟವಾಗಿ ಪಳನಿಸ್ವಾಮಿ ಸರಕಾರದ ಮೇಲಿಟ್ಟಿರುವ ಜನರ ವಿಶ್ವಾಸ ಮಾತ್ರ ನಷ್ಟವಾಗಿದೆ.  ತನ್ನನ್ನು ಬೆಂಬಲಿಸುವ ಶಾಸಕರು ನಿಷ್ಠಾಂತರ ಮಾಡುವುದನ್ನು ತಡೆಯುವ ಸಲುವಾಗಿ ದಿನಕರನ್‌ ಅವರನ್ನು ಕರೆತಂದು ಮಡಿಕೇರಿಯ ಒಂದು ರೆಸಾರ್ಟ್‌ನಲ್ಲಿಟ್ಟಿದ್ದಾರೆ. ಸೆ. 20ರ ತನಕ ವಿಶ್ವಾಸಮತ ಯಾಚಿಸುವುದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಅನಂತರವೇ ಈ ಶಾಸಕರು ಚೆನ್ನೈಗೆ ಹೋಗಲಿದ್ದಾರೆ. ಅಧಿಕಾರದ ಅತೀವ ಲಾಲಸೆಯಿರುವ ದಿನಕರನ್‌ ಮತ್ತು ಶಶಿಕಲಾ ನಡೆಸುತ್ತಿರುವ ಚಟುವಟಿಕೆಗಳು ಸಭ್ಯ ರಾಜಕೀಯ ಪರಿಭಾಷೆಗೆ ಸರಿಹೊಂದುವಂತಿಲ್ಲ ಎನ್ನುವುದು ನಿಜವಾಗಿದ್ದರೂ ಶಾಸಕರು ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ತಡೆಯುವ ಸಲುವಾಗಿ ಸ್ಪೀಕರ್‌ ರಾಜಕೀಯ ಪಕ್ಷಪಾತದ ನಿರ್ಧಾರ ಕೈಗೊಂಡು ಶಾಸಕರನ್ನು ಅನರ್ಹಗೊಳಿಸಿರುವುದು ಮಾತ್ರ ಪ್ರಜಾಪ್ರಭುತ್ವದ ಆಶಯಕ್ಕೆ ಕೊಡಲಿಯೇಟು ನೀಡಿದಂತಾಗಿದೆ. ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಯಾವ ಮಟ್ಟಕ್ಕೂ ಇಳಿಯಲು ಹಿಂಜರಿಯುವುದಿಲ್ಲ ಎಂಬಂತೆ ಕಾಣಿಸುತ್ತಿದ್ದಾರೆ. ಹಂಗಾಮಿ ರಾಜ್ಯಪಾಲರಾಗಿರುವ ವಿದ್ಯಾಸಾಗರ ರಾವ್‌ ಅವರ ನಡೆಯೂ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಕಳೆದ ಏಳೆಂಟು ತಿಂಗಳಿಂದ ರಾಜಕೀಯ ಅಸ್ಥಿರತೆ ಇದ್ದರೂ ರಾಜ್ಯಪಾಲರು ನಿಗೂಢ ಮೌನವಹಿಸಿದ್ದಾರೆ.

ಕೇಂದ್ರದ ನರೇಂದ್ರ ಮೋದಿ ಸರಕಾರವೂ ರಾಜಕೀಯ ಅಸ್ಥಿರತೆಯಲ್ಲೇ ತನ್ನ ಲಾಭವನ್ನು ಲೆಕ್ಕಹಾಕುತ್ತಾ ಕದಡಿದ ನೀರಿನಲ್ಲಿ ಮೀನು ಹಿಡಿಯುವ ಪ್ರಯತ್ನದಲ್ಲಿರುವಂತೆ ಕಾಣಿಸುತ್ತಿದೆ. ಶಾಸಕರನ್ನು ಅನರ್ಹಗೊಳಿಸಿದ ಕ್ರಮ ನ್ಯಾಯಾಲಯದ ಮೆಟ್ಟಿಲೇರುವುದು ಖಚಿತ. ನ್ಯಾಯಾಲಯ ಈ ವಿವಾದವನ್ನು ಇತ್ಯರ್ಥಗೊಳಿಸುವ ತನಕ ವಿಶ್ವಾಸಮತ ಯಾಚನೆ ಸಾಧ್ಯವಿಲ್ಲ. ಶಾಸಕರು ತಮ್ಮ ಸರಕಾರಕ್ಕೆ ನೀಡಿರುವ ಬೆಂಬವನ್ನು ಹಿಂದೆಗೆದುಕೊಂಡರೆ ಅವರ ಸದಸ್ಯತ್ವ ಆಯಾಚಿತವಾಗಿ ರದ್ದಾಗುತ್ತದೆಯೇ ಎನ್ನುವುದನ್ನು ಇನ್ನು ನ್ಯಾಯಾಲಯ ನಿರ್ಧರಿಸಬೇಕು. ಆದರೆ ಈಗಾಗಲೇ ಮೇಲ್ಪಂಕ್ತಿಯಾಗುವ ತೀರ್ಪು ಇರುವುದರಿಂದ ನ್ಯಾಯಾಲಯದ ನಿರ್ಧಾರ ಪಳನಿಸ್ವಾಮಿ ಸರಕಾರಕ್ಕೆ ಪ್ರತಿಕೂಲವಾಗುವ ಸಾಧ್ಯತೆಯೇ ಹೆಚ್ಚಿದೆ. ಏನೇ ಆದರೂ ಇತ್ತೀಚೆಗಿನ ದಿನಗಳಲ್ಲಿ ರಾಜಕೀಯ ನಾಯಕರು ಅಧಿಕಾರಕ್ಕಾಗಿ ಅನುಸರಿಸುತ್ತಿರುವ ಅಡ್ಡಹಾದಿಗಳು ರಾಜಕೀಯದ ನೈತಿಕತೆಯನ್ನು ಅಧಃಪತನಕ್ಕಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next