ಮೈಸೂರು: ನನ್ನಿಂದ ಕೆಲಸ ಮಾಡಿಸಿಕೊಂಡ ಶಿಕ್ಷಕರೇ ನನ್ನ ವಿರುದ್ಧ ಕೆಲಸ ಮಾಡಿರುವುದರಿಂದ ನಾನು ಸೋತಿದ್ದು, ಸೋಲಿನ ಆಘಾತದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಎಂ.ಲಕ್ಷ್ಮಣ್ ಕಣ್ಣೀರಿಟ್ಟರು.
ನಾನು ಕಳೆದ ಆರು ವರ್ಷಗಳಿಮದ ಶಿಕ್ಷಕರ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಹೀಗಿದ್ದರೂ ಪ್ರಬುದ್ಧ ಮತದಾರರಾದ ಶಿಕ್ಷಕರೇ ಜಾತಿ-ಆಮಿಷಗಳಿಗೆ ಒಳಗಾಗಿ ಮತಚಲಾಸಿರುವುದು ನನ್ನ ಸೋಲಿಗೆ ಕಾರಣವಾಗಿದ್ದು, ಇದರಿಂದ ತೀವ್ರ ನೋವಾಗಿದ್ದು,
ಸೋಲಿನ ಅಘಾತದಿಂದ ಹೊರ ಬರಲಾಗುತ್ತಿಲ್ಲ. ರಾಜಕೀಯಕ್ಕೆ ಬಂದು ಹಣ, ಆಸ್ತಿ, ಒಡವೆಗಳನ್ನು ಕಳೆದುಕೊಂಡಿದ್ದು, ಜೀವನ ನಡೆಸಲು ಕಷ್ಟವಾಗುವ ಸ್ಥಿತಿಗೆ ಬಂದಿದ್ದೇನೆ. ಇನ್ನೂ ಮುಂದೆ ಜೀವನ ಕಡೆಗೂ ಗಮನ ಹರಿಸುತ್ತೇನೆ ಎಂದು ಗುರುವಾರ ಸುದ್ದಿಗೋಷಿಯಲ್ಲಿ ಭಾವುಕರಾಗಿ ಕಣ್ಣೀರಿಟ್ಟರು.
ಹೋರಾಟ ಮಾಡುವೆ: ರಾಜಕೀಯಕ್ಕೆ ಬಂದು ತಪ್ಪು ಮಾಡಿದೆ, ಇಲ್ಲಿ ಕೆಲಸ ಮಾಡುವವರಿಗೆ ನೆಲೆಯಿಲ್ಲ ಎಂಬುದನ್ನು ಕಳೆದ 4 ಚುನಾವಣೆಗಳಿಂದ ಅರಿತಿದ್ದೇನೆ. ಈ ಹಿನ್ನೆಲೆಯಲ್ಲಿ ಚುನಾವಣೆಗೂ ಮೊದಲೇ ಹೇಳಿದಂತೆ ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.
ಆದರೆ ಚುನಾವಣೆಯಲ್ಲಿ ಸೋತಿದ್ದರೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ, ಹೋರಾಟ ಮಾಡಲು ಸಿದ್ದನಾಗಿದ್ದು, ಈ ನಿಟ್ಟಿನಲ್ಲಿ ಹೋರಾಟವನ್ನು ಮುಂದುವರಿಸುತ್ತೇನೆ. ಚುನಾವಣೆಗೂ ಮುನ್ನ ಜೆಡಿಎಸ್ ಘೋಷಿಸಿರುವಂತೆ ರಾಷ್ಟ್ರೀಯ ವಿಮಾ ಯೋಜನೆ ರದ್ಧತಿ (ಎಂಪಿಎಸ್), ಕಾಲಾಮಿತಿಗೆ ಭರ್ತಿಗೆ ಸರ್ಕಾರದ ಅನುಮೋದನೆ, ಅನುದಾನಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನ ನೀಡಬೇಕಿದೆ.
ಒಂದೊಮ್ಮೆ ಈ ಆಶ್ವಾಸನೆಗಳನ್ನು ಈಡೇರಿಸದಿದ್ದರೆ ಹೋರಾಟ ಮಾಡಲಿದ್ದು, ಇದು ಸಮ್ಮಿಶ್ರ ಸರ್ಕಾರವಾದ ಕಾರಣ ನಮ್ಮನ್ನು ಕಡೆಗಣಿಸಿ, ಏಕ ಪಕ್ಷೀಯ ನಿರ್ಧಾರ ಕೈಗೊಂಡರೆ ಹೋರಾಟ ನಡೆಸಲಿದ್ದೇನೆ. ನಾನು ಹೋರಾಟ ಮಾಡುವ ವಿಷಯವನ್ನು ಸಿದ್ದರಾಮಯ್ಯ ಗಮನಕ್ಕೆ ತಂದಿದ್ದು, ಇದಕ್ಕೆ ಅನುಮತಿಯು ಸಿಕ್ಕಿದೆ ಎಂದರು.
ಮಂಡಿಯೂರಿ ನಮನ: ಚುನಾವಣೆಯಲ್ಲಿ ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಮೈಸೂರು ಗ್ರಾಮಾಂತರ ಪ್ರದೇಶಗಳಿಂದ ಹೆಚ್ಚು ಮತ ಬಂದಿವೆ. ಆದರೆ ಮೈಸೂರು ನಗರದಲ್ಲಿ ತಮಗೆ 2ನೇ ಪ್ರಾಶಸ್ತ್ಯದ ಮತಗಳು ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಕ್ಷ್ಮಣ್, ತಮಗೆ ಮತ ನೀಡಿದ ಹಾಗೂ ನೀಡದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಮಂಡಿಯೂರಿ ನಮಸ್ಕರಿಸಿ, ಕಣ್ಣೀರಿಡುತ್ತಲೇ ಹೊರನಡೆದರು.