ಬೆಂಗಳೂರು: ಎಂಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದೀನ್ ಓವೈಸಿ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕೋಮುವಾದಿ ಎಂದು ಕರೆದಿರುವ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಅವರು ಹೊಟ್ಟೆಕಿಚ್ಚು ಮತ್ತು ಸೋಲಿನ ಭೀತಿಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಕುಮಾರಸ್ವಾಮಿ, ಎಂಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದೀನ್ ಒವೈಸಿ ಜೆಡಿಎಸ್‌ಗೆ ಬೆಂಬಲ ನೀಡುತ್ತಿದ್ದಂತೆ ಕೆರಳಿರುವ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ನಮ್ಮನ್ನು ಮತ್ತೂಮ್ಮೆ ಕೋಮುವಾದಿಗಳು ಎಂದು ಕರೆದಿದ್ದಾರೆ.
ಈ ಮೂಲಕ ಜೆಡಿಎಸ್ ಮೇಲೆ ಮತ್ತದೇ ಸವಕಲು ಆರೋಪ ಮಾಡಿದ್ದಾರೆ. ಈ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಬಿ ಟೀಂ ಎಂದವರೇ ಈಗ ಮುಸ್ಲಿಂ ಮುಖಂಡನ ಬೆಂಬಲ ಸಿಗುತ್ತಲೇ ಒಂದೇ ಸಲಕ್ಕೆ ನಮ್ಮನ್ನು, ನಮ್ಮ ಪಕ್ಷವನ್ನು ಮುಸ್ಲಿಂ ಮೂಲಭೂತವಾದಕ್ಕೆ ಗಂಟು ಬಿಗಿಯಲು ನಿಂತಿದ್ದಾರೆ ಎಂದರು.
ಟೆಂಪಲ್ ರಸ್: ಬಹುಶಃ ಕಾಂಗ್ರೆಸ್ ಪಂಥ ಬದಲಿಸಿರಬಹುದು. ಕಾಂಗ್ರೆಸ್ ನಾಯಕರ ಈಗಿನ ಟೆಂಪಲ್ ರನ್ ಅದೇ ಅಲ್ಲವೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಹಿಂದಿನಿಂದಲೂ ಮುಸ್ಲಿಮರ ಪರ ಇದ್ದಂತೆ ನಟಿಸುತ್ತಿದ್ದ ಕಾಂಗ್ರೆಸ್‌ನವರು ಈಗ ಹಿಂದೂಗಳ ಪರ ಇದ್ದಂತೆ ನಟಿಸುತ್ತಿದ್ದಾರೆ. ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಈ ಹಿಂದೆ ಹೇಳಿದಂತೆ ನಾವು ಆರ್‌ಎಸ್‌ಎಸ್ ಮಾದರಿಯ ಕೇಸರಿ ಭಾವನೆ ಹೊಂದಿದ್ದರೆ
ದೇಶದ ಮುಸ್ಲಿಂ ಮುಖಂಡರೊಬ್ಬರು ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡಲು ಸಾಧ್ಯವೇ? ನಮ್ಮಲ್ಲಿ ಜಾತ್ಯತೀತ ನಿಲುವು ಭದ್ರವಾಗಿರುವ ಕಾರಣಕ್ಕೆ ತಾನೇ ಅವರೂ ನಿರುಮ್ಮಳತೆಯಿಂದ ಬೆಂಬಲ ನೀಡಿರುವುದು? ಹೀಗಿದ್ದೂ ನಮ್ಮನ್ನು ಕೋಮುವಾದಿಗಳು ಎಂದು ಕರೆಯುತ್ತಿರುವ ಕಾಂಗ್ರೆಸಿಗರಲ್ಲಿ ಹೊಟ್ಟೆ ಉರಿ ಪ್ರವೃತ್ತಿ ಎದ್ದು ಕಾಣುತ್ತಿದ್ದು, ಸೋಲಿನ ಭೀತಿ ಕಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಎಲ್ಲ ವರ್ಗದ ಬೆಂಬಲ: ಎಲ್ಲ ಧರ್ಮಗಳನ್ನು ಒಟ್ಟಿಗೆ ಕರೆದೊಯ್ಯುತ್ತಿರುವ ಜೆಡಿಎಸ್‌ಗೆ ಎಲ್ಲ ವರ್ಗಗಳ ಬೆಂಬಲ ಸಿಕ್ಕಿದೆ. ಇದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದಿರುವ ಕುಮಾರಸ್ವಾಮಿ, ನಾವು ಜಾತ್ಯತೀತರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಿಲುವನ್ನು ಮೆಚ್ಚಿ ಈವರೆಗೆ ಯಾವುದಾದರೂ ಒಂದು ಸಣ್ಣ ಪಕ್ಷವಾದರೂ ಬೆಂಬಲ ಸೂಚಿಸಿದೆಯೇ ಎಂದು ಪ್ರಶ್ನಿಸಿದ್ದಾರೆ. ಎಲ್ಲದೆ, ಜೆಡಿಎಸ್ ಕೋಮು ಸೌಹಾರ್ದದ ಪರ್. ಕಾಂಗ್ರೆಸ್ ರೀತಿ ಬೇಕಾದ ಕಡೆ ಬೇಕಾದ ಕೋಮಿನ ಕಡೆ ಇರುವವರು ನಾವಲ್ಲ ಎಂದು ಕಿಡಿ ಕಾರಿದ್ದಾರೆ.