Advertisement

ರಕ್ಷಣಾ ವಲಯದಲ್ಲಿ ಖಾಸಗಿ ಸಹಭಾಗಿತ್ವ ದುಪ್ಪಟ್ಟು : ಪರಿಕ್ಕರ್‌

03:45 AM Feb 15, 2017 | Team Udayavani |

ಬೆಂಗಳೂರು: ದೇಶದ ರಕ್ಷಣಾ ವಲಯದಲ್ಲಿ ಖಾಸಗಿ ಸಹಭಾಗಿತ್ವವನ್ನು ದುಪ್ಪಟ್ಟುಗೊಳಿಸುವ ಮೂಲಕ ಹೆಚ್ಚಿನ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ “ಮೇಕ್‌ ಇನ್‌ ಇಂಡಿಯಾ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, 10 ವರ್ಷಗಳ ಹಿಂದೆ ರಕ್ಷಣಾ ವಲಯದಲ್ಲಿ ಖಾಸಗಿ ಸಹಭಾಗಿತ್ವದ ಬಗ್ಗೆ ಪ್ರಸ್ತಾಪ ಮಾಡಿದರೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿತ್ತು.

Advertisement

ಆದರೆ, ಈಗ ಜನರ ಮನಸ್ಥಿತಿ ಬದಲಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಖಾಸಗಿಯವರಿಂದ ಬಂಡವಾಳ ಹೂಡಿಕೆಯಾಗುತ್ತಿದೆ. ಆ ಮೂಲಕ, ಯುದ್ಧ ವಿಮಾನಗಳು ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡುವ ಸಾಕಷ್ಟು ಮಿಲಿಟರಿ ಉಪಕರಣಗಳು ತಯಾರಾಗುತ್ತಿವೆ. ಇದು ದೇಶದ ರಕ್ಷಣಾ ವ್ಯವಸ್ಥೆಯನ್ನು ಭವಿಷ್ಯದಲ್ಲಿ ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದರು.

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌)ನಲ್ಲಿ ಈಗ ಲಘು ಯುದ್ಧ ವಿಮಾನಗಳನ್ನು ತಯಾರಿಸಲಾಗುತ್ತಿದೆ. ಆದರೆ, ಎಚ್‌ಎಎಲ್‌ನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಡಿಮೆ ಸಾಮರ್ಥ್ಯ ಹೊಂದಿರುವ ನಾಗರಿಕ ವಿಮಾನಗಳನ್ನು ತಯಾರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಏರ್‌ ಬಸ್‌ ಸೇರಿದಂತೆ ಕೆಲವೊಂದು ವಿದೇಶಿ ವಿಮಾನ ತಯಾರಿಕಾ ಕಂಪನಿಗಳು ಈ ಬಗ್ಗೆ ಆಸಕ್ತಿ ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ ವಿದೇಶಿ ಕಂಪನಿಗಳ ಸಹಭಾಗಿತ್ವದಲ್ಲಿ ಎಚ್‌ಎಎಲ್‌ ಲಘು ನಾಗರಿಕ ವಿಮಾನಗಳನ್ನು ತಯಾರಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಲಿದೆ ಎಂದು ಹೇಳಿದರು.

ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ. ಅಕºರ್‌ ಮಾತನಾಡಿ, ಆರ್ಥಿಕವಾಗಿ ನಮ್ಮ ದೇಶ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ. ಆದರೆ, ನಮ್ಮ ದೇಶದ ಅರ್ಥಿಕ ಪ್ರಗತಿಯ ಲಾಭವು ಬಡವರ್ಗವನ್ನು ತಲುಪಬೇಕು. ಆ ಮೂಲಕ ದೇಶದಲ್ಲಿ ಬಡತನ ನಿರ್ಮೂಲನೆಯಾಗಬೇಕು. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಮೂಲಕ ಬಡವರ್ಗದ
ಜೀವನ ಮಟ್ಟ ಸುಧಾರಣೆಯಾಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ .

Advertisement

Udayavani is now on Telegram. Click here to join our channel and stay updated with the latest news.

Next